ಬ್ಯಾಡಗಿ(ಫೆ.24): ನಾಲ್ಕು ದಶಕಗಳ ಹಿಂದೆ ಇದ್ದ ರಾಜಕಾರಣ ಬದಲಾಗಿದ್ದು, ಅದಕ್ಕೆ ತಕ್ಕಂತೆ ಕಾಂಗ್ರೆಸ್‌ ಪ್ರಣಾಳಿಕೆಗಳು ಬದಲಾಗಬೇಕಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆ ಫಲಿತಾಂಶವನ್ನು ನೋಡಿದ ಬಳಿಕ ಪಕ್ಷದ ಪ್ರಣಾಳಿಕೆಯಲ್ಲಿ ಬದಲಾವಣೆ ತರಬೇಕಿದೆ. ದೆಹಲಿ ಚುನಾವಣೆ ಫಲಿತಾಂಶದ ನಂತರ ಪಕ್ಷಕ್ಕೆ ಹೆಚ್ಚು ಹಾನಿಯಾಗಿಲ್ಲ. ಆದರೆ, ನಮ್ಮ ಶಕ್ತಿ ಕಡಿಮೆ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳು ನೇರವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದ ಅವರು, ಬೆಳಗಾವಿ ರಾಜಕಾರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ರಾಜಕೀಯ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಇದೀಗ ಕೈ ಮೀರಿ ಹೋಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಕ್ಷವನ್ನು ಪುನರ್‌ ರಚನೆ ಹಾಗೂ ಸಂಘಟನೆ ಮಾಡುವ ನಿಟ್ಟಿನಲ್ಲಿ ಹೊಸ ಹೊಸ ನಾಯಕತ್ವಕ್ಕೆ ಹೈಕಮಾಂಡ್‌ ಅವಕಾಶ ನೀಡಬೇಕು ಎಂದಿರುವ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಸಾರಥ್ಯ ವಹಿಸಲು ಸಮರ್ಪಕ ನಾಯಕರ ಹುಡುಕಾಟ ನಡೆದಿದೆ. ಮುಂಚೂಣಿಯಲ್ಲಿರುವ ಕೆಲವರು ಸಾಮೂಹಿಕ ನಾಯಕತ್ವಕ್ಕೆ ಪಟ್ಟು ಹಿಡಿದಿದ್ದರಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕೆಪಿಸಿಸಿಗೆ ಸೂಕ್ತ ನಾಯಕನನ್ನು ಹೈಕಮಾಂಡ್‌ ನೇಮಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆರ್ಥಿಕ ಪತನವಾಗಿದೆ :

ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವಗಾಂಧಿ, ಪಿ.ವಿ. ನರಸಿಂಹರಾವ್‌ ಹಾಗೂ ಡಾ. ಮನಮೋಹನ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಆದರೆ, ಇದೀಗ ಆರ್ಥಿಕ ಪತನವಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರಿನಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ನಡೆಸಿದ ಪ್ರತಿಭಟನೆಯಲ್ಲಿ ಅಮೂಲ್ಯ ಹೇಳಿದ ದೇಶದ್ರೋಹಿ ಹೇಳಿಕೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಪಕ್ಷ ಸ್ವಾತಂತ್ರ್ಯಕ್ಕೂ ಮುನ್ನವೇಶ ದೇಶಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದು ಪಕ್ಷದಲ್ಲಿ ದೇಶ ಭಕ್ತರ ಸಂಖ್ಯೆ ಅಪಾರವಾಗಿದೆ ಎಂದಿರುವ ಜಾರಕಿಹೊಳಿ, ಆ ಪ್ರತಿಭಟನೆಯನ್ನು ಪಕ್ಷ ಆಯೋಜಿಸಿರಲಿಲ್ಲ. ಅಮೂಲ್ಯ ಪಾಕಿಸ್ತಾನ್‌ ಜಿಂದಾಬಾದ್‌ ಹೇಳಿಕೆ ಖಂಡಿಸುತ್ತೇವೆ. ಯಾರೇ ದೇಶದ್ರೋಹ ಘೋಷಣೆ ಕೂಗಿದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅಮೂಖ್ಯ ಘೋಷಣೆಯ ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಲು ಸೂಕ್ತ ತನಿಖೆ ನಡೆಸುವಂತೆ ಪೊಲೀಸ್‌ ಇಲಾಖೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನು ತಾಲೂಕಿನ ಕದರಮಂಡಲಗಿಯ ಶ್ರೀ ಕಾಂತೇಶಸ್ವಾಮಿ ದರ್ಶನ ಪಡೆದು ಬ್ಯಾಡಗಿಗೆ ಸತೀಶ ಜಾರಕಿಹೊಳಿ ಆಗಮಿಸಿದ್ದರು. ಈ ವೇಳೆ ವಿ.ಎಸ್‌. ಪಾಟೀಲ್‌ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.