ಉಡುಪಿ (ಫೆ.22):  ಅಪಘಾತದಲ್ಲಿ ಗಾಯಗೊಂಡಿದ್ದರೂ ವಿಶ್ರಾಂತಿ ತೆಗೆದುಕೊಳ್ಳದೆ ಕರ್ತವ್ಯನಿರತವಾಗಿರುವ ಹಿಂದುಳಿದ ವರ್ಗ ಕಲ್ಯಾಣ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕರ್ತವ್ಯ ನಿಷ್ಠೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಾರೆ.

 ಶುಕ್ರವಾರ ಸಂಜೆ ಸಚಿವ ಶ್ರೀನಿವಾಸ ಪೂಜಾರಿ ಅವರು ರವಿಶಂಕರ್‌ ಗುರೂಜಿಯವರ ಆಶ್ರಮದಿಂದ ವಾಪಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ಅವರ ಎಡಗೈಗೆ ಗಾಯಗಳಾಗಿದ್ದವು. 

ತವರು ಜಿಲ್ಲೆ ದೇಗುಲಗಳಿಗೆ ಕೋಟಿ ಕೋಟಿ ಅನುದಾನ, ಬೇರೆ ಜಿಲ್ಲೆಗಳ ದೇವರಿಗೆ 'ಪೂಜಾರಿ'

ತಕ್ಷಣ ಅದಕ್ಕೆ ಚಿಕಿತ್ಸೆಯನ್ನೂ ನೀಡಲಾಯಿತು. ಈ ನೋವಿನ ನಡುವೆಯೂ ಉಡುಪಿಗೆ ಬಂದಾಗ ಶನಿವಾರ ಮುಂಜಾನೆ 4 ಗಂಟೆಯಾಗಿತ್ತು. ಹೀಗಾಗಿ ಎಲ್ಲ ಕಾರ್ಯಕ್ರಮಗಳು ರದ್ದಾಗಬಹುದು ಎಂದೇ ಭಾವಿಸಲಾಗಿತ್ತು. 

ಆದರೆ ಕೋಟ ಅವರು ಬೆಳಗಿನ ಜಾವ 7 ಗಂಟೆಗೆ ತಮ್ಮ ಗೃಹ ಕಚೇರಿಯಲ್ಲಿ ಮನೆ ಮುಂದೆ ಸೇರಿದ್ದ ಜನರ ಅಹವಾಲುಗಳನ್ನು ಕೇಳಲು ಸಿದ್ಧರಾಗಿದ್ದರು. ಭಾನುವಾರವೂ ವಿಶ್ರಾಂತಿ ತೆಗೆದುಕೊಳ್ಳದ ಸಚಿವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನೂ ಭೇಟಿಯಾದರು.