Asianet Suvarna News Asianet Suvarna News

Bellary Utsav: ವರ್ಣಮಯ ಲೋಕ ತೆರೆದಿಟ್ಟಫಲಪುಷ್ಪ ಪ್ರದರ್ಶನ

ಬಳ್ಳಾರಿ ಉತ್ಸವದ ಅಂಗವಾಗಿ ಶನಿವಾರ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಫಲಪುಷ್ಪ ಪ್ರದರ್ಶನದಲ್ಲಿ ಫಲಪುಷ್ಪಗಳಲ್ಲಿ ಅರಳಿರುವ ನಾನಾ ಕಲಾಕೃತಿಗಳಿಗೆ ನಗರದ ಜನತೆ ಫಿದಾ ಆಗುವಂತೆ ಮಾಡಿತ್ತು.  ಲಕ್ಷಾಂತರ ವಿವಿಧ ಬಗೆಯ ಹೂವುಗಳ ಜತೆಗೆ ತರಕಾರಿ, ಹಣ್ಣು, ಗಿಡಗಳು ಕಣ್ಮನ ಸೆಳೆಯುವಂತೆ ಮಾಡಿದವು.

Fruit and flower show in Bellary Utsav bellary rav
Author
First Published Jan 22, 2023, 7:09 AM IST

-ಸಿದ್ಧಲಿಂಗಸ್ವಾಮಿ ವೈ.ಎಂ.

ಬಳ್ಳಾರಿ (ಜ.22) : ಬಿಸಿಲನಾಡು ಬಳ್ಳಾರಿಯಲ್ಲಿ ಬಿಸಿಲಿನಿಂದ ಬಸವಳಿದ ಜನರಿಗೆ ಫಲ ಪುಷ್ಪದ ರಸದೌತಣದೊಂದಿಗೆ ಮೋಹಕ ವರ್ಣಮಯ ಲೋಕವನ್ನೇ ತೆರೆದಿಟ್ಟಿದೆ ಬಳ್ಳಾರಿ ಉತ್ಸವದ ಫಲ ಪುಷ್ಪ ಪ್ರದರ್ಶನ. ಹೌದು, ಬಳ್ಳಾರಿ ಉತ್ಸವದ ಅಂಗವಾಗಿ ಶನಿವಾರ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಫಲಪುಷ್ಪ ಪ್ರದರ್ಶನದಲ್ಲಿ ಫಲಪುಷ್ಪಗಳಲ್ಲಿ ಅರಳಿರುವ ನಾನಾ ಕಲಾಕೃತಿಗಳಿಗೆ ನಗರದ ಜನತೆ ಫಿದಾ ಆಗುವಂತೆ ಮಾಡಿತ್ತು.

ಉತ್ಸವದ ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಬೃಹತ್‌ ಜರ್ಮನ್‌ ಟೆಂಟ್‌ ನಿರ್ಮಿಸಲಾಗಿತ್ತು, ಒಳಗಡೆ ಪ್ರವೇಶಿಸುತ್ತಿದ್ದಂತೆಯೇ ಎದುರುಗಡೆ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನ ಪುಷ್ಪ ಕಲಾಕೃತಿಯು ಅದ್ಭುತವಾಗಿ ಮೂಡಿಬಂದಿದೆ. ಪ್ಲೈವುಡ್‌ ಹಾಗೂ ಥರ್ಮಾಕೋಲ್‌ ಬಳಸಿ, ದೇವಸ್ಥಾನ ಸೃಷ್ಟಿಸಲಾಗಿದ್ದು, ಇನ್ನು ಮುಂಭಾಗದಲ್ಲಿ ಶ್ರೀ ಕನಕ ದುರ್ಗಮ್ಮನ ವಿಗ್ರಹ ಮತ್ತು ಎದುರುಗಡೆ ಮಹಿಷಾಸುರನ ವಿಗ್ರಹಗಳು ಇರಿಸಲಾಗಿದ್ದು, ಜತೆಗೆ ಬಗೆಬಗೆಯ ಹೂಗಳಿಂದ ಸುಗ್ಗಿ ರಂಗೋಲಿಯನ್ನು ಹಾಕಲಾಗಿದೆ. ಎಡ ಮತ್ತು ಬಲಬದಿಗಳಲ್ಲಿ ಉದ್ದ ಗರಿ ಬಿಚ್ಚಿ ನರ್ತಿಸುತ್ತಿರುವ ನವಿಲು ಕಲಾಕೃತಿಗಳನ್ನು ಪುಷ್ಪಗಳಿಂದ ಅಲಂಕರಿಸಿ ಇರಿಸಿರುವುದು ದೈವೀ ಭಕ್ತರಿಗೆ ಹಬ್ಬದ ವಾತಾವರಣನ್ನೇ ಸೃಷ್ಟಿಸುವಂತೆ ಮಾಡಿದೆ.

Bellary: ಹೂವಲ್ಲೇ ಅರಳಿತು ಕನಕದುರ್ಗಮ್ಮ ದೇವಾಲಯ, ಪಂಜುರ್ಲಿ ದೈವ

ತೋಟಗಾರಿಕೆ ಇಲಾಖೆ ವತಿಯಿಂದ ಕಳೆದ ಮೂರು ದಿನಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿತ್ತು, ಶನಿವಾರ ಬೆಳಗಿನಜಾವ ಅಂತಿಮ ಹಂತದ ಕಾರ್ಯ ಪೂರ್ಣಗೊಂಡಿತು. ಲಕ್ಷಾಂತರ ವಿವಿಧ ಬಗೆಯ ಹೂವುಗಳ ಜತೆಗೆ ತರಕಾರಿ, ಹಣ್ಣು, ಗಿಡಗಳು ಕಣ್ಮನ ಸೆಳೆಯುವಂತೆ ಮಾಡಿದವು.

ಆಕರ್ಷಿಸಿದ ಕಾಂತಾರ ಚಲನಚಿತ್ರದ ಪಂಜುರ್ಲಿ ದೈವ ಕಲಾಕೃತಿ:

ಸುಮಾರು 6 ರಿಂದ 8 ಗಂಟೆಗಳ ಕಾಲ ಐದು ಜನರ ತಂಡದೊಂದಿಗೆ ನಾನಾ ಬಣ್ಣಗಳ ಗುಲಾಬಿ, ಜರ್ಬೆರಾ, ಆ್ಯಸ್ಪರಾಗಸ್‌, ಚೆಂಡು, ಹೊಂಬಾಳೆ, ಬಾಳೆದಿಂಡುಗಳಿಂದ ರೂಪಗೊಂಡ ಕಾಂತಾರ ಚಲನಚಿತ್ರದ ಪಂಜುರ್ಲಿ ದೈವ ಕಲಾಕೃತಿಯು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುವಂತೆ ಮಾಡಿ ಆಕರ್ಷಿಸಿತು. ಜತೆಗೆ ಜನಪ್ರಿಯ ವರಾಹ ರೂಪಂ ಎಂಬ ಗೀತೆಯು ನೋಡುಗರನ್ನು ಮತ್ತಷ್ಟುಗಮನ ಸೆಳೆಯುವಂತೆ ಮಾಡಿತು.

ಆಕರ್ಷಿಸಿದ ದಿ.ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ:

ಕಲಾವಿದ ಬಿ.ಸಿ.ಶಿವಕುಮಾರ್‌ ಎಂಬುವವರು ಪಿಓಪಿ ಬಳಸಿ ತಯಾರಿಸಿರುವ ನಟ ಡಾ. ದಿ.ಪುನೀತ್‌ ರಾಜ್‌ಕುಮಾರ್‌ ಅವರ ಪುತ್ಥಳಿಯನ್ನು ಬೆಂಗಳೂರಿನಿಂದ ತರಲಾಗಿದ್ದು, ಅಭಿಮಾನಿಗಳನ್ನು ಆಕರ್ಷಿಸುವಂತೆ ಮಾಡಿತು. ಸೇವಂತಿ, ಆ್ಯಂಥೋರಿಯಾ, ಆ್ಯಸ್ಪರಾಗಸ್‌, ಡೈರಿ ಹೂಗಳು ಸೇರಿದಂತೆ ಬಗೆಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು.

ಸೆಲ್ಫಿ ಪಾಯಿಂಟ್‌ಗೆ ಮುಗಿಬಿದ್ದ ಜನ:

ಪ್ರದರ್ಶನ ಮುಂಭಾಗದಲ್ಲಿ ಕೆಂಪು ಬಣ್ಣದ ಜರ್ಬೆರಾ, ಜಿಫ್ಸ್‌ಫಿಲ್ಲಾ, ಆ್ಯಸ್ಪರಾಗಸ್‌ ಹೂಗಳಿಂದ ಸೆಲ್ಫಿ ಪಾಯಿಂಟ್‌ ಆಗಿ ಹೃದಯಾಕಾರದ ಹೂವಿನ ಕಮಾನು ಸೆಲ್ಫೀ ಪ್ರಿಯರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಯುವಕ-​ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುದು ಎಂದು ಮುಗಿಬಿದ್ದಿದು ಕಂಡುಬಂದಿತು.

ಗಮನ ಸೆಳೆದ ಗಡಿಯಾರ ಸ್ತಂಭ

ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ಗಡಿಯಾರ ಸ್ತಂಭದ ಕಲಾಕೃತಿಯನ್ನು ಪ್ಲೈವುಡ್‌ ಬಳಸಿ ತಯಾರಿಸಿ, ಅದನ್ನು ಗಾಜಿನ ಡಬ್ಬಿಯಲ್ಲಿ ಇರಿಸಲಾಗಿತ್ತು, ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಜನರು ಸುಂದರವಾದ ಗಡಿಯಾರದ ಸ್ತಂಭ ಕಣ್ತುಂಬಿಕೊಂಡರು.

ಬಿಸಿಲೇ ಹೆಚ್ಚಿರುವ ನಮ್ಮ ಬಳ್ಳಾರಿಯಲ್ಲಿ ಈ ಫಲಪುಷ್ಪ ಪ್ರದರ್ಶನ ಕಣ್ಣಿಗೆ ತಂಪು ಮನಸ್ಸಿಗೆ ಇಂಪು ನೀಡಿದೆ, ಬಳ್ಳಾರಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿ ಸಂತಸ ಉಂಟುಮಾಡಿದೆ.

-ಲಕ್ಷ್ಮಿ, ಸ್ಥಳೀಯ ನಿವಾಸಿ.

1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

ಬಳ್ಳಾರಿ ಉತ್ಸವದ ಅಂಗವಾಗಿ ಶನಿವಾರ ನಗರದ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಕಬ್ಬನ್‌ಪಾರ್ಕ್ನಲ್ಲಿ ನಡೆಯುವ ಪುಷ್ಪ ಪ್ರದರ್ಶನ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಜಿಲ್ಲಾ ಉತ್ಸವಕ್ಕೆ ವಿಶೇಷ ಮೆರಗು ನೀಡಿದೆ ಎಂದರು.

ಈ ವೇಳೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್‌ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್‌, ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಪಿ.ಭೋಗಿ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios