ಬೆಳಗಾವಿ(ಡಿ.23): ಬಿಜೆಪಿ ಅಜೆಂಡಾನೆ ಹಿಂದೂತ್ವವಾಗಿದೆ. ಎಲ್ಲಿ ಅವಕಾಶ ಸಿಗುತ್ತೆ ಈ ರೀತಿ ಮಾಡುತ್ತಾರೆ. ಇದರ ವಿರುದ್ಧವಾಗಿ ಪ್ರತಿಭಟನೆ ಮುಂದೆಯೂ ನಡೆಯುತ್ತೆ, ದೇಶದಲ್ಲಿ ಇದ್ದವರಿಗೆ ರೇಷನ್ ಕಾರ್ಡ್ ಕೊಡಲು ಆಗುತ್ತಿಲ್ಲ, ಇನ್ನು ಬೇರೆ ದೇಶದವರಿಗೆ ಹೇಗೆ ಪೌರತ್ವ ಕೊಡುತ್ತಾರೆ. ಕಾನೂನು ಮುಂದಿಟ್ಟುಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದ ಬಗ್ಗೆ ಸೋಮವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು,  ಕಾಂಗ್ರೆಸ್‌ನವರು ಜನರ ದಾರಿ ತಪ್ಪಿಸುತ್ತಿಲ್ಲ. ಎಲ್ಲ ಪಕ್ಷಗಳು, ಇಡಿ ದೇಶವೇ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದರಲ್ಲಿ ತಪ್ಪೇನಿದೆ, ಬಿಜೆಪಿಯವರು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ನಾವು ರಾಜಕೀಯವಾಗಿ ಬಳಸಿಕೊಳ್ಳುತ್ತಿದೇವೆ ಅಂತಾ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಒಡೆದು ತಮ್ಮ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ಮುಂದೆಯೂ ಇಂತಹ ಕಾನೂನುಗಳನ್ನು ತರ್ತಾನೇ ಇರ್ತಾರೆ. ದೇಶದ ಆರ್ಥಿಕತೆ ಹಳ್ಳ ಹಿಡಿದಿದ್ದು ಜನರ ದಿಕ್ಕು ತಪ್ಪಿಸಲು ಪೌರತ್ವ ಕಾಯ್ದೆಯನ್ನು ಮುಂದೆ ತಂದಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದವರು ದೇಶದ್ರೋಹಿಗಳು ಅನ್ನೋಕೆ ಬಿಜೆಪಿಯವರು ಯಾರು? ಎಂದು ಮಾಜಿ ಸಚಿವ ‌ ಸತೀಶ್ ಜಾರಕಿಹೊಳಿ ಅವರು ಪ್ರಶ್ನೆ ಮಾಡಿದ್ದಾರೆ. 

ಬಿಜೆಪಿಗೆ ಹೋಗಿರುವ ಶಾಸಕರನ್ನ ಸೈಡ್ ಲೈನ್ ಮಾಡೇ ಮಾಡುತ್ತಾರೆ. ಅನೇಕರು ಬಿಜೆಪಿಗೆ ಹೋಗಿ ವಾಪಸ್ ಬಂದಿದ್ದಾರೆ. ಹೊರಗಿನಿಂದ ಬಂದ ಎಲ್ಲರನ್ನೂ ಮಂತ್ರಿ ಮಾಡಿ ಸರ್ಕಾರ ನಡೆಸುವುದು ಬಹಳ ಕಷ್ಟ, ಬಿಜೆಪಿಯಲ್ಲಿ ಈಗಾಗಲೇ 20 ಹಿರಿಯ ಶಾಸಕರಿದ್ದಾರೆ. ಐವರಿಗೆ ಸಚಿವ ಸ್ಥಾನ ಕೊಟ್ಟರೆ ಉಳಿದ 15 ಜನ‌ ಅಸಮಾಧಾನಗೊಳ್ಳುತ್ತಾರೆ. ಯಡಿಯೂರಪ್ಪ ಹೇಗೆ ಸರ್ಕಾರ ನಡೆಸುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಬಿಜೆಪಿಗೆ ಹೋದವರು ಯಾರು ಸೇವೆ ಮಾಡಬೇಕೆಂದು ಹೋದವರಲ್ಲ. ಅಧಿಕಾರ, ಖಾತೆಗೋಸ್ಕರ ಹೋದವರಾಗಿದ್ದಾರೆ. ಇವರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ರಮೇಶ್ ಜಾರಕಿಹೊಳಿಗೆ ಏನೇ ಕೊಟ್ಟರು ಕ್ಷೇತ್ರಕ್ಕೆ ಉಪಯೋಗವಿಲ್ಲ, ಕೇವಲ ರಮೇಶ್ ಜಾರಕಿಹೊಳಿ ಸ್ವಂತಕ್ಕೆ ಲಾಭ ಆಗುತ್ತೆ, ಬಿಜೆಪಿಯನ್ನ ರಮೇಶ್ ಜಾರಕಿಹೊಳಿ‌ ನೀರಲ್ಲಿ ಬಿಡುತ್ತಾನೆ ಎಂದು ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ಮಿತ್ರಪಕ್ಷಗಳಿಗೆ ಗೆಲುವಾಗಿದೆ. ಜನ ಬದಲಾವಣೆ ಬಯಸಿ ಮತ ಹಾಕಿದ್ದಾರೆ. ಒಂದು ಸಲ ಎರಡು ಸಲ‌ ನೋಡಿ 3ನೇ ಸಲ ತೀರ್ಮಾನ ಮಾಡುತ್ತಾರೆ. ಯಾರು ಒಳ್ಳೆಯದನ್ನ ಮಾಡಲ್ವೋ ಅವರನ್ನ ಜನ ಸೋಲಿಸುತ್ತಾರೆ ಎಂದು ಹೇಳಿದ್ದಾರೆ. 

ಸತೀಶ್ ಮಾನಸಿಕ ಅಸ್ವಸ್ಥ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಬೇಕಾದ್ರು ರಮೇಶ ಜಾರಕಿಹೊಳಿ ಬೈಯುತ್ತಾರೆ. ಸಿಎಂ ಯಡಿಯೂರಪ್ಪನಿಗೆ ಯಾವಾಗ ಬೈಯುತ್ತಾನೆ ಎಂಬುದನ್ನ ಕಾದು ನೋಡಬೇಕು. ವಿಷಕನ್ಯೆ ಎಂದು ಹೇಳಿದ್ದಾನೆ, ನನಗೆ ಹುಚ್ಚಾ ಎನ್ನುತ್ತಾನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ನಾಯಕ ಎಂದಿದ್ದಾನೆ. ರಮೇಶ ಜಾರಕಿಹೊಳಿ ಬೆನ್ನು ಹತ್ತಿದ್ದರೆ ಎಲ್ಲರ ತಲೆ ಕೆಡುತ್ತೆ, ಅವನ ರಕ್ತ ಬಲಾವಣೆ ಮಾಡಲು ಸಾಧ್ಯವಿಲ್ಲ, ರಕ್ತ ಬದಲಾವಣೆ ಆದ್ರೇ ಚೆಂಜ್ ಆಗುತ್ತಾನೆ ಎಂದು ರಮೇಶ್ ವಿರುದ್ಧ ಸತೀಶ್ ವ್ಯಂಗ್ಯವಾಡಿದ್ದಾರೆ. 

ರಮೇಶ್ ಮಾತು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡಬೇಕು. ಮುಂದೆ ಸಚಿವರಾಗಿ ರಮೇಶ ಜಾರಕಿಹೊಳಿ ಬಿಎಸ್‌ವೈ ಪಕ್ಕದಲ್ಲಿ ಕೂರಲಿದ್ದಾರೆ. ಇಂತವರನ್ನ ಪಕ್ಕದಲ್ಲಿ ಕೂಡಿಸಿಕೊಂಡು ಬಿಎಸ್‌ವೈ ಹೇಗೆ ರಾಜ್ಯಭಾರ ಮಾಡ್ತಾರೆ ನೋಡಬೇಕು. ರಮೇಶ್ ಗೋಕಾಕ್‌ಗೆ ಬರುವುದಿಲ್ಲ, ಮುಂದಿನ‌ ಮೂರುವರೆ ವರ್ಷದ ನಂತರ ಹಾಜರ್ ಆಗುತ್ತಾನೆ ಎಂದು ಹೇಳಿದ್ದಾರೆ. ರಮೇಶ್ ಅಳಿಯ ಅಂಬಿರಾವ್ ಜನರ ಸೇವೆಗಾಗಿ ಓಡಾಡುವುದಿಲ್ಲ, ಸರ್ಕಾರಿ ಕೆಲಸ, ಟೆಂಡರ್, ಪಂಚಾಯಿತಿ ಕಂಟ್ರೋಲ್ ಇಷ್ಟೇ ಮಾಡುತ್ತಾನೆ ಎಂದು ತಿಳಿಸಿದ್ದಾರೆ.