ಹುಬ್ಬಳ್ಳಿ(ಫೆ.24): ಹುಬ್ಬಳ್ಳಿ-ಕುಂದಗೋಳ ರಸ್ತೆ ಮೇಲೆ ಶೆರೆವಾಡ ಟೋಲ್‌ಗೇಟ್‌ ಸಮೀಪದ ಲಂಡೇನಹಳ್ಳದ ಬಳಿ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕುಂದಗೋಳದ ಇಸ್ಮಾಯಿಲ್‌ ಬಸೀರಸಾಬ (25), ಖಾಜಾಮೊಹಿನು ಬಾಷಾಸಾಬ ಮಿಶ್ರಿಕೋಟಿ (21), ನೂಲ್ವಿಯ ಶಂಕ್ರಪ್ಪ ಬಸಲಿಂಗಪ್ಪ ಅಂಗಡಿ (27) ಮೃತಪಟ್ಟವರು. ರಾತ್ರಿ ಇಸ್ಮಾಯಿಲ್‌ ಬಸೀರಸಾಬ ಬೈಕ್‌ನಲ್ಲಿ ಖಾಜಾಮೊಹಿನ್‌ ಬಾಷಾಸಾಬ ಮಿಶ್ರಿಕೋಟಿ ಜತೆಗೆ ನೂಲ್ವಿ ಕಡೆಯಿಂದ ಕುಂದಗೋಳ ಕಡೆಗೆ ಹೋಗುವಾಗ ಶಂಕ್ರಪ್ಪ ಹಾಗೂ ಸುರೇಶ ವಲಮಣ್ಣವರ ಇನ್ನೊಂದು ಬೈಕ್‌ನಲ್ಲಿ ಎದುರಿನಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ಸುರೇಶ ಕೂಡ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಶೇ.70 ರಷ್ಟು ಯುವಜನಾಂಗ; ಬೆಚ್ಚಿ ಬೀಳಿಸುತ್ತಿದೆ ವರದಿ!

ಮಂಗಳವಾರ ಬೆಳಗ್ಗೆ ನಡೆದ ಇನ್ನೊಂದು ಪ್ರಕರಣದಲ್ಲಿ ಬೈಕ್‌ ಮೂಲಕ ಹಳಿಯಾಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಹಿಂಬದಿ ಕುಳಿತಿದ್ದ ಶಾಂತವ್ವ ಗದಿಗೆಪ್ಪ ಮಡಿವಾಳರ (55) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.