ಕೋಲಾರ(ಏ.18): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ವಿಧಾನಸೌಧದ ಎಲ್ಲ ರಾಜಕೀಯಕ್ಕೆ ಅಲ್ಪವಿರಾಮ ಹೇಳಿ ತಮ್ಮ ಹುಟ್ಟೂರು ಸೇರಿಕೊಂಡಿರುವ ರಮೇಶ್‌ ಕುಮಾರ್‌ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಶುಕ್ರವಾರ ಅವರು ತಮ್ಮ ತೋಟದಲ್ಲಿ ಕೊಳವೆ ಬಾವಿಗಳಿಗೆ ಪೈಪ್‌ಗಳನ್ನು ಅಳವಡಿಸುವ ಕೆಲಸದಲ್ಲಿ ತೊಡಗಿದ್ದರು. ಬೆಳಗ್ಗೆ 9 ಗಂಟೆಗೆ ಪೈಪ್‌ಗಳನ್ನು ಜಾಯಿಂಟ್‌ ಮಾಡುವುದು ಮತ್ತು ಅದನ್ನು ಎತ್ತಿ ಹೊಯ್ದು ಭೂಮಿಗೆ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದರು. ತಮ್ಮ ತೋಟದ ಮನೆಯಲ್ಲಿ ಕೆಲಸ ಮಾಡುವವರ ಜೊತೆಗೆ ಕೆಲಸದಲ್ಲಿ ತೊಡಗುವ ಅವರು ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುತ್ತಲೇ ಇರುತ್ತಾರೆ. ಮಧ್ಯಾಹ್ನ ಕೆಲಸಗಾರರಂತೆ ಊಟದ ಸಮಯ ತೆಗೆದುಕೊಂಡು ನಂತರ 3 ಗಂಟೆಗೆ ಕೆಲಸ ಹಿಡಿಯುತ್ತಾರೆ. ಹೀಗೆ ಸಂಜೆ ವರೆಗೂ ಕೆಲಸ ಮಾಡುವುದು ಅವರ ಹವ್ಯಾಸ.

ನಿತ್ಯ 6 ಕಿ.ಮೀ. ಓಟ:

ಬೆಳಗಿನ ಜಾವ ವಾಕ್‌ ಮಾಡುವುದೂ ತಮ್ಮ ತೋಟದಲ್ಲೇ, ಸುಮಾರು 6 ಕಿ.ಮೀ.ನಷ್ಟುಪ್ರತಿದಿನ ಓಡಾಡುತ್ತಾರೆ. ಕೃಷಿ ಚಟುವಟಿಕೆ ಹೊಸದಲ್ಲ ಸಣ್ಣ ವಯಸ್ಸಿನಿಂದಲೂ ತಮ್ಮ ಅಣ್ಣನ ಜತೆ ಹಸು ಸಾಕಾಣಿಕೆಯಲ್ಲಿ ತೊಡಗಿದ್ದರು. ಎಲ್ಲರಂತೆ ಅವರೂ ತಮ್ಮ ತೋಟದಲ್ಲಿ ಆಲೂಗಡ್ಡೆ, ಬೀನ್ಸ್‌, ಟೊಮೆಟೋ ಎಲ್ಲವನ್ನೂ ಬೆಳೆಯುತ್ತಾರೆ. ಸ್ವಗ್ರಾಮ ಅಡ್ಡಗಲ್‌ನಿಂದ 5 ಕಿ.ಮೀ.ದೂರದಲ್ಲಿರುವ ತೋಟದಲ್ಲಿ ಪಾಲಿಹೌಸ್‌ ನಿರ್ಮಿಸಿರುವ ರಮೇಶ್‌ ಕುಮಾರ್‌ ಕ್ಯಾಪ್ಸಿಕಂ ಬೆಳೆದಿದ್ದಾರೆ, ಇದರ ಪಕ್ಕದಲ್ಲಿಯೇ ಮಾವಿನ ತೋಪು ಇದೆ.

ಕುರಿ ಸಾಕಾಣಿಕೆಗೂ ಸೈ:

ಕಳೆದ ವರ್ಷ ಕ್ಯಾಪ್ಸಿಕಂನ್ನು ಭರ್ಜರಿಯಾಗಿ ಬೆಳೆದು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿ ಕೈ ತುಂಬಾ ಕಾಸು ಮಾಡಿದ್ದರು. ರಮೇಶ್‌ ಕುಮಾರ್‌ ಅವರು ಇತ್ತೀಚೆಗೆ ದಿನೇ ದಿನೇ ಏರುತ್ತಿರುವ ಕುರಿ ಮಾಂಸದ ಬೆಲೆಯನ್ನು ನೋಡಿ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ತಮ್ಮ ತೋಟದಲ್ಲಿರುವ ಕುರಿ ಶೇಡ್‌ನಲ್ಲಿ ಸದ್ಯ 400 ಕುರಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.

ಬನ್ನೂರು ಕುರಿ ಸ್ಪೆಷಲ್‌:

ಸಣ್ಣ ಮರಿಗಳನ್ನೇ ತಂದು ಸಾಕಾಣಿಕೆ ಮಾಡುವುದರಿಂದ ಲಾಭ ಹೆಚ್ಚು ಮಾಡಬಹುದು ಎಂದು ತಿಳಿದಿರುವ ಅವರು, ಆಂಧ್ರಪ್ರದೇಶ ಅಂಗಾಳ್ಳು ಸಂತೆಯಲ್ಲಿ ಮೂರು ತಿಂಗಳ ಕುರಿಗಳನ್ನು ತಂದಿದ್ದಾರೆ. ಮಂಡ್ಯದಲ್ಲಿ ಇತ್ತೀಚೆಗೆ 50 ಬನ್ನೂರು ಕುರಿಗಳನ್ನೂ ತಂದಿದ್ದಾರೆ. ಕೋಲಾರ ಸಮೀಪವಿರುವ ರೋಜರನಹಳ್ಳಿ ಸಂತೆಯಲ್ಲೂ ಕುರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಈ ಕುರಿಗಳನ್ನು ಮೇಯಿಸಲು ತಮ್ಮ ತೋಟದಲ್ಲಿಯೇ ಸೀಮೆ ಹುಲ್ಲು ಹಾಕಿದ್ದಾರೆ ಇದಲ್ಲದೆ ತೋಟದಲ್ಲಿ ನಾಟಿ ಕೋಳಿಗಳನ್ನೂ ಸಾಕಿದ್ದಾರೆ.

ಕಲಬುರಗಿ ಜಿಲ್ಲೆಯಿಂದ ಬಂದ ಪೊಲೀಸರು ವಾಪಸ್‌

ಕೃಷಿ ನೆಲೆವನ್ನು ಬಿಟ್ಟು ಬೆಂಗಳೂರು ಸೇರುತ್ತಿರುವವರಿಗೆ ರಮೇಶ್‌ ಕುಮಾರ್‌ ಒಂದು ಮಾದರಿ, ಇವತ್ತಿನ ಆಧುನಿಕ ಬೇಸಾಯದ ಕ್ರಮಗಳನ್ನು ಅನುಸರಿಸಿ ಕಡಿಮೆ ನೀರಿನಲ್ಲಿ ಹೆಚ್ಚು ಪಡೆಯುವ ಅವರ ಪ್ರಯತ್ನ ಜಿಲ್ಲೆಯ ಕೃಷಿಕರಿಗೆ ದಾರಿ ದೀಪ, ಬರಡು ಭೂಮಿಯಂತಿರುವ ನೆಲದಲ್ಲಿ ಬಂಗಾರ ತೆಗೆಯುತ್ತಿದ್ದಾರೆ ಎಂದು ರಮೇಶ್‌ ಕುಮಾರ್‌ ಹತ್ತಿರದಿಂದ ತಿಳಿದಿರುವ ವಕ್ಕಲೇರಿ ರಾಜಪ್ಪ ತಿಳಿಸಿದ್ದಾರೆ.