ಬೆಂಗಳೂರು [ಜ.04]:  ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಹೋರಾಟ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಮತ್ತೊಮ್ಮೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ದೇಶದಲ್ಲಿ ‘ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ’ ಜಾರಿಗೆ ತರಬಾರದು ಎಂದು ಆಗ್ರಹ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ, 2024ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಧರ್ಮದ ಆಧಾರದ ಮೇಲೆ ದೇಶ ವಿಭಜಿಸಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಮುಸ್ಲಿಮರನ್ನು ನಿಗಾ ಕೇಂದ್ರಗಳಲ್ಲಿಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಎಲ್ಲರೂ ಒಟ್ಟಾಗಿ ‘ಮೋದಿ ಹಟಾವೋ, ದೇಶ್‌ ಬಚಾವೋ’ ಆಂದೋಲನ ಕೈಗೊಳ್ಳಬೇಕು. ನರೇಂದ್ರ ಮೋದಿಯವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಕರೆ ನೀಡಿದರು.

'ಮೋದಿ ಭಾರತದ ಪ್ರಧಾನಿಯೋ ಪಾಕ್‌ ಪ್ರಧಾನಿಯೋ?'...

ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಖತಿಫ್‌ ಸಾಹೇಬ್‌ ಮಾತನಾಡಿ, ಕೇವಲ ಬಾಂಗ್ಲಾದೇಶ, ಪಾಕಿಸ್ತಾನ ಮಾತ್ರವಲ್ಲ, ವಿಶ್ವದೆಲ್ಲೆಡೆ ಎಲ್ಲಾ ಕಡೆಯಿಂದಲೂ ಹಿಂದೂಗಳನ್ನು ಕರೆಸಿದರೂ ದೇಶಕ್ಕೆ ಮುಕ್ತವಾಗಿ ಸ್ವಾಗತಿಸುತ್ತೇವೆ. ಊಟ, ಮನೆ, ಬಟ್ಟೆ, ಪ್ರೀತಿ ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ಸಿಎಎ ಕಾಯಿದೆಯಲ್ಲಿ ಹಿಂದೂ-ಮುಸ್ಲಿಂ ಇಬ್ಬರನ್ನೂ ಒಟ್ಟಾಗಿ ನೋಡಿದರೆ ರಸ್ತೆಗೆ ಇಳಿಯುವ ಪ್ರಶ್ನೆಯೇ ಇಲ್ಲ ಎಂದರು.

ಮಂಗಳೂರು ಪೊಲೀಸರು ನಡೆಸಿದ ಗೋಲಿಬಾರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 600 ಜನ ಪ್ರತಿಭಟನೆ ಮಾಡುವಾಗ ನಿಯಂತ್ರಿಸದೆ ಇಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ನಿಮಗೆ ಕರ್ತವ್ಯ ನಿರ್ವಹಿಸುವುದು ಗೊತ್ತಿಲ್ಲದಿದ್ದರೆ ಬೆಂಗಳೂರಿನ ಪೊಲೀಸರಿಂದ ಪಾಠ ಕಲಿಯಲಿ. 4 ಲಕ್ಷ ಮಂದಿಯನ್ನು ಶಾಂತಿಯುತವಾಗಿ ನಿಯಂತ್ರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.