ಕಾಂಗ್ರೆಸ್‌ ಸರ್ಕಾರದಿಂದ ದಲಿತರಿಗೆ ಅವಮಾನವಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆ ಕೇಸ್‌ ವಾಪಸ್‌ ತೆಗೆದುಕೊಂಡರೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ ಮಾಜಿ ಸಚಿವ ಗೋವಿಂದ ಕಾರಜೋಳ 

ಬೆಂಗಳೂರು(ಜು.28):  ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಭಾಗವಹಿಸಿದವರು ಅಮಾಯಕರು ಎಂದು ರಾಜ್ಯದ ಗೃಹ ಸಚಿವರು ಸರ್ಟಿಫಿಕೇಟ್‌ ಕೊಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹರಿಹಾಯ್ದಿದ್ದಾರೆ.

ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಿಂದ ದಲಿತರಿಗೆ ಅವಮಾನವಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆ ಕೇಸ್‌ ವಾಪಸ್‌ ತೆಗೆದುಕೊಂಡರೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

News Hour: ಸಣ್ಣ ಘಟನೆ ಅಂದಿದ್ದ ಗೃಹ ಸಚಿವರು, ಇಂದು ಸಾಕ್ಷ್ಯವೇ ಸಿಕ್ಲಿಲ್ಲ ಅಂದ್ರು!

ಗಲಭೆಯಲ್ಲಿ ಪೊಲೀಸ್‌ ವಾಹನಗಳನ್ನು ಸುಡಲಾಗಿದ್ದು, ಪೊಲೀಸ್‌ ಅಧಿಕಾರಿಗಳ ಮೇಲೆ ಮತ್ತು ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಇಂತಹ ಕೃತ್ಯ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ತೆಗೆದುಕೊಳ್ಳುವ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿಕೆ ನೀಡಿರುವುದು ಖಂಡನೀಯ. ಮಾಜಿ ಶಾಸಕ ಅಖಂಡ ಶ್ರೀನಿವಾಸ ಅವರಿಗೆ ಯಾವ ಕಾಂಗ್ರೆಸ್ಸಿಗರೂ ಸಮಾಧಾನ ಹೇಳಿಲ್ಲ ಮತ್ತು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಿಲ್ಲ. ಇದೀಗ ಮೊಕದ್ದಮೆ ಹಿಂದಕ್ಕೆ ಪಡೆಯುವ ಮೂಲಕ ದಲಿತರಿಗೆ ಅನ್ಯಾಯ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.

ಶಾಸಕ ತನ್ವೀರ್‌ ಸೇಠ್‌ ನಡವಳಿಕೆಯು ಆಶ್ಚರ್ಯ ಉಂಟು ಮಾಡಿದೆ. ಅವರ ಮೇಲೆ ಎಸ್‌ಡಿಪಿಐನವರು ದಾಳಿ ಮಾಡಿ ಚಾಕು ಹಾಕಿ ಹತ್ಯೆ ಮಾಡಲು ಹೊರಟಿದ್ದರು. ಆಗ ಅವರನ್ನು ನೋಡಲು ಯಾರೂ ಹೋಗಿರಲಿಲ್ಲ. ಆಗ ತನ್ವೀರ್‌ ಸೇಠ್‌ ಮನೆಗೆ ಮಾಜಿ ಸಚಿವ ವಿ.ಸೋಮಣ್ಣ ಹೋಗಿದ್ದರು. ಮುಸ್ಲಿಮರ ಮತಕ್ಕೆ ಹೆದರಿ ಇಷ್ಟೊಂದು ಕೆಟ್ಟಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ. ಅವರು ಆರು ತಿಂಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಅವರಿಗೆ ಯಾಕೆ ಈ ಕೆಟ್ಟಬುದ್ಧಿ ಬಂತು? ಕ್ರಿಮಿನಲ್‌ಗಳಿಗೆ ಅಮಾಯಕರೆಂದು ಸರ್ಟಿಫಿಕೇಟ್‌ ಕೊಡುವ ಪರಿಸ್ಥಿತಿ ಅವರಿಗೆ ಯಾಕೆ ಬಂತೋ ಗೊತ್ತಿಲ್ಲ ಎಂದು ಹೇಳಿದರು.