ಲಾಕ್‌ಡೌನ್: ಕೊಳೆತ ತರಕಾರಿ ವಿತರಣೆ, ಬೀದಿಗೆ ಬಿದ್ದ ಮಾಜಿ ಸಚಿವನ ಕಿಟ್..!
ಲಾಕ್‌ಡೌನ್ ಮಧ್ಯೆ ಸಂಕಷ್ಟದಲ್ಲಿ ಬಡ ಜನರಿಗೆ ಮಾಜಿ ಸಚಿವರೊಬ್ಬರು ಕೊಳೆತ ತರಕಾರಿ ಕೊಟ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಚಿತ್ರದುರ್ಗ, (ಮೇ.01): ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಬಡವರಿಗೆ ಸರ್ಕಾರದಿಂದ ಉಚಿತವಾಗಿ ಪಡಿತರ ಅಕ್ಕಿ ವಿತರಣೆ ಮಾಡುತ್ತಿದ್ದಾರೆ.
ಇನ್ನುಳಿದಂತೆ ವೈಯಕ್ತಿಕವಾಗಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ತರಕಾರಿ, ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಹೆಸರಿನಲ್ಲಿ ತರಕಾರಿ ಕೊಟ್ಟಿದ್ದಾರೆ. ಆದ್ರೆ, ತರಕಾರಿ ಕೊಳೆತಿದೆಯೆಂದು ಗ್ರಾಮಸ್ಥರು ಬೀದಿಗೆ ಎಸೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆಪಾಳ್ಯ ಗ್ರಾಮದಲ್ಲಿ ನಡೆದಿದೆ.
ಲಾಕ್‌ಡೌನ್‌ನಿಂದ ಬೇರೆ ಕಡೆ ಇರುವವರು ನಿಮ್ಮ ಊರಿಗೆ ತೆರಳುವುದು ಹೇಗೆ?
ಬುಧವಾರ ಮಧ್ಯಾಹ್ನ ಹರಿಯಬ್ಬೆಪಾಳ್ಯ ಗ್ರಾಮದಲ್ಲಿ ಮೂಲಂಗಿ, ಕ್ಯಾರೆಟ್, ಟೊಮೋಟೊ, ನುಗ್ಗೆಕಾಯಿ, ಎಲೆಕೋಸು ಸೇರಿ ಮಾಜಿ ಸಚಿವರ ಪೋಟೋ ಇರುವ ಬ್ಯಾಗ್ ನಲ್ಲಿ ಮನೆ ಮನೆಗೆ ತರಕಾರಿ ಹಂಚಲಾಗಿದೆ.
ತರಕಾರಿ ಕೊಳೆತಿದೆ ಎಂದು ಚೀಲವನ್ನು ರಸ್ತೆಯಲ್ಲಿ ಬಿಸಾಡಿದ್ದಾರೆ. ಮಾಜಿ ಸಚಿವರ ಪ್ರಚಾರಕ್ಕೆ ಕೊಳೆತ ತರಕಾರಿ ಬೇಕಿತ್ತಾ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬಂದಿವೆ. ಅಷ್ಟೇ ಅಲ್ಲದೇ ಸುಧಾಕರ್ ಚಿತ್ರ ಇರುವ ತರಕಾರಿ ಚೀಲಗಳನ್ನು ಬೀದಿಗೆ ಎಸೆದಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿವೆ.