ಕೊಟ್ಟೂರು[ಜ. 22]: ನವಭಾರತದ ನಿರ್ಮಾತೃ ಎಂದು ಬೊಗಳೆ ಬಿಟ್ಟು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಧೈರ್ಯವಿದ್ದರೆ ಲೋಕಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ಎದುರಿಸಿ, ಅಧಿಕಾರಕ್ಕೆ ಬರಲಿ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಸವಾಲು ಹಾಕಿದ್ದಾರೆ. 

ಸೋಮವಾರ ಸಂಜೆ ಇಲ್ಲಿನ ಆರಾಧ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ಹಿರೇಮಠಕ್ಕೆ ಆಗಮಿಸಿ ದರ್ಶನಾಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎನ್‌ಆರ್‌ಸಿ ಮತ್ತು ಸಿಎಎ ಇನ್ನಿತರ ಜನವಿರೋಧಿ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಜಾರಿಗೊಳಿಸಲು ರಾಷ್ಟ್ರಪತಿಗಳಿಂದ ಅಂಕಿತ ಪಡೆದಿದ್ದಾರೆ. ಇದಕ್ಕೆ ಜನ ಮೆಚ್ಚುಗೆ, ರಾಷ್ಟ್ರಪ್ರೇಮಿಗಳ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗರು ನಿಜವಾಗಲೂ ಕಾಯ್ದೆ ಜಾರಿಗೆ ಬಂದ ಮೇಲೆ ರಾಷ್ಟ್ರದಲ್ಲಿ ಆಗುತ್ತಿರುವ ಬದಲಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಜನಾದೇಶ ಪಡೆದುಕೊಂಡು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿಯಲು ಮುಂದಾಗಲಿ. ಆಗ ಅವರಿಗೆ ವಾಸ್ತವ ಸ್ಥಿತಿ ಅರಿವಾಗುತ್ತದೆ. ಮೋದಿ ಮತ್ತು ಶಾ ಅವರ ನಿರಂಕುಶ ಆಡಳಿತಕ್ಕೆ ಜನ ಬೆಂಬಲ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಜಾತ್ಯಾತೀತ ದೇಶವಾಗಿ ಉಳಿಯಬೇಕೆಂದರೆ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಾಸ್‌ ಪಡೆಯಬೇಕು. ಇಲ್ಲವಾದರೆ ರಾಷ್ಟ್ರದ ಜನ ಬೀದಿಯಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ರಾಷ್ಟ್ರದಲ್ಲಿ ನೈಜ ಸಮಸ್ಯೆಗಳು ಬೇಕಾದಷ್ಟಿದ್ದು, ಅವುಗಳನ್ನು ಮರೆಮಾಚಲು ಇಂತಹ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವತ್ತ ಮುಂದಾಗಿ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

2014 ಮತ್ತು 2019ರಲ್ಲಿ ರಾಷ್ಟ್ರದ ಜನತೆಗೆ ನೀಡಿದ್ದ ಭರವಸೆಗಳನ್ನೇ ಇನ್ನೂ ಈಡೇರಿಸಲು ಮೋದಿ ಮತ್ತು ಶಾ ಅವರಿಂದ ಆಗಿಲ್ಲ. ಇದೀಗ ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಂಡು ಬೇರೆಡೆಗೆ ಜನರ ಗಮನ ಸಳೆಯುವ ಪರ್ಯಾಯ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ಸೋಮಶೇಖರ ರೆಡ್ಡಿ ಬಂಧಿಸಿ:

ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮೇಲಿರುವ ಕೇಸನ್ನು ದಾಖಲಿಸಿಕೊಂಡು ಬಂಧಿಸಲು ಮುಂದಾಗಬೇಕಿದ್ದ ಸರ್ಕಾರವೇ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರುತ್ತಿದೆ. ಶಾಸಕ ಸೋಮಶೇಖರ ರೆಡ್ಡಿಗೆ ಕೋರ್ಟ್‌ ಜಾಮೀನು ನಿರಾಕರಿಸಿದರೂ ಅವರನ್ನು ಬಂಧಿಸುವ ಗೋಜಿಗೆ ಪೊಲೀಸರು ಹೋಗದಿರುವ ನಾಚಿಕೆಗೇಡಿನ ಸಂಗತಿ ಎಂದರು.

ಹಂಪಿ ಉತ್ಸವದಲ್ಲಿ ಮುಖ್ಯಮಂತ್ರಿ ಜೊತೆ ಸೋಮಶೇಖರ ರೆಡ್ಡಿ ಬಹಿರಂಗವಾಗಿ ಭಾಗವಹಿಸಿದ್ದರೂ ಅದೇ ಕಾರ್ಯಕ್ರಮದಲ್ಲಿದ್ದ ಪೊಲೀಸ್‌ ಐಜಿಪಿ, ಎಸ್‌ಪಿ ಮತ್ತಿತರ ಹಿರಿಯ ನಾಯಕರು ರೆಡ್ಡಿ ಅವರನ್ನು ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಕ್ಕೂ ಮುಂದಾಗಲಿಲ್ಲ. ಇದು ಬಿಜೆಪಿ ಸರ್ಕಾರದ ಧೋರಣೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಜಿಪಂ ಸದಸ್ಯ ಎಂಎಂಜೆ ಹರ್ಷವರ್ಧನ್‌, ಧರ್ಮಕರ್ತ ಸಿಎಚ್‌ಎಂ ಗಂಗಾಧರ, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ, ಕಾಂಗ್ರೆಸ್‌ ವಕ್ತಾರ ಪತ್ರೇಶ ಹಿರೇಮಠ್‌ ಮತ್ತಿತರರು ಇದ್ದರು.