ತಮ್ಮ ಮೇಲೆಯೇ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಮಾಜಿ ಸಚಿವ ಕೋಟಾ ಪತ್ರ
- ಸರಳ ಪ್ರಾಮಾಣಿಕ ರಾಜಕಾರಣಿ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
- ತಮ್ಮ ಮೇಲೆ ಲೋಕಾಯುಕ್ತ ತನಿಖೆ ನಡೆಸಿ ಎಂದು ಪತ್ರ
ಉಡುಪಿ (ಜು.31): ಸರಳ ಪ್ರಾಮಾಣಿಕ ರಾಜಕಾರಣಿ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೆ ತಮ್ಮ ಮೇಲೆ ಲೋಕಾಯುಕ್ತ ತನಿಖೆ ನಡೆಸಿ ಎಂದು ಪತ್ರ ಬರೆದಿರುವ ವಿಚಾರವೀಗ ಬೆಳಕಿಗೆ ಬಂದಿದೆ.
ಮಾಜಿ ಸಿಎಂ ಬಿಎಸ್‌ಯಡಿಯೂರಪ್ಪ ಸಂಪುಟದಲ್ಲಿ ಮೀನುಗಾರಿಗೆ ಹಾಗೂ ಮುಜರಾಯಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಆದಾಯಕ್ಕಿಂತ ಹೆಚ್ಚು ಗಳಿಕೆ ಗಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಈ ಸಂಬಂಧ ಲೋಕಾಯುಕ್ತಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಆಯ್ದ 100 ದೇಗುಲಗಳಲ್ಲಿ ಸಪ್ತಪದಿ ಯೋಜನೆ ಶೀಘ್ರ ಪುನಾರಂಭ
6 ಕೋಟಿ ವೆಚ್ಚದಲ್ಲಿ ಬೃಹತ್ ಬಂಗಲೆ ಕಟ್ಟಿಸುತ್ತಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಕೋಟಾ ಶ್ರೀನಿವಾಸ ಪೂಜಾರಿ ಸ್ವತಃ ಪತ್ರ ಬರೆಯುವ ಮೂಲಕ ಕೋರಿದ್ದಾರೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದಲ್ಲಿ ಕಟ್ಟಿಸುತ್ತಿರುವ ಮನೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು 3 ಬಾರಿ ವಿಧಾನಪರಿಷತ್ ಶಾಸಕನಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿದ್ದೇನೆ. ಪ್ರತಿವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿ ವಿವರ ನೀಡುತ್ತಿದ್ದೇನೆ. ನಾನು ಎರಡು ವರ್ಷದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿಯ ಗಿಳಿಯಾರು ಗ್ರಾಮದಲ್ಲಿ ಮನೆ ಕಟ್ಟುತ್ತಿದ್ದೇನೆ. ಜಾಗದ ತಕರಾರಿನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ಬಾಕಿಯಿದೆ.
ಅಪಘಾತದಲ್ಲಿ ಗಾಯಗೊಂಡಿದ್ದರೂ ಕರ್ತವ್ಯನಿರತ ಸಚಿವ ಕೋಟ
ನನ್ನ ಮಗ ಎಂ.ಬಿ.ಎ ಮುಗಿಸಿ ಸ್ವಂತ ಉದ್ದಿಮೆ ನಡೆಸುತ್ತಿದ್ದಾನೆ. ನನ್ನ ಮಗನ ಸ್ವಂತ ದುಡಿಮೆ ಮತ್ತು ನನ್ನ ದುಡಿಮೆಯ ಹಣದಲ್ಲಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ವಾಗುತ್ತಿದೆ. ಮನೆ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಅಪೆಕ್ಸ್ ಬ್ಯಾಂಕಿನಲ್ಲಿ 35 ಲಕ್ಷ ರು. ಸಾಲ ಪಡೆದು ಸಂಬಳ ಮತ್ತು ಗೌರವ ಧನದ ಮೂಲಕ ಸಾಲ ಮರುಪಾವತಿ ಮಾಡಿದ್ದೇನೆ.
ಮನೆ ಕಟ್ಟಲು ಹಣ ಕಡಿಮೆಯಾಗಿರುವ ಕಾರಣ ಮತ್ತೆ ಬ್ರಹ್ಮಾವರದ ವಾರಂಬಳ್ಳಿ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ 40 ಲಕ್ಷ ಸಾಲಕ್ಕಾಗಿ ದಾಖಲಾತಿಗಳನ್ನು ನೀಡಲಾಗಿದೆ. 13 ಸೆಂಟ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಮನೆ 60 ಲಕ್ಷ ರು.ವೆಚ್ಚದ್ದಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇದು 6 ಕೋಟಿ ರೂಪಾಯಿ ಮೌಲ್ಯದ ಮನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನನ್ನ ಆದಾಯ ಮತ್ತು ಮನೆಯನ್ನು ಪರಿಶೀಲಿಸಿ ಆದಾಯಕ್ಕಿಂತ 1 ರೂಪಾಯಿ ಹೆಚ್ಚು ವೆಚ್ಚದ ಮನೆಯಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೇ ನನ್ನ ಆದಾಯದ ವ್ಯಾಪ್ತಿಯಲ್ಲೇ ಮನೆ ನಿರ್ಮಾಣ ಆಗಿದ್ದರೆ ಅಪಪ್ರಚಾರದ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.