ಧಾರವಾಡ(ಜು.19): ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾಮಾನ್ಯ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಕೂಡಲೇ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ಕೊರೋನಾ ಹಾವಳಿಯನ್ನು ಹಿಡಿತಕ್ಕೆ ತರಲು ಹೆಚ್ಚಿನ ಕ್ರಮ ಜರುಗಿಸಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಹೃದಯ ಕಾಯಿಲೆ, ಕ್ಯಾನ್ಸರ್‌, ಕಿಡ್ನಿ ಇತರೇ ಕಾಯಿಲೆಗಳನ್ನು ಹೊಂದಿದ ರೋಗಿಗಳು ತಪಾಸಣೆಗೆಂದು ಆಸ್ಪತ್ರೆಗೆ ಹೋದರೆ ನಮ್ಮಲ್ಲಿ ಬೆಡ್‌ ಖಾಲಿ ಇಲ್ಲ ಹಾಗೂ ಕೊರೋನಾ ಟೆಸ್ಟ್‌ ಮಾಡಿಸಿಕೊಂಡು ಬರಬೇಕೆಂದು ಸೂಚಿಸಿ ರೋಗಿಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯವರು ಮರಳಿ ಕಳುಹಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಈಗಾಗಲೇ ಕೆಲ ರೋಗಿಗಳು ನಿಧನ ಹೊಂದಿದ್ದಾರೆ. ಆದಕಾರಣ, ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಎಲ್ಲ ಆಸ್ಪತ್ರೆಗಳಿಗೂ ನಿರ್ದೇಶನ ನೀಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡದ 45ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ

ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಜನರು ತೀವ್ರ ಆತಂಕಗೊಂಡಿದ್ದು, ಜಿಲ್ಲಾಡಳಿತ 10 ದಿನ ಲಾಕ್‌ಡೌನ್‌ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಸಾರ್ವಜನಿಕ ಕೆಲಸಕ್ಕಾಗಿ ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿದರೆ ಕೊರೋನಾ ಕಾರಣದಿಂದ ಧಾರವಾಡದಲ್ಲಿ ಜಿಲ್ಲಾಡಳಿತದ ಸಭೆಯಿದ್ದು ಸಭೆಗೆ ಭಾಗವಹಿಸಲು ಹೋಗುತ್ತಿದ್ದೇವೆ ಎಂದು ಕಾರಣ ನಿಡುತ್ತಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಸರಿಯಾಗಿ ಜಾರಿಯಾಗುತ್ತಿಲ್ಲ ಹಾಗೂ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಕಚೇರಿಗಳಲ್ಲಿ ಆಗುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ರೋಗಿಗಳಿಗೆ ಹಾಗೂ ಕೊರೋನಾ ಸೊಂಕಿತರಿಗೆ ಊಟ ಹಾಗೂ ಚಿಕಿತ್ಸೆಯನ್ನು ಸರಿಯಾಗಿ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ:

ಜಿಲ್ಲೆಯಲ್ಲಿ ಮುಂಗಾರು ಬೆಳೆಗೆ ಗೊಬ್ಬರದ ಅಭಾವ ಇಲ್ಲ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತ ಘೋಷಿಸಿದೆ. ಆದರೆ, ಮಾರುಕಟ್ಟೆಯಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಯೂರಿಯಾ ಗೊಬ್ಬರ ಕೇಳಿದರೆ ಬೇರೆ ಬೇರೆ ಫೆಸ್ಟಿಸೈಡ್ಸ್‌ ಹಾಗೂ ಬೇರೆ ಗೊಬ್ಬರ ತೆಗೆದುಕೊಂಡರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯೂರಿಯಾ ಗೊಬ್ಬರ ಮಾತ್ರ ಬೇಕೆಂದು ಕೇಳಿದರೆ ಹೆಚ್ಚಿನ ದರ ಕೊಟ್ಟರೆ ಮಾತ್ರ ಗೊಬ್ಬರ ಕೊಡುತ್ತಿದ್ದಾರೆ. ಆದಕಾರಣ, ಈಗಾಗಲೇ ಮಳೆಯಾಗಿದ್ದು, ಎಲ್ಲ ರೈತರಿಗೆ ಮುಂಗಾರು ಬೆಳೆಗೆ ಯೂರಿಯಾ ಗೊಬ್ಬರ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.