ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಸಚಿವ ಸುಧಾಕರ್
* ಬ್ಲ್ಯಾಕ್ ಫಂಗಸ್ ಸಲುವಾಗಿ ತಜ್ಞರ ಸಮಿತಿ ರಚನೆ
* ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ
* ಶೀಘ್ರದಲ್ಲೇ ಔಷಧಿ ವಿತರಿಸುವುದಾಗಿ ಹೇಳಿದ ಕೇಂದ್ರ ಸಚಿವ ಸದಾನಂದ ಗೌಡ
ಹುಬ್ಬಳ್ಳಿ(ಮೇ.22): ಬ್ಲ್ಯಾಕ್ ಫಂಗಸ್ ಸೋಂಕು ಕಡಿಮೆ ಆಗೋ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಸೋಂಕು ಬಂದಂತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗುವುದು. ಬ್ಲ್ಯಾಕ್ ಫಂಗಸ್‌ನಿಂದ ಸಾವಿನ ಪ್ರಮಾಣ ಎಲ್ಲಿಯೂ ಜಾಸ್ತಿ ಆಗಿಲ್ಲ. ವರ್ಷದಲ್ಲಿ 10 ಜನರಲ್ಲಿ ಮಾತ್ರ ಈ ಫಂಗಸ್ ಕಾಣಿಸುತ್ತಿತ್ತು. ಆದರೆ ಈಗ 250 ಜನರಲ್ಲಿ ಫಂಗಸ್ ಕಾಣಿಸಿಕೊಂಡಿದೆ. ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಅವೆಲ್ಲವನ್ನು ಸರ್ಕಾರ ನೀಡಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಇಂದು(ಶನಿವಾರ) ನಗರದ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಶೀಘ್ರದಲ್ಲೇ ಔಷಧಿ ವಿತರಿಸುವುದಾಗಿ ಹೇಳಿದ್ದಾರೆ. ಬ್ಲ್ಯಾಕ್ ಫಂಗಸ್‌ನಿಂದ ಬಳಲುತ್ತಿರುವ ಸೋಂಕಿತರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..?
ಬ್ಲ್ಯಾಕ್, ವೈಟ್ ಅಂತೇನಿಲ್ಲ. ಅದು ಕೇವಲ ಫಂಗಸ್ ಅಷ್ಟೇ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಈ ಫಂಗಸ್ ಜಾಸ್ತಿಯಾಗುತ್ತಿದೆ. ಕಲರ್ ಬಗ್ಗೆ ಏನಿಲ್ಲ, ಅದು ಹೇಗೆ ಬರುತ್ತೆ ಅಂತ ನಾನು ಈಗಾಗಲೇ ಮಾತನಾಡಿದ್ದೇನೆ. ಬ್ಲ್ಯಾಕ್ ಫಂಗಸ್ ಸಲುವಾಗಿ ಈಗಾಗಲೇ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದೇವೆ. ಈಗಾಗಲೇ ಅವರು ವರದಿಯನ್ನ ಕೊಟ್ಟಿದ್ದಾರೆ. ಹೆಚ್ಚು ದಿನ ಐಸಿಯುನಲ್ಲಿದ್ದವರು, ಆಕ್ಸಿಜನ್ ಪಡೆದವರಲ್ಲಿ ಈ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಆಕ್ಸಿಜನ್ ನಲ್ಲಿ ಡಿಸ್ಟಿಲ್ಡ್ ವಾಟರ್ ಹಾಕಬೇಕು. ಆದರೆ ಅದರಲ್ಲಿ ನಳದ ನೀರು ಹಾಕುತ್ತಿದ್ದಾರೆ. ಹೀಗಾಗಿ ಫಂಗಸ್ ಹೆಚ್ಚಾಗಿ ಕಾಣುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರ್ಕಾರ ಘೋಷಿಸಿದ ರಿಸ್ಕ್ ಅಮೌಂಟ್ ಶೀಘ್ರವೇ ನೀಡಲಾಗುವುದು ಎಂದು ತಿಳಿಸಿದ್ದಾರೆ.