ಬಾಗಲಕೋಟೆ(ಏ.13): ಮಾರಕ ಕೊರೋನಾ ನಿಯಂತ್ರಿಸುವ ಈ ಸಂದರ್ಭದಲ್ಲಿಯೂ ಸಹ ಬಿಜೆಪಿಯ ಕೆಲ ಸಂಸದರು, ಶಾಸಕರು ಕೋಮು ದಳ್ಳೂರಿ ಹರಡುವ ರೀತಿಯಲ್ಲಿ ನೀಡುತ್ತಿರುವ ಹೇಳಿಕೆಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವ ರೀತಿಯಲ್ಲಿ ಇದೆ ಎಂದು ಎಂಎಲ್‌ಸಿ ಆರ್‌.ಬಿ.ತಿಮ್ಮಾಪುರ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್‌ನ ವಿಷಯದಲ್ಲಿಯೂ ಸಹ ಕೋಮು ಭಾವನೆಗಳನ್ನು ಬಿತ್ತುವ ಆ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಬಿಜೆಪಿಯ ಸಂಸದರು ಹಾಗೂ ಶಾಸಕರು ಮಾಡುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಕುಡುಕರು ಮನುಷ್ಯರಲ್ವಾ?: ಮದ್ಯ ಮಾರಾಟ ಆರಂಭಿಸಿದ್ರೆ ತಪ್ಪೇನಿಲ್ಲ'

ಕೊರೋನಾ ಎಂಬ ಅಪಾಯಕಾರಿ ಸೋಂಕು ಜಾತಿ, ಮತ, ಪಂಥ ಮೀರಿ ಹರಡುತ್ತಿದೆ ಇದಕ್ಕೆ ಯಾವುದೆ ಕೋಮಿನ ಬಣ್ಣ ಬೇಡ ಎಲ್ಲರೂ ಸೇರಿ ಕೊರೋನಾ ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಜವಾಬ್ದಾಯುತ ಸ್ಥಾನದಲ್ಲಿರುವ ಕೆಲವರು ಕನಿಷ್ಠ ಜ್ಞಾನವಿಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಗಮನಿಸಿದರೆ ಬೇಸರ ಅನಿಸುತ್ತದೆ ಎಂದರು.

ನಿಜಾಮುದ್ದೀನ ಧಾರ್ಮಿಕ ಸಭೆಯ ಸಂದರ್ಭದಲ್ಲಿ ದೇಶದಲ್ಲಿ ಕೊರೋನಾ ಸೋಂಕು ಆರಂಭವಾಗಿತ್ತು. ಅದನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇನ್ನೊಂದೆಡೆ ರಾಜ್ಯಗಳಿಗೆ ಕೊರೋನಾ ಎದುರಿಸಲು ಯಾವುದೇ ಹಣ ಬಿಡುಗಡೆ ಮಾಡದ ಪ್ರಧಾನಿ ಚಪ್ಪಾಳೆ ತಟ್ಟುವ,ದೀಪ ಹಚ್ಚಲು ಹೇಳುವ ಮೂಲಕ ದಾರಿ ತಪ್ಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಬಿಜೆಪಿಗರಿಗೆ ಕನಿಷ್ಠ ಬುದ್ದಿ ಮಾತನ್ನು ಹೇಳಲಾರದ ಸ್ಥಿತಿಯಲ್ಲಿ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಇರುವುದು ನಮ್ಮ ರಾಜ್ಯದ ದೌರ್ಬಾಗ್ಯ ಎಂದು ವಿಷಾದಿ​ಸಿದ್ದಾರೆ.

ಸಂಪೂರ್ಣ ವಿಫಲ:

ಕೊರೋನಾ ಭೀತಿ ಜನಜೀವನವನ್ನೆ ತತ್ತರಿಸುವಂತೆ ಮಾಡಿದೆ, ರೈತರ ಫಸಲಿಗೆ ಮಾರುಕಟ್ಟೆಒದಗಿಸಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಸೇರಿದಂತೆ, ಆಶಾ, ಪೌರ ಕಾರ್ಮಿಕರಿಗೆ ಕನಿಷ್ಠ ಮಾಸ್ಕ್‌ ಹಾಗೂ ಕೈಕವಚಗಳು ಸಿಗುತ್ತಿಲ್ಲ. ನಿರಂತರವಾಗಿ ಕೊರೋನಾ ಸೇವೆಯಲ್ಲಿರುವ ಸಿಬ್ಬಂದಿಗೆ ಆಹಾರ ದೊರೆಯುತ್ತಿಲ್ಲ. ಹೊರ ರಾಜ್ಯದಿಂದ ಬಂದ ವಲಸೆ ಕಾರ್ಮಿಕರಿಗೆ ಪೌಷ್ಠಿಕ ಆಹಾರ ನೀಡಲು ಜಿಲ್ಲಾಡಳಿತದಿಂದ ಸಾಧ್ಯವಾಗುತ್ತಿಲ್ಲ. ಇಂತಹ ವೈಫಲ್ಯ ಗಳನ್ನು ಸರ್ಕಾರದ ಗಮನಕ್ಕೆ ತರದಿದ್ದರೆ ವಿರೋಧ ಪಕ್ಷವಾದ ನಾವು ಲೋಪ ಮಾಡಿದಂತಾಗುತ್ತದೆ ಎಂದರು.

ಡಿಸಿಎಂ ಸಭೆಗೆ ಸೀಮಿತ:

ಉಪಮುಖ್ಯಮಂತ್ರಿಯಂತಹ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕೇವಲ ಜಿಲ್ಲಾ ಕೇಂದ್ರದಲ್ಲಿ ಸಭೆ ಮಾಡುವುದಕ್ಕೆ ಸೀಮಿತವಾಗಿದ್ದಾರೆ. ಯಾವುದೇ ತಾಲೂಕುಗಳಿಗೆ ಭೇಟಿ ನೀಡುತಿಲ್ಲ. ಕೊರೋನಾ ವಿರುದ್ಧ ಹೋರಾಡುವವರ ಜೊತೆಗೆ ಕನಿಷ್ಠ ಸಂವಹನ ಮಾಡುತ್ತಿಲ್ಲ. ಹೀಗಾದರೆ ಜಿಲ್ಲೆಯ ಗತಿ ಏನು ಎಂದು ಪ್ರಶ್ನಿಸಿದರು.

ಮೂವರು ಚಿಕ್ಕ ಮಕ್ಕಳಿಗೆ ಕೊರೋನಾ: ಕರುನಾಡಲ್ಲಿ ಮುಂದುವರಿದ ರುದ್ರ ನರ್ತನ...!

ಸರ್ಕಾರ ಮಾಡಿರುವ ಲಾಕ್‌ಡೌನ್‌ ಸೇರಿದಂತೆ ಕೈಗೊಂಡಿರುವ ಕ್ರಮಗಳನ್ನು ಸ್ವಾಗತಿಸಿದ್ದೇವೆ. ಅದಕ್ಕೆ ಸಹಕಾರವನ್ನು ಸಹ ಕೊಡುತ್ತಿದ್ದೇವೆ, ಹಾಗಂತ ಜಿಲ್ಲಾಡಳಿತ ಮಾಡುವ ಲೋಪಗಳನ್ನು ಗುರುತಿಸದೆ
ಹೋದರೆ ಜನತೆಯ ಭಾವನೆಗಳಿಗೆ ಸ್ವಂದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಹಾಂತೇಶ ಉದಪುಡಿ, ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ ತಿಮ್ಮಾಪೂರ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅನಿಲ ದಡ್ಡಿ ಉಪಸ್ಥಿತರಿದ್ದರು.