Ramanagar: ಬಾಡಿಗೆ ಪಾವತಿ, ಮಂಚಗಳ ಖರೀದಿಯಲ್ಲಿ ಅಕ್ರಮ!
ಪತ್ನಿ ಮತ್ತಿತರ ಸಂಬಂಧಿಕರ ಹೆಸರಿನಲ್ಲಿ ವಸತಿ ನಿಲಯದ ಬಾಡಿಗೆ ಪಾವತಿ ಹಾಗೂ ಕಾಟ್(ಮಂಚ) ಸೇರಿದಂತೆ ಇತರೆ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರು. ಅಕ್ರಮ ನಡೆಸಿರುವುದು ರಾಮನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
-ಎಂ.ಅಫ್ರೊಜ್ ಖಾನ್
ರಾಮನಗರ : ಪತ್ನಿ ಮತ್ತಿತರ ಸಂಬಂಧಿಕರ ಹೆಸರಿನಲ್ಲಿ ವಸತಿ ನಿಲಯದ ಬಾಡಿಗೆ ಪಾವತಿ ಹಾಗೂ ಕಾಟ್(ಮಂಚ) ಸೇರಿದಂತೆ ಇತರೆ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರು. ಅಕ್ರಮ ನಡೆಸಿರುವುದು ರಾಮನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಹಣ (Money) ದುರುಪಯೋಗದ ವಾಸನೆ ಬರುತ್ತಿದ್ದಂತೆ ಲೆಕ್ಕ ಪರಿಶೋಧನೆ ಕಾರ್ಯವೂ ಮುಂದುವರಿದಿದ್ದು, ಈಗಾಗಲೇ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಡಿ ಗ್ರೂಪ್ ನೌಕರ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
2016-19ರಿಂದ 2017- ಪ್ರಸ್ತತವರೆಗೂ ಕಚೇರಿಯಲ್ಲಿ ವಸತಿ ನಿಲಯಗಳ ಬಾಡಿಗೆ ಹಣ ಪಾವತಿ, ವಿದ್ಯಾರ್ಥಿಗಳಿಗಾಗಿ (Students) ಕಾಟ್‌ಗಳ ಖರೀದಿ, ಯುಪಿಎಸ್, ಲೇಸರ್ ಜೆಟ್ ಪ್ರಿಂಟರ್ಸ್ ಸೇರಿದಂತೆ ಇತರೆ ಪರಿಕರಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಇಲಾಖೆಗೆ ಹೆಚ್ಚಿನ ಮೊತ್ತ ನಮೂದಿಸಿರುವ ನಕಲಿ ಬಿಲ್‌ಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಖಜಾನೆ - 2 ಡಿಎಸ್‌ಸಿ ಕೀಗಳನ್ನು ಅಕ್ರಮವಾಗಿ ಬಳಸಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಅಧಿಕಾರಿಗಳೇ ನಕಲಿ ಬಿಲ್ ಬುಕ್ ತಯಾರಿಸಿ ಅದರಲ್ಲಿ ಟಿನ್ ನಂಬರ್, ಮೊಬೈಲ್ ನಂಬರ್ ಉಲ್ಲೇಖಿಸುವುದರ ಜೊತೆಗೆ ಖರೀದಿಸಿದ ಪರಿಕರಗಳಿಗೆ ಸಿಜಿಎಸ್ಟಿ ಹಾಗೂ ಎಸ್ ಜಿಎಸ್‌ಟಿ ಹಾಕಿರುವ ಬಿಲ್‌ಗಳನ್ನು ಇಲಾಖೆಗೆ ಸಲ್ಲಿಸಿದ್ದಾರೆ. ಈ ಅಕ್ರಮಗಳಿಗೆ ಹಿರಿಯ ಅಧಿಕಾರಿಗಳೂ ಸಾಥ್ ನೀಡಿರುವುದು ಸಾಕಷ್ಟುಅನುಮಾನಗಳನ್ನು ಮೂಡಿಸಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ತಾಲೂಕಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಹಾಗೂ ಅನುದಾನಿತ ವಿದ್ಯಾರ್ಥಿ ನಿಲಯಗಳ ಪೈಕಿ ಬಹುತೇಕ ಸರ್ಕಾರಿ ಹಾಗೂ ಕೆಲವು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ.
ವಸತಿ ನಿಲಯ ನಡೆಯುತ್ತಿರುವ ಖಾಸಗಿ ಕಟ್ಟಡಗಳನ್ನು ಮೊದಲೇ ಪತ್ನಿ ಅಥವಾ ಸಂಬಂಧಿಕರ ಹೆಸರಿಗೆ ಮೂಲ ಮಾಲೀಕನಿಂದ ಬಾಡಿಗೆ ಕರಾರು ಮಾಡಿಕೊಂಡಿರುವುದು. ಆ ಹೆಸರಿನಲ್ಲಿ ವಸತಿ ನಿಲಯದ ಬಾಡಿಗೆ ದರವೆಂದು ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಖರೀದಿಸುವ ಒಂದು ಟೂ ಟೈರ್ ಕಾಟ್ ನ ಬೆಲೆ 7 ರಿಂದ 8 ಸಾವಿರ ರುಪಾಯಿ ಆಗುತ್ತದೆ. ಆದರೆ, ಅಧಿಕಾರಿಗಳು ಒಂದು ಕಾಟ್ ನ ಬೆಲೆ 16,500 ರುಪಾಯಿ ಎಂದು ನಮೂದಿಸಿ ಇಲಾಖೆಗೆ ನಕಲಿ ಬಿಲ್ ಸಲ್ಲಿಸಿದ್ದಾರೆ.
ಎರಡು ವರ್ಷಗಳ ಹಿಂದೆಯಷ್ಟೇ ತಾಲೂಕಿನಲ್ಲಿರುವ ಎಲ್ಲ ವಸತಿ ನಿಲಯಗಳಿಗೆ ಸುಮಾರು 350 ಕಾಟ್ ಗಳನ್ನು ಖರೀದಿಸಿದ್ದು, ಇಲ್ಲಿ ಸುಮಾರು 58 ಲಕ್ಷ ರು. ಅಕ್ರಮ ನಡೆದಿದೆ. ಹೀಗೆ ಕಚೇರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಸಾಕಷ್ಟುನಿದರ್ಶನಗಳಿದ್ದು, ಲೆಕ್ಕ ಪರಿಶೋಧನೆಯಿಂದ ಒಂದೊಂದೇ ಅಕ್ರಮಗಳು ಬಯಲಿಗೆ ಬರುತ್ತಿವೆ. ಮಾತೃ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ನಿಯೋಜನೆಗೊಂಡು ಇಲಾಖೆಯಲ್ಲಿ ಇದ್ದಷ್ಟುದಿನ ಸಾಕಷ್ಟುಅಕ್ರಮ ಎಸಗಿರುವ ತಾಲೂಕು ವಿಸ್ತರಣಾಧಿಕಾರಿಯಾಗಿದ್ದ ಅಧಿಕಾರಿ ಬೇರೆ ತಾಲೂಕಿಗೆ ವರ್ಗಾವಣೆ ಆಗಿದ್ದಾರೆ. ಇದೀಗ ಸರ್ಕಾರಿ ನೌಕರರ ಸಂಘದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವ ಆ ಅಧಿಕಾರಿ ಬಚಾವ್ ಆಗಲು ತನ್ನ ಪ್ರಭಾವ ಬಳಸುತ್ತಿದ್ದಾರೆ.
ಹಣ ದುರ್ಬಳಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯ
ರಾಮನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಹಣ ದುರುಪಯೋಗ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ವಿಸ್ತರಣಾಧಿಕಾರಿ ಎಂ.ರವಿಕುಮಾರ್, ಕಲ್ಯಾಣಾಧಿಕಾರಿ ಎಸ್.ಸಿದ್ದರಾಜು ಹಾಗೂ ಡಿ ಗ್ರೂಪ್ ನೌಕರ ಎನ್.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
-ವಿಸ್ತರಣಾಧಿಕಾರಿ ಎಂ.ರವಿಕುಮಾರ್ ಅವರನ್ನು ಕಚೇರಿಯಲ್ಲಿ ಅನುದಾನ ಬಿಡುಗಡೆ, ಖರ್ಚು ವೆಚ್ಚ, ನಗದು ಪುಸ್ತಕ ಪರಿಶೀಲನೆ, ಬಿಲ್ ತಯಾರಿಕೆ, ಬಿಲ್ ಪರಿಶೀಲನೆ, ಕಚೇರಿಯ ಲೆಕ್ಕಪತ್ರಗಳ ಹಾಗೂ ಅನುದಾನಗಳ ಒಟ್ಟಾರೆ ಮೇಲ್ವಿಚಾರಣೆ ಹಾಗೂ ನಿರ್ವಹಣೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ತೋರಿಸಿರುವುದು. ಅಡುಗೆ ಸಿಬ್ಬಂದಿ ಅನಧಿಕೃತವಾಗಿ ಖಜಾನೆಯಿಂದ ಅಪಾರ ಮೊತ್ತದ ಹಣ ಸೆಳೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಸಮರ್ಪಕ ಕಾರ್ಯನಿರ್ವಹಣೆ, ಕರ್ತವ್ಯ ನಿರ್ಲಕ್ಷತೆ ಆರೋಪಗಳ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.
-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್ .ಸಿದ್ದರಾಜು ಅವರನ್ನು ಕಚೇರಿ ಕೆಲಸಕ್ಕೆ ಅಡುಗೆ ಸಿಬ್ಬಂದಿಯನ್ನು ನಿಯಮಬಾಹಿರವಾಗಿ ನೇಮಕ, ಖಜಾನೆಯಿಂದ ಅನಧಿಕೃತವಾಗಿ ಅಪಾರ ಮೊತ್ತದ ಹಣ ಸೆಳೆದಿರುವ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆಗೊಳಪಟ್ಟು ಅಮಾನತ್ತಿನಲ್ಲಿ ಇಡಲಾಗಿದೆ.
-ಇನ್ನು ಡಿ ಗ್ರೂಪ್ ನೌಕರ ಎನ್.ಮಂಜುನಾಥ ಅವರನ್ನು ನಕಲಿ ಕೀಗಳನ್ನು ಬಳಸಿ ಬೀರುವಿನಲ್ಲಿದ್ದ ಹಣ ಸೆಳೆಯುವ ಅಧಿಕಾರಿಯ ಖಜಾನೆ - 2 ರ ಡಿಎಸ್ ಸಿ ಕೀ ಗಳನ್ನು ಸಹ ಕದ್ದು 2019 ರಿಂದ 2022ರವರೆಗೆ ಪತ್ನಿ ಮತ್ತಿತರರ ಸಂಬಂಧಿಕರ ಹೆಸರಿನಲ್ಲಿ ಕಚೇರಿ ಮತ್ತು ವಸತಿ ನಿಲಯದ ಬಾಡಿಗೆ , ವಿದ್ಯುತ್ ದರವೆದು ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.
ರಾಮನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಾಲ್ಕೈದು ವರ್ಷಗಳಿಂದ ವಸತಿ ನಿಲಯ ಬಾಡಿಗೆ - ವಿದ್ಯುತ್ ದರವೆಂದು ಅನುದಾನ ದುರುಪಯೋಗವಾಗಿರುವ ಆರೋಪದ ಹಿನ್ನೆಲೆಯಲ್ಲಿ ಲೆಕ್ಕ ಪರಿಶೋಧನೆ ನಡೆದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಸ್ತರಣಾಧಿಕಾರಿ, ಕಲ್ಯಾಣಾಧಿಕಾರಿ ಹಾಗೂ ಡಿ ಗ್ರೂಪ್ ನೌಕರನನ್ನು ಅಮಾನತ್ತು ಮಾಡಲಾಗಿದೆ. ನಿನ್ನೆಯಷ್ಟೇ ಲೆಕ್ಕ ಪರಿಶೋಧನಾ ಕಾರ್ಯ ಮುಗಿದಿದೆ.
-ಮಹದೇವಸ್ವಾಮಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ರಾಮನಗರ