ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಪರಿಣಾಮ ತಾಲೂಕಿನ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ತಾವು ನಿರುದ್ಯೋಗಿಗಳು ಆಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ.

ಬಿ.ಎಚ್‌.ಎಂ. ಅಮರನಾಥಶಾಸ್ತ್ರಿ

 ಕಂಪ್ಲಿ (ಜೂ.18) ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಪರಿಣಾಮ ತಾಲೂಕಿನ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ತಾವು ನಿರುದ್ಯೋಗಿಗಳು ಆಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ.

ಹೌದು, ಹಲವು ಆಟೋ ಚಾಲಕರು ಪಟ್ಟಣದಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಯಾಣಿಕರನ್ನು ಸಾಗಿಸಿ ಬಂದ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಶೇರ್‌ ಆಟೋ ಸೇವೆ ಒದಗಿಸುವವರಿದ್ದಾರೆ. ಅದರಲ್ಲಿ ಮಹಿಳೆಯರೇ ಹೆಚ್ಚು ಪ್ರಯಾಣಿಸುತ್ತಿದ್ದರು. ಶೇರ್‌ ಆಟೋಗಳ ಚಾಲಕರು ನಿತ್ಯ 4ರಿಂದ 5 ಟ್ರಿಪ್‌ಗಳಲ್ಲಿ ಜನರನ್ನು ಬಿಟ್ಟು ಬರುವ ಮೂಲಕ .1 ಸಾವಿರದಿಂದ .1500 ವರೆಗೆ ಆದಾಯ ಗಳಿಸುತ್ತಿದ್ದರು. ಆದರೆ ಈಗ ಮಹಿಳೆಯರು ಆಟೋಗೆ ಬರುತ್ತಿಲ್ಲ. ಹೆಚ್ಚು ಸಮಯ ಕಾಯುವುದಾದರೂ ಬಸ್ಸಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಅವರ ಜತೆ ಬಂದ ಪುರುಷರೂ ಬಸ್‌ ಏರುವುದು ಅನಿವಾರ್ಯ. ಬಸ್‌ ಸಂಪರ್ಕ ಇಲ್ಲದ ಪ್ರದೇಶಗಳಿಗೆ ಮಾತ್ರ ಆಟೋ ಅವಲಂಬಿಸುತ್ತಿದ್ದಾರೆ. ಇದರಿಂದ ಆಟೋಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿದಿದೆ. ನಿತ್ಯ .250 ಸಹ ಸಂಪಾದನೆಯಾಗುತ್ತಿಲ್ಲ. ಹೀಗಾದರೆ ಮುಂದೆ ತಮ್ಮ ಪರಿಸ್ಥಿತಿ ಏನು ಎಂಬುದು ಆಟೋ ಚಾಲಕರ ಪ್ರಶ್ನೆ.

ಮಿಸ್‌ ಆಗಿ 10 ಸಾವಿರ ರೂಪಾಯಿ ಕಳಿಸಿದ ಪ್ರಯಾಣಿಕ, ವಾಪಾಸ್‌ ಕಳಿಸಿದ ಆಟೋ ಚಾಲಕ!

ನಿರುದ್ಯೋಗಿಗಳು ಆಗುತ್ತಿದ್ದೇವೆ:

ಕಂಪ್ಲಿ ಪಟ್ಟಣದಿಂದ ಗಂಗಾವತಿ ಮಾರ್ಗವಾಗಿ ಅಂದಾಜು 100 ಶೇರ್‌ ಆಟೋಗಳು, ಕಂಪ್ಲಿ-ರಾಮಸಾಗರ 30, ಕಂಪ್ಲಿ-ದೇವಸಮುದ್ರ 25, ಕಂಪ್ಲಿ-ಮೆಟ್ರಿ, ದೇವಲಾಪುರ, ಚಿನ್ನಾಪುರ ಭಾಗದ 20, ಕಂಪ್ಲಿ-ಕೊಟಾಲ್‌ 15, ಕಂಪ್ಲಿ-ಎಮ್ಮಿಗನೂರು 15 ಅಲ್ಲದೇ ಸಣಾಪುರ, ಬೆಳಗೋಡು ಇತರ ಮಾರ್ಗವಾಗಿ ತೆರಳುವ 200ಕ್ಕೂ ಹೆಚ್ಚು ಶೇರ್‌ ಆಟೋ ಚಾಲಕರಿದ್ದಾರೆ. ನಿತ್ಯ 4ರಿಂದ 5 ಟ್ರಿಪ್‌ ತೆರಳುತ್ತಿದ್ದ ನಮಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಿದಾಗಿನಿಂದ 2 ಟ್ರಿಪ್‌ ಸಹ ಆಗುತ್ತಿಲ್ಲ. 25-30 ವರ್ಷಗಳಿಂದ ಆಟೋ ಚಾಲಕರ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವಂತಹ ನಮಗೆ ಬೇರೆ ವೃತ್ತಿಯನ್ನು ಅವಲಂಬಿಸಲು ಸಾಧ್ಯವಾಗುವುದಿಲ್ಲ. ಇದು ಹೀಗೆ ಮುಂದುವರಿದರೆ ಶೇರ್‌ ಆಟೋ ಚಾಲಕರ ವೃತ್ತಿಯನ್ನೇ ಅವಲಂಬಿಸಿರುವ ನಾವು ನಿರುದ್ಯೋಗಿಗಳಾಗುವುದು ಖಚಿತ. ಅಲ್ಲದೆ ನಮ್ಮ ಕುಟುಂಬಗಳು ಬೀದಿಗೆ ಬರಲಿವೆ ಎಂದು ಆಟೋ ಚಾಲಕ ಉಮೇಶ್‌ ಅವರು ‘ಕನ್ನಡಪ್ರಭ’ದೊಂದಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಇದೊಂದೆ ಅಲ್ಲ, ಉಚಿತ ಬಸ್‌ ಸೌಲಭ್ಯದಿಂದಾಗಿ ನಿತ್ಯ ಆಟೋ, ಖಾಸಗಿ ಬಸ್‌, ಟ್ಯಾಕ್ಸಿ ಚಾಲಕರ ಪರಿಸ್ಥಿತಿ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ ನೀಡಲಾದ ಉಚಿತ ಬಸ್‌ ವ್ಯವಸ್ಥೆ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸಿರುವ ಪರಿಣಾಮ ಶೇರ್‌ ಆಟೋಗಳಿಗೆ ಬರುವಂತಹ ಪ್ರಯಾಣಿಕರ ಸಂಖ್ಯೆ ತೀರ ಕುಸಿದಿದೆ. ಇದರ ಪರಿಣಾಮ ಒಬ್ಬ ಆಟೋ ಚಾಲಕರಿಗೆ ನಿತ್ಯ .250 ಸಹ ಸಂಪಾದನೆಯಾಗುತ್ತಿಲ್ಲ.

ಉಮೇಶ್‌, ಶೇರ್‌ ಆಟೋ ಚಾಲಕ

ಉಚಿತ ಪ್ರಯಾಣ: ಸಾರಿಗೆ ಬಸ್ಸಿನಲ್ಲಿ ಮಹಿಳಾ ಶಕ್ತಿಯ ಅನಾವರಣ!

ಮಹಿಳೆಯರಿಗೆ ಕಲ್ಪಿಸಲಾದ ಉಚಿತ ಬಸ್‌ ಪ್ರಯಾಣದ ವ್ಯವಸ್ಥೆಯಿಂದಾಗಿ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಚಾಲಕರ ಸ್ಥಿತಿ ಸಂಕಷ್ಟದಲ್ಲಿ ಸಿಲುಕಿದ್ದು ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ನಮ್ಮ ಪರಿಸ್ಥಿತಿಯನ್ನು ಮನಗಂಡು ಸರ್ಕಾರ ಈಗಲಾದರೂ ಈ ಉಚಿತ ಪ್ರಯಾಣದ ವ್ಯವಸ್ಥೆಯನ್ನು ರದ್ದು ಮಾಡಬೇಕು.

ಖಾಜಾವಲಿ, ಶೇರ್‌ ಆಟೋ ಚಾಲಕ