ರಾಜ್ಯದ ಮೊದಲ ಕೊರೋನಾ ಸೋಂಕಿತ ಪೇದೆ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಬಾಗಲಕೋಟೆಯಲ್ಲಿ ಪೇದೆಗಳು ಸೇರಿದಂತೆ ನಾಲ್ವರ ಬಿಡುಗಡೆ| ಮುಧೋಳದ ಪೊಲೀಸ್ ಪೇದೆ ಹಾಗೂ ಜಮಖಂಡಿಯ ಪೊಲೀಸ್ ಪೇದೆ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್| ಕೋವಿಡ್ ಆಸ್ಪತ್ರೆಯಲ್ಲಿ ಗುಣಮುಖರಾದ ಪೇದೆಗಳಿಗೆ ಪೊಲೀಸ್ ಗೌರವದೊಂದಿಗೆ ಚಪ್ಪಾಳೆ ತಟ್ಟಿ ಬರಮಾಡಿಕೊಂಡ ಡಿಸಿ ಕ್ಯಾ.ರಾಜೇಂದ್ರ, ಎಸ್ಪಿ ಲೊಕೇಶ ಜಗಲಾಸರ್ ಸೇರಿದಂತೆ ಹಿರಿಯ ಅಧಿಕಾರಿಗಳು|
ಬಾಗಲಕೋಟೆ(ಮೇ.06): ಕೋವಿಡ್-19 ಆಸ್ಪತ್ರೆಯಿಂದ ಮಂಗಳವಾರವೂ ನಾಲ್ವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಅದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಸಹ ಸೇರಿದ್ದಾರೆ.
ಕರ್ತವ್ಯದಲ್ಲಿದ್ದ ಸಮಯದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿದ್ದ ಮುಧೋಳದ ಪೊಲೀಸ್ ಪೇದೆ ಹಾಗೂ ಜಮಖಂಡಿಯ ಪೊಲೀಸ್ ಪೇದೆ ಸೇರಿದಂತೆ ನಾಲ್ವರು ಗುಣಮುಖರಾಗಿದ್ದರಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಗಾವಿ ಉತ್ತರ ವಲಯದ ಆರಕ್ಷಕ ನಿರೀಕ್ಷಕ ರಾಘವೇಂದ್ರ ಸುಹಾಸ ಅವರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಹೂಗುಚ್ಛ ನೀಡುವ ಮೂಲಕ ಬೀಳ್ಕೊಟ್ಟರು. ಜಮಖಂಡಿಯ ಪಿ-263, ಪಿ-373, ಮುಧೋಳದ ಪಿ-379, ಬಾಗಲಕೋಟೆ ನಗರದ ಪಿ-262 ಗುಣಮುಖರಾಗಿ 14 ದಿನಗಳ ಹೋಂ ಕ್ವಾರಂಟೈನ್‌ಗೆ ತೆರಳಿದ್ದಾರೆ.
ಗರ್ಭಿಣಿಗೆ ಕೊರೋನಾ ಸೋಂಕು: ಉಡಿ ತುಂಬಿದವರಿಗೆ ಆತಂಕ
ಸಮವಸ್ತ್ರದಲ್ಲಿಯೇ ಬಿಡುಗಡೆ:
ಮುಧೋಳದ ಮದರಸಾದ ಭದ್ರತೆಗಿದ್ದ 39 ವರ್ಷದ ಪೊಲೀಸ್ ಪೇದೆ ಹಾಗೂ 43 ವರ್ಷದ ಇನ್ನೋರ್ವ ಪೇದೆಗೆ ಗುಜರಾತ ಮೂಲದ ಧರ್ಮ ಪ್ರಚಾರಕನ ಮೂಲಕ ತಗುಲಿದ್ದ ಕೊರೋನಾ ಸೋಂಕಿನಿಂದ ಇದೀಗ ಗುಣಮುಖರಾಗಿ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಳ್ಳಲು ಇಡೀ ಪೊಲೀಸ್ ಇಲಾಖೆ ಸನ್ನದ್ಧವಾಗಿತ್ತು.
ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ, ಬಾಗಲಕೋಟೆ ಡಿಸಿ ಕ್ಯಾ.ರಾಜೇಂದ್ರ, ಎಸ್ಪಿ ಲೊಕೇಶ ಜಗಲಾಸರ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೋವಿಡ್ ಆಸ್ಪತ್ರೆಯಲ್ಲಿ ಗುಣಮುಖರಾದ ಪೇದೆಗಳಿಗೆ ಪೊಲೀಸ್ ಗೌರವದೊಂದಿಗೆ ಚಪ್ಪಾಳೆ ತಟ್ಟಿ ಬರಮಾಡಿಕೊಂಡರು. ವಿಶೇಷವೆಂದರೆ ಪೊಲೀಸ್ ಪೇದೆಗಳು ಸಮವಸ್ತ್ರದಲ್ಲಿಯೇ ಬಿಡುಗಡೆಯಾಗಿ ಅನುಭವ ಹಂಚಿಕೊಂಡಿದ್ದು ವಿಶೇಷವಾಗಿತ್ತು.
ಕೋವಿಡ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಪೊಲೀಸರು ಹಾಗೂ ಆಸ್ಪತ್ರೆಯಲ್ಲಿ ಆರೈಕೆ ಮಾಡಿದವರನ್ನು ನೆನೆದರು. ಗುಣಮುಖರಾದವರಲ್ಲಿ ಪಿ-373 ಜಮಖಂಡಿಯ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದವನು ಸೇರಿದ್ದಾನೆ. ಜಿಲ್ಲೆಯಲ್ಲಿ 35 ಸೋಂಕಿತ ಪೈಕಿ 17 ಜನ ಗುಣಮುಖರಾಗಿ ಮನೆಗೆ ಸೇರಿದಂತಾಗಿದೆ.