ಕಾರವಾರ-ಮಡಗಾಂವ್ ರೈಲು ಪುನಾರಂಭಿಸಲು ಆಗ್ರಹ
ಕೋವಿಡ್-19 ಸಂದರ್ಭದಲ್ಲಿ ಎಲ್ಲಾ ರೈಲು ಬಂದ್ ಮಾಡಲಾಗಿದ್ದು, ಬಳಿಕ ಪುನಃ ರೈಲು ಸಂಚಾರ ಆರಂಭವಾದರೂ ಈ ಡೆಮೋ ಟ್ರೇನ್ ಪ್ರಾರಂಭಿಸಿಲ್ಲ|ಕಾಂಗ್ರೆಸ್‌ದಿಂದ ಈಗಾಗಲೇ ರೈಲ್ವೆ ಇಲಾಖೆಗೆ ಮನವಿ ನೀಡಲಾಗಿದೆ. ಅವರಿಂದ ಸ್ಪಂದನೆ ಸಿಕ್ಕಿಲ್ಲ| 10 ದಿನದಲ್ಲಿ ಪ್ರಾರಂಭಿಸದಿದ್ದರೆ ರೈಲು ರೋಖೋ: ಸತೀಶ ಸೈಲ್ ಎಚ್ಚರಿಕೆ|
ಕಾರವಾರ(ಮಾ.05): ಕಾರವಾರದಿಂದ ಗೋವಾದ ಮಡಗಾಂವ್‌ಗೆ ತೆರಳುವ ಡೆಮೋ ಟ್ರೇನ್ ಬಂದ್ ಆಗಿದ್ದು, ಪ್ರಾರಂಭಿಸುವಂತೆ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. 10 ದಿನದಲ್ಲಿ ಪ್ರಾರಂಭವಾಗದೇ ಇದ್ದರೆ ರೈಲ್ವೆ ರೋಖೋ ಮಾಡುತ್ತೇವೆ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿನಿತ್ಯ ಬೆಳಗ್ಗೆ ಹಾಗೂ ರಾತ್ರಿ ಸಂಚಾರ ನಡೆಸುತ್ತಿದ್ದು, ಇದು ಗೋವಾ ರಾಜ್ಯಕ್ಕೆ ಕೆಲಸಕ್ಕೆ ತೆರಳುವವರಿಗೆ ಅನುಕೂಲ ಆಗುತ್ತಿತ್ತು. ಆದರೆ ಕೋವಿಡ್-19 ಸಂದರ್ಭದಲ್ಲಿ ಎಲ್ಲಾ ರೈಲು ಬಂದ್ ಮಾಡಲಾಗಿದ್ದು, ಬಳಿಕ ಪುನಃ ರೈಲು ಸಂಚಾರ ಆರಂಭವಾದರೂ ಈ ಡೆಮೋ ಟ್ರೇನ್ ಪ್ರಾರಂಭಿಸಿಲ್ಲ. ಕಾಂಗ್ರೆಸ್‌ದಿಂದ ಈಗಾಗಲೇ ರೈಲ್ವೆ ಇಲಾಖೆಗೆ ಮನವಿ ನೀಡಲಾಗಿದೆ. ಅವರಿಂದ ಸ್ಪಂದನೆ ಸಿಕ್ಕಿಲ್ಲ. ಮಾ. 15ರೊಳಗೆ ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದರೆ ರೈಲ್ವೆ ತಡೆದು ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿನಿತ್ಯ ಗೋವಾಕ್ಕೆ ತೆರಳಲು ಖಾಸಗಿ ಅಥವಾ ಬಾಡಿಗೆ ವಾಹನ ವ್ಯವಸ್ಥೆ ಮಾಡಿಕೊಂಡರೆ ಖರ್ಚು ಹೆಚ್ಚಾಗುತ್ತದೆ. ವೇತನ ಪೂರ್ಣ ಅದಕ್ಕೆ ನೀಡಬೇಕಾಗುತ್ತದೆ. ಡೆಮೋ ಟ್ರೇನ್ ನೂರಾರು ಜನರಿಗೆ ಅನುಕೂಲವಾಗಿದ್ದು, ಕೂಡಲೇ ಆರಂಭಿಸಬೇಕು. ಬೆಂಗಳೂರಿನಲ್ಲಿ ಮೆಟ್ರೋ, ಮಹಾರಾಷ್ಟ್ರದಲ್ಲಿ ಸ್ಥಳೀಯ ರೈಲ್ವೆ ಸಂಚಾರ ಈಗಾಗಲೇ ಶುರುವಾಗಿದೆ. ಆದರೆ ಕಾರವಾರ ಮಡಗಾಂವ ಡೆಮೋ ರೈಲ್ವೆಗೆ ಮಾತ್ರ ಕೋವಿಡ್-19 ನೆಪವಿದ್ದಂತೆ ಕಾಣುತ್ತದೆ ಎಂದು ಕಿಡಿಕಾರಿದರು.
ಕಾರವಾರದಲ್ಲೊಂದು ಮಾರ್ಕೆಪೂನಾವ್ ಅನ್ನೋ ವಿಭಿನ್ನ ಜಾತ್ರೆ
ರಾಜಕೀಯ ಬೇಡ
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಗಳು ರಾಜಕೀಯ ಮಾಡಬಾರದು. ಒಳ್ಳೆಯ ಬೆಳವಣಿಗೆಯಲ್ಲ. ತಾವು ಶಾಸಕರಿದ್ದಾಗ ಕಪ್ಪು ಮರಳಿನ ತೀರ ತಿಳ್‌ಮಾತಿಗೆ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಿ ಮಾಡಿಸಿದ್ದೆನು. ಆದರೆ ಈ ಕೆಲಸ ಆಗಿಯೇ ಇಲ್ಲ. ಸೇತುವೆ ಆಗಿದ್ದರೆ ಪ್ರವಾಸಿಗರ ಆಕರ್ಷಣೆಯಾಗುತ್ತಿತ್ತು. ದುರದೃಷ್ಟಈ ಸೇತುವೆ ನಿರ್ಮಾಣಕ್ಕೆ ಇಚ್ಛಾಶಕ್ತಿ ಇಲ್ಲದೇ ನಿರ್ಮಾಣ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಂಗಣದ ಬಗ್ಗೆ ಪ್ರಶ್ನಿಸಿದಾಗ, ತಾಲೂಕಿನ ಮಾಜಾಳಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಈಗಾಗಲೇ ನಿರ್ಮಾಣ ಹಂತದಲ್ಲಿ ಇರಬೇಕಿತ್ತು.ಆದರೆ ರಾಜಕೀಯದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಕ್ರೀಡಾಂಗಣಕ್ಕೆ ತೆರಳುವ ರಸ್ತೆ ಅಗಲೀಕರಣ ಮಾಡುವಾಗ ಅಕ್ಕಪಕ್ಕದ ಮನೆ ಹೋಗುತ್ತದೆ ಎಂದು ಶಾಸಕರು, ಸಚಿವರು ಹೇಳಿದ್ದಾರೆ. ಯಾರ ಮನೆಯೂ ಹೋಗುವುದಿಲ್ಲ. ಅಲ್ಲಿನ ರಸ್ತೆ ಅಗಲವಾಗಿದೆ. ಒಂದು ವೇಳೆ ಯಾರದ್ದಾದರೂ ಮನೆ ಕೆಡವ ಬೇಕು ಎಂದಾದರೆ ತಾವು ವಾಸಿಸುತ್ತಿರುವ ಮನೆ ಬಿಟ್ಟು ಕೊಡುತ್ತೇವೆ ಎಂದು ಸವಾಲು ಹಾಕಿದ ಸೈಲ್, ಯೋಜನೆ ಅನುಷ್ಠಾನಕ್ಕೆ ಶಕ್ತಿ ಪ್ರದರ್ಶನ ಮಾಡದೇ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ (ಕೆಸಿಎ)ಹಣವಾಗಿದೆ. ಪ್ರಸ್ತಾವನೆ ನಾನು ಶಾಸಕನಿದ್ದಾಗ ಹೇಗಿತ್ತೋ ಹಾಗೆ ಇದೆ. ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಸರ್ಕಾರಿ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಪ್ರಸ್ತಾವನೆ ನೀಡಿದ್ದರು. ಆದರೆ ಕೆಸಿಎ ಒಪ್ಪಿಗೆ ನೀಡಿರಲಿಲ್ಲ. ಈ ಗೊಂದಲದಿಂದ ವಿಳಂಬವಾಗಿದೆ. ಅದಿಲ್ಲವಾದಲ್ಲಿ ಈಗಾಗಲೇ ನಿರ್ಮಾಣವಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಶಾಸಕರು ಕ್ರೀಡಾಂಗಣ ಮನಸ್ಸು ಮಾಡಬೇಕು. ನೂರಾರು ಜನರಿಗೆ ಉದ್ಯೋಗ ಸಿಗುತ್ತದೆ. ಕಾರವಾರ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಜಕೀಯ ಬೆರೆಸದೇ ಜನರಿಗಾಗಿ ಈ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ದಿಲೀಪ ನಾಯ್ಕ, ಸಿದ್ದಾರ್ಥ ನಾಯ್ಕ, ಪ್ರಭಾಕರ ಮಾಳ್ಸೆಕರ, ಪ್ರ್ಯಾಂಕಿ ಗುಡಿನೊ, ಮೋಹನ ನಾಯ್ಕ, ಪಾಂಡುರಂಗ ರೇವಂಡಿಕರ, ಅನಿಲನಾಯ್ಕ, ಮಾರುತಿ ನಾಯ್ಕ ಮೊದಲಾದವರು ಇದ್ದರು.