ಹುಬ್ಬಳ್ಳಿ(ಜು.19): ನಗರದ ಕಸಬಾಪೇಟೆ ಠಾಣೆ ಪೊಲೀಸರಿಗೆ ಕೊರೋನಾ ಕಾಟ ಮುಂದುವರಿದಿದ್ದು, ಶನಿವಾರ ಮತ್ತೆ ಆರು ಸಿಬ್ಬಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇಲ್ಲಿನ ಒಟ್ಟಾರೆ 17 ಪೊಲೀಸರಿಗೆ ಸೋಂಕು ತಗಲಿದ್ದು, ಇನ್ನೂ ಏಳು ಜನ ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ. ಆದರೂ ಠಾಣೆಯನ್ನು ಸೀಲ್‌ಡೌನ್‌ ಮಾಡದಿರುವುದು, ಸ್ಯಾನಿಟೈಸಿಂಗ್‌ ನಡೆಸದಿರುವುದು ಇನ್ನುಳಿದ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಕಸಬಾಪೇಟೆ ಠಾಣೆಯಲ್ಲಿ ಒಬ್ಬ ಇನಸ್ಪೆಕ್ಟರ್‌, ಒಬ್ಬ ಸಬ್‌ ನಸ್ಪೆಕ್ಟರ್‌, 8 ಎಎಸ್‌ಐ, 17 ಹೆಡ್‌ಕಾನ್‌ಸ್ಟೇಬಲ್‌, ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ ಸೇರಿ ಒಟ್ಟು 76 ಸಿಬ್ಬಂದಿ ಇದ್ದಾರೆ. ಇವರಲ್ಲಿ 17 ಜನರಿಗೆ ಪಾಜಿಟಿವ್‌ ಬಂದಿದೆ. 7 ಜನ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ. ಇಲ್ಲೀಗ ದಿನದಿಂದ ದಿನಕ್ಕೆ ಸೋಂಕಿತ ಸಿಬ್ಬಂದಿಯ ಸಂಖ್ಯೆ ಏರುತ್ತಿರುತ್ತಿದೆ. ಆದರೆ, ಈ ವರೆಗೂ ಠಾಣೆಯನ್ನು ಸೀಲ್‌ಡೌನ್‌ ಮಾಡಿಲ್ಲ. ಸಿಬ್ಬಂದಿ ಇನ್ನೂ ಠಾಣೆಯಲ್ಲಿ ಕೆಲಸ ಮುಂದುವರಿಸಿದ್ದಾರೆ. ಇದರಿಂದ ಉಳಿದ ಸಿಬ್ಬಂದಿಯಲ್ಲೂ ಆತಂಕ ಮೂಡಿದೆ. ಸಮರ್ಪಕವಾಗಿ ಸ್ಯಾನಿಟೈಸಿಂಗ್‌ ಕೂಡ ಮಾಡಿಸುತ್ತಿಲ್ಲ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ಅರ್ಥ ಕಳೆದುಕೊಳ್ಳುತ್ತಿದೆ ಲಾಕ್‌ಡೌನ್‌..!

ಫ್ರಂಟ್‌ಲೈನ್‌ ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಆರೋಗ್ಯದ ಕುರಿತ ನಿಷ್ಕಾಳಜಿ ಪ್ರಜ್ಞಾವಂತ ನಾಗರಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೆ ಅಗತ್ಯ ಕ್ರಮ ಕೈಗೊಂಡು ಪೊಲೀಸ್‌ ಸಿಬ್ಬಂದಿಯ ಆರೋಗ್ಯ ಕಾಪಾಡುವಂತೆ ಹಲವರು ಒತ್ತಾಯಿಸಿದ್ದಾರೆ.

10ಕ್ಕೂ ಹೆಚ್ಚು

ಇನ್ನು, ಕಸಬಾ ಜತೆಗೆ ಇಲ್ಲಿನ ಉಪನಗರ ಪೊಲೀಸ್‌ ಠಾಣೆಯ 3, ಮಹಿಳಾ ಪೊಲೀಸ್‌ ಠಾಣೆಯ ಒಬ್ಬರು, ವಿದ್ಯಾನಗರದ ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಐ ಮತ್ತು ಪಿಸಿ ಹಾಗೂ ಸೈಬರ್‌ ಕ್ರೈಂನ ಒಬ್ಬರು ಸೇರಿ ಶನಿವಾರ 13ಕ್ಕೂ ಹೆಚ್ಚಿನವರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 45 ಮೀರಿದೆ ಎಂದು ಮೂಲಗಳು ತಿಳಿಸಿವೆ.

ಇದರಿಂದ ದಿನೇ ದಿನೆ ಪೊಲೀಸರಲ್ಲಿ ಮಾನಸಿಕ ಒತ್ತಡ ಹೆಚ್ಚಳಕ್ಕೂ ಕಾರಣವಾಗಿದೆ. ಸದಾ ಆತಂಕದಲ್ಲಿಯೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತಾಗಿದೆ. ಇದೆ ಕಾರಣಕ್ಕೆ ಮೊದಲಿನಷ್ಟು ಬಿಗಿಯಾಗಿ ಈ ಬಾರಿಯ ಲಾಕ್‌ಡೌನ್‌ ಜಾರಿಯಾಗಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಈ ನಿಟ್ಟಿನಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವಾಗಬೇಕಿದೆ ಎಂದು ಸಿಬ್ಬಂದಿ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.