ಸಿಲ್ಕ್ ಬೋರ್ಡ್ ಟು ಹೆಬ್ಬಾಳ ರಸ್ತೆಯ ಟ್ರಾಫಿಕ್‌ಗೆ ಮುಕ್ತಿ: ಸರ್ವಿಸ್ ರೋಡ್ ಸಂಪೂರ್ಣ ಬಳಕೆ
ಸಿಲ್ಕ್ ಬೋರ್ಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಮೇಲ್ಸೇತುವೆ ನಡುವಿನ ವಾಹನ ಸಂಚಾರ ಸುಗಮಗೊಳಿಸುವ ಕಾರ್ಯವನ್ನು ಬೆಂಗಳೂರು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ.
ಬೆಂಗಳೂರು (ಮಾ.11): ಸಿಲ್ಕ್ ಬೋರ್ಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೋಲೀಸ್ (ಬಿಟಿಪಿ) ಹೊರ ವರ್ತುಲ ರಸ್ತೆ (ಒಆರ್‌ಆರ್), ನಿರ್ದಿಷ್ಟವಾಗಿ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಮೇಲ್ಸೇತುವೆ ನಡುವಿನ ಸಂಚಾರವನ್ನು ಸುಗಮಗೊಳಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಸಿಗ್ನಲ್ ಫ್ರೀ ಮತ್ತು ಸುಗಮ ವಾಹನ ಸಂಚಾರಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.
ಬೆಂಗಳೂರು ನಗರದ ಅತಯಂತ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಚನ್ ಕೂಡ ಒಂದಾಗಿತ್ತು. ಅಲ್ಲಿಂದ ಮೆಟ್ರೋ ಸಂಪರ್ಕ ಆರಂಭವಾದ ನಂತರ ಸವಲ್ಪ ಮಟ್ಟಿಗೆ ಟ್ರಾಫಿಕ್ ಜಾಮ್ ತಗ್ಗಿದೆ. ಈಗ ಐಟಿಬಿಟಿ ಕಾರಿಡಾರ್ ಆಗಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಏಲ್ಸೇತುವೆಗೆ ಸಂಪರ್ಕ ಸಾಧಿಸುವ ಹೊರ ವರ್ತುಲ ರಸ್ತೆಯಲ್ಲಿ ಇನ್ನೂ ಅತ್ಯಧಿಕ ಪ್ರಮಾಣದ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ. ಜೊತೆಗೆ, ಈ ರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯು ರಸ್ತೆಯ ಅರ್ಧ ಭಾಗವನ್ನು ಕಿತ್ತುಕೊಂಡಿದ್ದರಿಂದ ಇತ್ತೀಚೆಗೆ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ. ಆದರೆ, ಈಗ ಈ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋಗೆ ಸದ್ಯಕ್ಕಿಲ್ಲ ಅನುಮತಿ
ಸರ್ವಿಸ್ ರಸ್ತೆಗಳಲ್ಲಿ ಏಕಮುಖ ಸಂಚಾರ: ಇನ್ನು ಗುರುವಾರದಿಂದ ಹೊರ ವರ್ತುಲ ರಸ್ತೆ (ಓಆರ್‌ಆರ್) ಉದ್ದಕ್ಕೂ ಸರ್ವಿಸ್ ರಸ್ತೆಗಳನ್ನು ಉತ್ತಮಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಗುರುವಾರದಿಂದ ORR ಸುತ್ತಲಿನ ಸರ್ವಿಸ್ ರಸ್ತೆಗಳನ್ನು ಏಕಮುಖ ರಸ್ತೆಗಳಾಗಿ ಪರಿವರ್ತಿಸಿದ್ದಾರೆ. ಜೊತೆಗೆ, ಸಂಚಾರ ದಟ್ಟಣೆಯನ್ನು ಮತ್ತಷ್ಟು ನಿವಾರಿಸಲು ಅವರು ಬಸ್‌ಗಳನ್ನು ಸೇವಾ ರಸ್ತೆಗಳಲ್ಲಿ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇನ್ನು ಬೆಳಗ್ಗೆ ಮತ್ತು ಸಂಜೆಯ ವೇಳೆ ಪೀಕ್ ಅವರ್‌ನಲ್ಲಿ ಸರಕು ವಾಹನಗಳು ಮತ್ತು ಇತರ ಭಾರೀ ಮೋಟಾರು ವಾಹನಗಳು ಸರ್ವಿಸ್ ರಸ್ತೆಗಳಲ್ಲಿ ಹೋಗದಂತೆ ನಿಷೇಧಿಸಲಾಗಿದೆ. ಇನ್ನು ಸರ್ವಿಸ್ ರಸ್ತಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತಿದ್ದು, ಈ ಕ್ರಮದಿಂದ ಟ್ರಾಫಿಕ್ ಜಾಮ್‌ನ ಪ್ರಮಾಣದಲ್ಲಿ ಶೇಕಡಾ 25 ರಷ್ಟು ಕಡಿಮೆ ಮಾಡಬಹುದು ಎಂದು ಹಿರಿಯ ಟ್ರಾಫಿಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಟಿ- ಬಿಟಿ ಜಂಕ್ಷನ್ ರೋಡ್: ನಗರದ ಪೂರ್ವ ಮತ್ತು ಆಗ್ನೇಯ ಭಾಗದ ರಸ್ತೆಗಳಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕಚೇರಿಗೆ ತೆರಳುತ್ತಾರೆ. ಜನರು ಹೆಚ್ಚಿನ ಸಂಚಾರ ಮಾಡುವುದರಿಂದ ಅಗರ ಕೆರೆ, ಇಬ್ಲೂರು ಜಂಕ್ಷನ್, ಬೆಳ್ಳಂದೂರು, ಮಾರತ್ತಹಳ್ಳಿಯ ಕಲಾಮಂದಿರ ಮುಂತಾದ ಸ್ಥಳಗಳು ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳಗಳಾಗಿ ಮಾರ್ಪಾಡು ಆಗುತ್ತಿವೆ. ಇದರಿಂದ ಅಧಿಕಾರಿಗಳಿಗೆ ಸಮಸ್ಯೆಯಾಗಿವೆ ಎಂದು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ಹೇಳಿದರು.
ಕಚೇರಿಗಳಿಗೆ ಹೋಗುವವರಿಗೆ ಅನುಕೂಲ: ಇನ್ನು ಹೊರ ವರ್ತುಲ ರಸ್ತೆಗಳಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಅತಿ ಹೆಚ್ಚು ದಟ್ಟಣೆ ಇರುವ ಮೂರು ದಿನಗಳಾಗಿವೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ವಿಸ್ ರಸ್ತೆಗಳನ್ನು ಉತ್ತಮ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕಚೇರಿಗೆ ಹೋಗುವವರಿಗೆ ಪ್ರಯಾಣಿಸಲು ಸುಲಭವಾಗುವಂತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚಿನ ಗಮನ ನೀಡಲಾಗುತ್ತದೆ' ಎಂದು ಹೇಳಿದರು.
ಬೆಂಗ್ಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಸಿಎಸ್ ಮದ್ದು
ಎರಡು ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಟ್ರಾಫಿಕ್ ಮೇಲ್ವಿಚಾರಣೆಗಾಗಿ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಒಆರ್‌ಆರ್‌ನ ಸಂಪೂರ್ಣ ಉದ್ದಕ್ಕೂ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ಎರಡು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ಇದಕ್ಕೆ ಸಹಾಯ ಮಾಡಲಾಗಿದೆ ಮತ್ತು ಈ ಮಾರ್ಗದಲ್ಲಿ ಸುಮಾರು 80 ಹೊಸ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರ ವ್ಯತ್ಯಯ ಮತ್ತು ಮಧ್ಯಸ್ಥಿಕೆ ಇನ್ನೂ ಒಂದು ವರ್ಷ ಮುಂದುವರಿಯುವ ನಿರೀಕ್ಷೆಯಿದೆ.