ಹಾಸನ [ಜ.25]: ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಹಾಸನ ನಗರದ ಸುತ್ತಮುತ್ತ ಸಾವಿರಾರು ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲು ಅನುಮತಿ ನೀಡುವ ಮೂಲಕ ಹುಡಾದಲ್ಲಿ ದಂಧೆ ನಡೆಯುತ್ತಿದೆ. 

ಇದನ್ನು ತಡೆಯಬೇಕು ಎಂದು ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ ಆರೋಪ ಮಾಡಿದರು.

ರೈತರು ಶೇ.50 ಅನುಪಾತದಲ್ಲಿ ನಿವೇಶನ ನೀಡುವಲ್ಲಿ ಭಾರಿ ಅನ್ಯಾಯ ನಡೆಯುತ್ತಿದೆ. ಅನೇಕ ಕಡೆ ಮೂಲಭೂತ ಸೌಲಭ್ಯಗಳಾದ ಉದ್ಯಾನವನ, ಆಟದ ಮೈದಾನ ಮತ್ತಿತರ ಸೌಲಭ್ಯಗಳನ್ನು ನೀಡಿದೆ. ಆದರೂ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ವಿತರಿಸಲಾಗುತ್ತಿದೆ. ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಇದನ್ನು ಸಚಿವರು ತಡೆಯಬೇಕೆಂದು ಆಗ್ರಹಿಸಿದರು.

ಸಿಎಂ ಯಡಿಯೂರಪ್ಪ ಹತ್ರ ರೇವಣ್ಣ ಹೇಳಿದ್ರೆ ಅನುದಾನ ಬಿಡುಗಡೆ : ಸಚಿವ ಮಾಧುಸ್ವಾಮಿ...

ಹಾಸನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತಿ ಹೊಂದಿದ ಮ್ಯಾನೇಜರ್‌ ತಿಮ್ಮಶೆಟ್ಟಿಎಂಬುವರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿಸಲಾಗುತ್ತಿದೆ ಎಂದು ರೇವಣ್ಣ ಟೀಕಿಸಿದರು. ಆಗ ಮಾತನಾಡಿದ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು, ಹುಡಾ ಆಯುಕ್ತರನ್ನು ಕರೆಸಿ ಎಂದಾಗ, ಆಯುಕ್ತರು ಇರಲಿಲ್ಲ. ನಂತರ ನಿವೃತ್ತ ನೌಕರರಿಂದ ಕೆಲಸ ಮಾಡಿಸಬೇಡಿ ಎಂದು ಉಪ ವಿಭಾಗಾಧಿಕಾರಿ ಡಾ. ನವೀನ್‌ ಭಟ್‌ ಅವರಿಗೆ ಸೂಚಿಸಿದರು.