ಬೀದರ್‌(ಏ.24): ಆಮ್ಲಜನಕದ ಕೊರತೆಯನ್ನು ದೂರ ಮಾಡುವಲ್ಲಿ ಹರಸಾಹಸ ಪಡುತ್ತಿರುವ ಬೆನ್ನಲ್ಲಿಯೇ ಪಕ್ಕದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮ ವ್ಯಾಪ್ತಿಯಲ್ಲಿನ ಶ್ರೀ ಸಿಮೆಂಟ್‌ ಕಂಪನಿ ಜಿಲ್ಲೆಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಪೂರೈಸುವ ಮೂಲಕ ಜಿಲ್ಲಾಡಳಿತದ ಶ್ಲಾಘನೆಗೆ ಪಾತ್ರವಾಗಿದೆ.

ಏ. 20 ಮತ್ತು 22ರಂದು ಎರಡು ದಿನ ತಲಾ 45ರಂತೆ 90 ಉಚಿತ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಪೂರೈಸಿರುವ ಶ್ರೀ ಸಿಮೆಂಟ್‌ ಲಿ. ಕಂಪನಿ ಮುಂದೆಯೂ ಜಿಲ್ಲೆಯ ರೋಗಿಗಳಿಗೆ ಜೀವ ದಾನವಾಗಬಲ್ಲ ಆಕ್ಸಿಜನ್‌ ಪೂರೈಸಲಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರು ಸಂಕಷ್ಟದ ಈ ದಿನಗಳಲ್ಲಿ ಉಚಿತ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಪೂರೈಸಿದ ಈ ಕಂಪನಿಗೆ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಅರ್ಪಿಸಿ ಜಿಲ್ಲೆಯ ಜನ ನಿಮ್ಮನ್ನು ಎಂದಿಗೂ ಮರೆಯಲಾರರು ಎಂದು ಅಭಿನಂದಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಪರದಾಟ : ಸ್ಪಂದಿಸಿದ ಸಚಿವ

ಸಧ್ಯಕ್ಕೆ ಜಿಲ್ಲಾ ಆಸ್ಪತ್ರೆಯ 14ಕಿಲೋ ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಆಕ್ಸಿಜನ್‌ ಸಿಲಿಂಡರ್‌ಗೆ ಒಂದು ದಿನ ಬಳ್ಳಾರಿಯಿಂದ ಪ್ರಾಕ್ಷಿಯರ್‌ ಕಂಪನಿ ಹಾಗೂ ಮರುದಿನ ಹೈದ್ರಾಬಾದ್‌ನಿಂದ ಐನಾಕ್ಸ್‌ ಕಂಪನಿ ಸುಮಾರು 8-10ಕಿಲೋಲೀಟರ್‌ ಆಮ್ಲಜನಕ ಪೂರೈಸಲಾಗುತ್ತಿದೆ. ಆಕ್ಸಿಜನ್‌ ಕೊರತೆಯಾಗದಂತೆ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ನಿದ್ದೆಗೆಟ್ಟು ಶ್ರಮಿಸುತ್ತಿರುವದು ಶ್ಲಾಘನೀಯ.