ಮೈಸೂರು, (ಸೆ.6): ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಸಜ್ಜಾಗಿ ಎಂದು ಮಾಜಿ ಸಚಿವ ಸಾರಾ ಮಹೇಶ್‌ಗೆ ಜೆಡಿಎಸ್ ವರಿಷ್ಠರಿಂದ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಮೊದಲ ಹಂತದ ಸಭೆ ನಡೆಸಿದ್ದಾರೆ.

ಇಂದು (ಶುಕ್ರವಾರ) ಮೈಸೂರಲ್ಲಿ ನಗರ ಪಾಲಿಕೆ ಸದಸ್ಯರ ಪೂರ್ವ ಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಜೆಡಿಎಸ್‌  ವರಿಷ್ಠರು ಸೂಚಿಸಿದ್ದಾರೆ. ಎರಡು ದಿನಗಳ ಕಾಲ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈಸೂರು ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ. ಹಾಗಾಗಿ ಮೊದಲ ಹಂತದಲ್ಲಿ ನಗರ ಭಾಗದ ಪಾಲಿಕೆ ಸದಸ್ಯರನ್ನು ಕರೆದು ಚರ್ಚೆ ನಡೆಸಿದ್ದೇನೆಂದು ಸ್ಪಷ್ಟಪಡಿಸಿದರು.

ವಿಶ್ವನಾಥ್ ಟಾರ್ಗೆಟ್ ಮಾಡಿದ ದೇವೇಗೌಡ್ರು: ಹುಣಸೂರಿನಲ್ಲಿ JDS ಮೆಗಾ ಪ್ಲಾನ್

ಮೊದಲು ಒಂದು ದಿನವಿಡಿ ನಗರ ಮಟ್ಟದಲ್ಲಿ ಎರಡನೇ ದಿನ ಗ್ರಾಮೀಣ ಭಾಗದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು ಹುಣಸೂರಲ್ಲಿ ಉಪಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಾರಾ ಮಹೇಶ್,  ಕಳೆದ ಭಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಜಿಟಿಡಿ ಮಗನಿಗೆ ಟಿಕೇಟ್ ಕೇಳಿದ್ದು,  ವರಿಷ್ಠರು ಕೂಡ ಟಿಕೇಟ್ ಕೊಡಲು ಹೇಳಿದ್ದರು ಎಂದು ಮಾಜಿ ಸಚಿವ ಜಿಟಿಡಿ ಪುತ್ರನಿಗೆ ಟಿಕೇಟ್ ನೀಡಲು ಹೋಗಿದ್ದ ವಿಚಾರ ಒಪ್ಪಿಕೊಂಡರು.

ಕಳೆದ ಬಾರಿ ಚುನಾವಣೆ ಒಂದು ತಿಂಗಳಿದ್ದಾಗ ಹಿರಿಯರೊಬ್ಬರನ್ನ ಕರೆತಂದಿದ್ವಿ.  ಅವರು ಕೊನೆಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಸದ್ಯ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಎಚ್. ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಹುಣಸೂರಲ್ಲಿ ಯಾರು ಗೆಲ್ತಾರೆ ಅಂತ ಮುಂದಿನ ದಿನಗಳಲ್ಲಿ ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ ಎಂದು ಹೇಳಿದರು.