ತುಮಕೂರು(ಫೆ.12): ಆರ್ಥಿಕವಾಗಿ ಹಿಂದುಳಿದಿರುವ, ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಮಹಿಳೆಯರು ಹಾಗೂ ವಾರ್ಷಿಕ 3 ಲಕ್ಷ ಆದಾಯದೊಳಗಿರುವ ಎಲ್ಲರಿಗೂ ಉಚಿತವಾಗಿ ನ್ಯಾಯ ದೊರಕಿಸಲು ನ್ಯಾಯಾಂಗ ಇಲಾಖೆ, ರಕ್ಷಣಾ ಇಲಾಖೆಯ ಸಹಕಾರದೊಂದಿಗೆ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಂಚಾಟೆ ಸಂಜೀವಕುಮಾರ್‌ ತಿಳಿಸಿದ್ದಾರೆ.

ಅವರು ಬಹುವಿಧ ಕಾನೂನು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ, ಔಷಧಾಲಯ, ಮಕ್ಕಳ ನಿರೀಕ್ಷಣಾ ಕೊಠಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ನ್ಯಾಯ ಸಂಯೋಗ ಕೊಠಡಿ ಉದ್ಘಾಟಿಸಿ ಮಾತನಾಡಿದ್ದಾರೆ.

ಇಬ್ಬರ ಪ್ಯಾನಲ್‌ ವಕೀಲರ ನೇಮಕ:

ನ್ಯಾಯ ಸಂಯೋಗ ಕಚೇರಿಯಲ್ಲಿ ಇಬ್ಬರು ಪ್ಯಾನಲ್‌ ವಕೀಲರನ್ನು ನೇಮಕಗೊಳಿಸಿದ್ದು ಅವರು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಅಗತ್ಯ ಉಚಿತ ಕಾನೂನು ಸೇವೆ ನೀಡಲು ಬದ್ಧರಾಗಿರುತ್ತಾರೆ. ಎಲ್ಲಿ ಕಾನೂನಿನ ಅರಿವು ಇಲ್ಲದಿರುವುದೋ ಅಲ್ಲಿ ಶೋಷಣೆ, ಭ್ರಷ್ಟಾಚಾರ ಮತ್ತು ನ್ಯಾಯವಂಚಿತ ಸ್ಥಿತಿಯಲ್ಲಿ ಜನರು ತೊಂದರೆಗೆ ಒಳಗಾಗುತ್ತಾರೆ, ತಮಗೆ ಸಿಗಬೇಕಾಗಿರುವ ನ್ಯಾಯಯುತ ಬೇಡಿಕೆಗೆ ಧಕ್ಕೆ ಬಂದಾಗ ಪ್ರಶ್ನೆ ಮಾಡುವ ಮನೋಭಾವ ರೂಢಿಸಿಕೊಳ್ಳಲು ಕಾನೂನಿನ ಅರಿವು ಅಗತ್ಯವಾಗಿದೆ ಅದನ್ನು ನ್ಯಾಯಾಲಯ ಮತ್ತು ರಕ್ಷಣಾ ಇಲಾಖೆ ಮಾಡಬೇಕಾಗಿದೆ ಎಂದು ಅವರು ನುಡಿದರು.

ಎಲ್ಲರಿಗೂ ನ್ಯಾಯ ದೊರಕಿಸಿವುದು ಪ್ರಾಧಿಕಾರ ಉದ್ದೇಶ:

ಎಲ್ಲರಿಗೂ ನ್ಯಾಯ ದೊರಕಿಸುವುದು ಜಿಲ್ಲಾ ಕಾನೂನು ಪ್ರಾಧಿಕಾರದ ಉದ್ದೇಶವಾಗಿದ್ದು, ನ್ಯಾಯವಂಚಿತ ನ್ಯಾಯಾಕಾಂಕ್ಷಿಗಳು ತಮ್ಮ ನ್ಯಾಯೋಚಿತ ಹಕ್ಕಿಗಾಗಿ ಪ್ರಾಧಿಕಾರಕ್ಕೆ ಸಂಪರ್ಕಿಸಿ ನ್ಯಾಯ ದೊರಕಿಸಿಕೊಳ್ಳಲು ಅವರು ಮನವಿ ಮಾಡಿದರು. ಅದಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ, ಔಷಧಾಲಯ ಮಕ್ಕಳ ನಿರೀಕ್ಷಣಾ ಕೊಠಡಿ ಸೇರಿ ಐದು ನವೀಕೃತ ಕಚೇರಿಗಳನ್ನು ಸಾರ್ವಜನಿಕ ಸೇವೆಗಾಗಿ ಪ್ರಾರಂಭಿಸಲಾಗಿದೆ. ಈ ಸೌಕರ್ಯಗಳನ್ನು ಕಕ್ಷಿದಾರರು ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ರಾತ್ರಿಯಲ್ಲಿ ಜಿಂಕೆ ಪ್ರಾಣ ಉಳಿಸಲು ಹೋಗಿ ಶಿಕ್ಷಕ ಸಾವು

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ ರಾಘವೇಂದ್ರ ಶೆಟ್ಟಿಗಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಬಿ.ಆರ್‌. ಚಂದ್ರಿಕಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌, ಮತ್ತಿತರ ನ್ಯಾಯಾಧೀಶರು, ರಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯ ಎಸಗಿದ ಸಾಧಕರಿಗೆ ಸನ್ಮಾನಿಸಲಾಯಿತು.

ಸರ್ಕಾರದ ಯೋಜನೆ ಮತ್ತು ಪಿಂಚಣಿ, ವೇತನ ಸಿಗುವಲ್ಲಿ ನೊಂದಿರುವ ಜನರೂ ಸಹ ನ್ಯಾಯಾಲಯ ಆಧಾರಿತ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿ ನ್ಯಾಯಾ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್‌ ತಿಳಿಸಿದ್ದಾರೆ.