Asianet Suvarna News Asianet Suvarna News

Bellary: ಹೂವಲ್ಲೇ ಅರಳಿತು ಕನಕದುರ್ಗಮ್ಮ ದೇವಾಲಯ, ಪಂಜುರ್ಲಿ ದೈವ

ಬಳ್ಳಾರಿ ಉತ್ಸವದಲ್ಲಿ ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ
ಗಮನ ಸೆಳೆದ ಮರಳು ಕಲಾಕೃತಿ
ಪುಷ್ಪದಲ್ಲಿ ಅರಳಿದ ನಗರದ ಅಧಿದೇವತೆ ಕನಕದುರ್ಗಮ್ಮ ದೇವಾಲಯ

phala pushpa pradarshana in Bellary is attracting thousands of visitors skr
Author
First Published Jan 21, 2023, 5:32 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಮೊಟ್ಟಮೊದಲ ಬಾರಿಗೆ ಬಳ್ಳಾರಿಯಲ್ಲಿ ನಡೆಯುತ್ತಿರೋ ಬಳ್ಳಾರಿ ಉತ್ಸವದಲ್ಲಿ  ಫಲಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ಅದರಲ್ಲೂ ಪುಷ್ಪದಲ್ಲಿ ಅರಳಿದ ಬಳ್ಳಾರಿ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನ ಪುಷ್ಪ ಕಲಾಕೃತಿ ಹಾಗೂ  ಕಾಂತಾರ ಚಲನಚಿತ್ರ ಪಂಜುರ್ಲಿ ದೈವ ಜನಮೆಚ್ಚುಗೆ ಪಡೆದಿದೆ. 
ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಚಾಲನೆ ನೀಡಿದರು.
ಲಾಲ್‌ಬಾಗ್ ಮತ್ತು ಕಬ್ಬನ್‍ಪಾರ್ಕ್‍ನಲ್ಲಿ ನಡೆಯುವ ಪುಷ್ಪ ಪ್ರದರ್ಶನ ರೀತಿಯಲ್ಲಿ ಬಳ್ಳಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಜಿಲ್ಲಾ ಉತ್ಸವಕ್ಕೆ ವಿಶೇಷ ಮೆರಗು ನೀಡಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಲಾಲ್ ಬಾಗ್ ಮಾದರಿಯ ಫಲಪುಷ್ಪ ಪ್ರದರ್ಶನ
ಬಳ್ಳಾರಿ ಉತ್ಸವದ ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಬೃಹತ್ ಆಕಾರದ ಜರ್ಮನ್ ಟೆಂಟ್ ತಲೆಯೆತ್ತಿ ನಿಂತಿದ್ದು, ಅಲ್ಲಿ ವಿವಿಧ ಫಲಪುಷ್ಪಗಳಿಂದ ತಯಾರಿಸಿದ ಆಕೃತಿಗಳು ಜನರನ್ನು ವಿಸ್ಮಯಗೊಳಿಸುತ್ತಿವೆ. 

1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

ಬಳ್ಳಾರಿಯ ನಗರದ ಅಧಿದೇವತೆ ದೇವಸ್ಥಾನ ಮಾದರಿಯು ಪುಷ್ಪದಲ್ಲಿ ಅರಳಿದ್ದು, ನೋಡುಗರಿಗೆ ಆಸಕ್ತಿ ಮೂಡಿಸುತ್ತಿದೆ. ಕಲ್ಲಂಗಡಿ ಹಣ್ಣುಗಳನ್ನು ಬಳಸಿ ನಟ ಪುನೀತ ರಾಜಕುಮಾರ್ ಅವರ ಬಾಲ್ಯದಿಂದ ಹಿಡಿದು ಇತ್ತೀಚೆಗಿನ ವರೆಗಿನ ಚಿತ್ರಗಳನ್ನು ರಚಿಸಲಾಗಿದೆ. ಜೊತೆಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಮಹಾಪುರುಷರು, ರಾಜಕುಮಾರ, ಅಬ್ದುಲ್ ಕಲಾಂ, ಡಾ.ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಭಗತ್‍ಸಿಂಗ್, ಛತ್ರಪತಿ ಶಿವಾಜಿ, ವಿಶ್ವಗುರು ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ವೀರೇಂದ್ರ ಹೆಗ್ಗಡೆಯವರು, ತಿರುಪತಿ ತಿಮ್ಮಪ್ಪ, ಈಶ್ವರ, ಗಣಪ, ಜಿಂಕೆಗಳು ವಿವಿಧ ಹಣ್ಣುಗಳಲ್ಲಿ ಕಲಾವಿದರ ಕೈಚಳಕದಿಂದ ಸುಂದರವಾಗಿ ಅರಳಿವೆ. ತೆಂಗಿನ ಕಾಯಿ, ಸಿಪ್ಪೆ ಹಾಗೂ ನಾರಿನಲ್ಲಿ ಅರಳಿದ ಗಜರಾಜ, ಆಮೆ, ಸರ್.ಎಂ ವಿಶ್ವೇಶ್ವರಯ್ಯ, ಕ್ಷಿಪಣಿ ಮಾನವ ಅಬ್ದುಲ್ ಕಲಾಂ, ಗೌತಮಬುದ್ಧ ಕಲಾಕೃತಿ ಯುವಜನರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿವೆ.
ಕಬ್ಬು ಹಾಗೂ ಅದರ ಸಿಪ್ಪೆಯಲ್ಲಿ ಮೂಡಿಬಂದ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕಲಾಕೃತಿ, ಹೂಗಳಲ್ಲಿ ಮೂಡಿಬಂದ ಬಾತುಕೋಳಿ, ಕಾಂತಾರ ಚಲನಚಿತ್ರದ ಪಂಜುರ್ಲಿ ದೈವ ಕಲಾಕೃತಿ,  ಬಾಳೆ ದಿಂಡು ಹಾಗೂ ಎಲೆ ಹೂವಿನಲ್ಲಿ ನಿರ್ಮಿಸಿದ ಗುಡಿ ಗೋಪುರ, ಕನ್ನಡ ನಾಡಿನ ನಕ್ಷೆಯಲ್ಲಿ ಮೂಡಿದ ಹೂಗಳ ಚಿತ್ತಾರ ಆಕರ್ಷಣೀಯವಾಗಿವೆ.

ಮೇಕ್ ಇನ್ ಇಂಡಿಯಾ ಪರಿಕಲ್ಪನೆ
ಫಲಪುಷ್ಪ ಪ್ರದರ್ಶನದಲ್ಲಿ ಮೇಕ್ ಇನ್ ಇಂಡಿಯಾ, ಜಿ20 ಶೃಂಗ ಸಭೆ, ಐಎನ್‍ಎಸ್ ವಿಕ್ರಾಂತ್, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉಕ್ರೇನ್  ಯುದ್ದ ಕುರಿತ ಸಂದೇಶ "ಇದು ಯುದ್ದ ಕಾಲವಲ್ಲ" ಎಂಬುದು ದೇಶ ಜಾಗತಿಕವಾಗಿ ಪ್ರಗತಿ ಹೊಂದುತ್ತಿರುವುದನ್ನು ಅನಾವರಣಗೊಳಿಸಿರೋದು ವಿಶೇಷವಾಗಿತ್ತು.

Vasant Panchami 2023: ತಾಯಿ ಸರಸ್ವತಿ ಜನಿಸಿದ್ದು ಭಾರತದ ಈ ಕಟ್ಟಕಡೆಯ ಹಳ್ಳಿಯಲ್ಲಿ!

ಮರಳಿನಲ್ಲಿ ಅರಳಿದ ಐತಿಹಾಸಿಕ ಬಳ್ಳಾರಿ ಸ್ಮಾರಕಗಳು
ಬಿಸಿಲೂರು ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಬಳ್ಳಾರಿ ಜಿಲ್ಲಾ ಉತ್ಸವದಲ್ಲಿ ಮರಳು ಕಲಾಕೃತಿ ಶಿಲ್ಪಿಗಳ ಕೈಚಳಕದಲ್ಲಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಗರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅದ್ಭುತವಾಗಿ ಅರಳಿವೆ. 
ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ಮಿಸೈಲ್ ಮ್ಯಾನ್ ಎಂದು ಪ್ರಖ್ಯಾತರಾಗಿದ್ದ ಎ.ಪಿ.ಜೆ‌.ಅಬ್ದುಲ್ ಕಲಾಂ ಮರಳು ಕಲಾ ಕೃತಿ ಸೇರಿದಂತೆ ಜಿಲ್ಲೆಯ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಕುರಗೋಡು ದೊಡ್ಡ ಬಸವೇಶ್ವರ, ಬಳ್ಳಾರಿ ಕೋಟೆಯನ್ನು ಅತ್ಯಂತ ನಾಜೂಕು ಹಾಗೂ ಅಚ್ಚುಕಟ್ಟಾಗಿ ಕಲಾಕೃತಿಗಳನ್ನು ಬಿಡಿಸಲಾಗಿದೆ. 
ಜಿಲ್ಲಾ ಉತ್ಸವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಮರಳು ಶಿಲ್ಪ ಕಲಾಕೃತಿಗಳ ಎದುರು ಜನರು ತಂಡೋಪತಂಡವಾಗಿ ಆಗಮಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. 
ಮರಳು ಶಿಲ್ಪಕಲಾಕೃತಿಗಳ ರಚನೆಗಾಗಿ ಸುಮಾರು 55 ಟನ್ ಮರಳು ಬಳಕೆ ಮಾಡಲಾಗಿದೆ. ಕಲಾಕೃತಿಗಳ ರಚನೆಗೂ ಮುನ್ನ ಮರಳು ಶಿಲ್ಪ ಕಲಾವಿದರ ತಂಡವು ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳಿಗೆ ಭೇಟಿ, ಸೂಕ್ಷ್ಮವಾಗಿ ಗಮನಿಸಿ, ಸ್ಮಾರಕಗಳ ಮಹತ್ವ ಸಾರುವ ನಿಟ್ಟಿನಲ್ಲಿ ಮರಳು ಕಲಾಕೃತಿಗಳ ರಚನೆ ಮಾಡಲಾಗಿದೆ ಎನ್ನುತ್ತಾರೆ ಅಂತರ ರಾಷ್ಟ್ರೀಯ ಮರಳು ಶಿಲ್ಪಿ ಕಲಾವಿದ ನಾರಾಯಣ್ ಸಾಹು.

Follow Us:
Download App:
  • android
  • ios