ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಪರದಾಟ : ಸ್ಪಂದಿಸಿದ ಸಚಿವ
ಜಿಲ್ಲಾಸ್ಪತ್ರೆಯಲ್ಲಿಯೇ ಕೊರೋನಾ ರೋಗಿಗಳು ಪರದಾಡುತ್ತಿದ್ದು ಇದನ್ನು ತಿಳಿಸಿದ ಸಚಿವ ಪ್ರಮುಖ ಚವಾಣ್ ಕೂಡಲೇ ಸ್ಪಂದಿಸಿದ್ದಾರೆ. ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.
ಬೀದರ್ (ಏ.22): ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಬೆಡ್‌ಗಳ ಕೊರತೆಯಿಂದಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗದೆ ಪರದಾಡುತ್ತಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
750 ಹಾಸಿಗೆಗಳ ಜಿಲ್ಲಾಸ್ಪತ್ರೆಯಲ್ಲಿ 550 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆಂದೇ ಮೀಸಲಿಡಲಾಗಿದೆ. ಆದರೂ ಜಿಲ್ಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ, ಬೆಡ್, ಆಕ್ಸಿಜನ್ ಪೂರೈಕೆ, ರೆಮಿಡಿಸಿವರ್ ಚುಚ್ಚುಮದ್ದು ಸೇರಿ ಅಗತ್ಯ ಔಷಧಗಳ ಕೊರತೆಯೂ ಗಂಭೀರವಾಗಿ ಕಾಡುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಮತ್ತೆ 23 ಸಾವಿರ ಕೇಸ್.. ಬೆಂಗಳೂರಿನಲ್ಲಿ 13 ಸಾವಿರ.. ಜಿಲ್ಲೆಗಳ ಸ್ಥಿತಿ ಏನು?
ಈ ಮಧ್ಯೆ, ಹಾಸಿಗೆ ಇಲ್ಲದಿದ್ದರೂ ಸರಿ ನೆಲದ ಮೇಲೆ ಮಲಗಿಸಿಯಾದರೂ ಚಿಕಿತ್ಸೆ ಕೊಡಿಸುವಂತೆ ರೋಗಿಗಳು ಅಂಗಲಾಚುತ್ತಿದ್ದು, ರೋಗಿಗಳ ಸಂಬಂಧಿಕರು ರಸ್ತೆ ಬದಿಯಲ್ಲೇ ಮಲಗುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಬೆನ್ನಲ್ಲೇ ಎಚ್ಚೆತ್ತ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲಾಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳ ಜತೆ ಬುಧವಾರ ಚರ್ಚೆ ನಡೆಸಿದರು. ತಕ್ಷಣ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸದ್ಯ ಕ್ವಾರಂಟೈನ್‌ನಲ್ಲಿರುವ ಸಚಿವರು ಮನೆಯಲ್ಲಿದ್ದುಕೊಂಡೇ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಶಾಸಕರು, ಅಧಿಕಾರಿಗಳು ದೌಡು: ಈ ಮಧ್ಯೆ, ಶಾಸಕ ರಹೀಮ್ ಖಾನ್ ಅವರೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸರ್ಜನ್ ಜತೆ ಸಮಾಲೋಚನೆ ನಡೆಸಿ, ಸಮಗ್ರ ಮಾಹಿತಿ ಪಡೆದರು. ಕೊರೋನಾ ಸೋಂಕಿತರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.