ತಿಪಟೂರು(ನ.27): ರಾಜಕೀಯ ಒಳ ಜಗಳದಲ್ಲಿಯೇ ಕಾಲಹರಣ ಮಾಡುತ್ತಿರುವ ಮುಖ್ಯಮಂತ್ರಿಗಳು ಅದರಿಂದ ಹೊರಬಂದು ಜವಾಬ್ದಾರಿಯುತವಾಗಿ ರಾಜ್ಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದ್ದಾರೆ. 

ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ರಾಜ್ಯ ಸರ್ಕಾರ ವಿದ್ಯುತ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿ ತಾಲೂಕು ಕಾಂಗ್ರೆಸ್‌ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಾಗೂ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಬದಲಾವಣೆ ಮಾಡಿದ್ದು, ಅನ್ನಭಾಗ್ಯ ಯೋಜನೆಯಲ್ಲಿ ಇಂದಿನ ಸರ್ಕಾರ 2ಕೆಜಿ ಅಕ್ಕಿಯನ್ನು ಕಡಿಮೆ ನೀಡುತ್ತಿದೆ. ವಿದ್ಯುತ್‌ ದರವನ್ನು ಜಾಸ್ತಿ ಮಾಡಿ ಜನ ಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ ಎಂದು ಬಿಎಸ್‌ವೈ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ರಾಜ್ಯದಲ್ಲಿ ಬೇಕಾದಷ್ಟು ಮಳೆ ಬಂದು ಡ್ಯಾಂಗಳು ಭರ್ತಿಯಾಗಿದ್ದರೂ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಸರ್ಮಪಕವಾಗಿ ಆಡಳಿತ ನಡೆಸುತ್ತಿಲ್ಲ. ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಸಾಕಷ್ಟು ಯೋಜನೆಗಳು, ಕಾರ್ಯಕ್ರಮಗಳನ್ನು ಇಂದಿನ ಸರ್ಕಾರ ಮಾಡಿಲ್ಲ. ಕೋರೊನಾದಿಂದಾಗಿ ಜನರು ಸಾಕಷ್ಟುಕಷ್ಟಗಳನ್ನು ಅನುಭವಿಸುವಂತಾಯಿತು. ಯುವಕರು-ಯುವತಿಯರು ಉದ್ಯೋಗವಿಲ್ಲದೆ ಪರದಾಡುವಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾದರೂ ಯಾವೊಂದು ಪರಿಹಾರವನ್ನು ಸರ್ಕಾರ ಮಾಡಲಿಲ್ಲ ಎಂದು ಸರ್ಕಾರಗಳ ವಿರುದ್ಧ ಹರಿಹಾಯ್ದ ಅವರು ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಜನರು ಎಚ್ಚರಿಕೆಯಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.

ನನಗೆ ಬಿಜೆಪಿಯಿಂದ ನಿರಂತರ ಆಹ್ವಾನವಿದೆ : ಕೈ ಪ್ರಮುಖ ನಾಯಕ

ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಮಡೇನೂರು ಕಾಂತರಾಜು ಮಾತನಾಡಿ, ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಏಕಾಏಕಿ ವಿದ್ಯುತ್‌ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿರುವುದು ಖಂಡನೀಯ ಎಂದರು.

ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಹಾಗೂ ನಗರಸಭಾ ಸದಸ್ಯ ವಿ.ಯೋಗೇಶ್‌, ತಾ.ಪಂ ಅಧ್ಯಕ್ಷ ಜಿ.ಎಸ್‌.ಶಿವಸ್ವಾಮಿ, ಮಾಜಿ ಅಧ್ಯಕ್ಷ ಎನ್‌.ಎಂ.ಸುರೇಶ್‌, ಸದಸ್ಯ ಎಂ.ಡಿ.ರವಿಕುಮಾರ್‌, ಕಾಂಗ್ರೆಸ್‌ ನಗರಾಧ್ಯಕ್ಷ ಟಿ.ಎನ್‌.ಪ್ರಕಾಶ್‌, ನಗರಸಭಾ ಸದಸ್ಯ ಮಹೇಶ್‌, ಎಪಿಎಂಸಿ ನಿರ್ದೇಶಕ ಬಜಗೂರು ಮಂಜುನಾಥ್‌, ಕಾರ್ಯಕರ್ತರಾದ ಅಣ್ಣಯ್ಯ, ಸುಜಿತ್‌ಭೂಷಣ್‌, ಲೋಕ್‌ನಾಥ್‌ಸಿಂಗ್‌ ಮತ್ತಿತರರಿದ್ದರು.