ಜೆಡಿಎಸ್ ತೊರೆಯಲು ಸಜ್ಜಾದ್ರಾ ಮತ್ತೊಬ್ಬ ನಾಯಕ?: 'HDD, HDK ಸೂಚನೆಯಂತೆ ಮುಂದಿನ ಸ್ಪರ್ಧೆ'
* ಸಿಎಂ ಬಸವರಾಜ ಬೊಮ್ಮಾಯಿ ಮೊದಲಿನಿಂದಲೂ ಆತ್ಮೀಯರು
* ಇಬ್ಬರ ಜಗಳ ಮೂರನೆಯವರಿಗೆ ಲಾಭ
* ತಾಯಿಯ ಅನಾರೋಗ್ಯದಿಂದ ಸಾರ್ವಜನಿಕವಾಗಿ ದೂರ ಉಳಿದಿದ್ದೇನೆ
ಕಾರವಾರ(ಸೆ. 29): ಆನಂದ ಅಸ್ನೋಟಿಕರ್ ಕಾಂಗ್ರೆಸ್‌ಗೆ ಹೋಗುತ್ತಾರೆ. ಬಿಜೆಪಿಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ತಾವು ಯಾವುದೇ ಪಕ್ಷಕ್ಕೂ ತೆರಳುತ್ತಿಲ್ಲ. ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್(Anand Asnotikar) ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಸಹೋದರ ಸಮಾನರಾದ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದಾಗ ಕಾಂಗ್ರೆಸ್‌ಗೆ ಆಹ್ವಾನ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮೊದಲಿನಿಂದಲೂ ಆತ್ಮೀಯರು. ಕಳೆದ ಬಾರಿಯೂ ಬಿಜೆಪಿಯಲ್ಲಿಯೇ ಇರುವಂತೆ ಒತ್ತಾಯ ಮಾಡಿದ್ದರು. ಹೀಗೆ ಎಲ್ಲ ಪಕ್ಷದಿಂದ ಅವಕಾಶ, ಆಹ್ವಾನ ಎರಡೂ ಇದೆ. ಆದರೆ ಜೆಡಿಎಸ್(JDS) ನಾಯಕ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೆಗೌಡರನ್ನು(HD Devegowda) ಬಿಟ್ಟು ನಾನು ಯಾವುದೇ ರಾಜಕೀಯ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಕುಮಾರಸ್ವಾಮಿ(HD Kumaraswamy) ಒಪ್ಪಿಗೆ ನೀಡಿದರೆ, ಅವರ ಸಲಹೆ, ಸೂಚನೆ ಪಡೆದೇ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು
ಮೂರನೆಯವರಿಗೆ ಲಾಭ:
ಕ್ಷೇತ್ರಕ್ಕೆ ಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸ್ವಾಗತ ಮಾಡಬೇಕು. ಅಲ್ಲದೆ ಎಲ್ಲಾ ಕೆಲಸಗಳು ಕಾರ್ಯರೂಪಕ್ಕೆ ಬರಬೇಕು. ಆದರೆ ಮಾಜಿ ಮತ್ತು ಹಾಲಿ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಜಗಳ ಮಾಡಿಕೊಂಡು ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದು, ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಲಿದೆ ಎಂದು ಪರೋಕ್ಷವಾಗಿ ತಮಗೆ ಲಾಭ ಎಂದು ಹೇಳಿದರು.
ವಿಜಯೇಂದ್ರನನ್ನು ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಮಾಜಿ ಸಚಿವ ಅಚ್ಚರಿ ಹೇಳಿಕೆ
ತಿಳ್ಮಾತಿ ಕಡಲತೀರಕ್ಕೆ ಸೇತುವೆ ಮಂಜೂರು ಮಾಡಿಸಿದ್ದೇನೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳುತ್ತಿದ್ದಾರೆ. ಆದರೆ ಈ ಕಡಲತೀರಕ್ಕೆ ಸೇತುವೆ ನಿರ್ಮಾಣ ಮಾಡುವುದರಿಂದ ಜನರಿಗೆ ಹಾಗೂ ಪ್ರವಾಸಿಗರಿಗೆ ಎಷ್ಟು ಪ್ರಯೋಜನವಾಗಲಿದೆ. ಈ ಸೇತುವೆ ನಿರ್ಮಾಣದಿಂದಾಗಿ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಸ್ಥಳೀಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಯೋಜನೆ ರೂಪಿಸಲಾಗಿದೆ ಎಂದು ಕಿಡಿಕಾರಿದರು.
ಕೈಗಾ ಐದು ಮತ್ತು ಆರನೇ ಘಟಕದ ಕಾಮಗಾರಿ ಪ್ರಾರಂಭಿಸಲಾಗಿದ್ದು ವಿವಿಧ ಕೆಲಸಗಳಿಗೆ ಉದ್ಯೋಗಿಗಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಸ್ಥಳೀಯವಾಗಿ ನೆಲೆ ಕಳೆದುಕೊಂಡವರಿಗೆ ಅವಕಾಶ ನೀಡುತ್ತಿಲ್ಲ. ವಿವಿಧ ರಾಜ್ಯಗಳಿಂದ ಬಂದಂತಹ ಅಧಿಕಾರಿಗಳು ಅವರ ಸಂಬಂಧಿಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಪಕ್ಷಾತೀತ ಹೋರಾಟ ಮಾಡಿ ಸ್ಥಳೀಯರಿಗೆ ಉದ್ಯೋಗ ಕೊಡಿಸಬೇಕಿದೆ ಎಂದು ಅಭಿಪ್ರಾಯಿಸಿದರು.
ಆರೋಗ್ಯ ಸಚಿವರು ಸದನದಲ್ಲಿ ಕಾರವಾರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಹೇಳಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಶೀಘ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರ ಮಾಡಬೇಕು. ತಾವು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಶಂಕುಸ್ಥಾಪನೆ ಆಗದಿರುವ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಇಂದು ಕಾಮಗಾರಿ ಪ್ರಾರಂಭವಾಗಿದೆ. ಇಲ್ಲದಿದ್ದರೆ ಇನ್ನೂ ಆರು ತಿಂಗಳಾದರೂ ಕಾಮಗಾರಿ ಪ್ರಾರಂಭವಾಗುತ್ತಿರಲಿಲ್ಲ. ನನ್ನ ಜತೆ ಧ್ವನಿ ಎತ್ತಿದ, ಲೋಕಾಯುಕ್ತಕ್ಕೆ ದೂರು ನೀಡಿದ ಮಾಧವ ನಾಯಕರಿಗೂ ಧನ್ಯವಾದ ಸಲ್ಲಿಸುತ್ತೇನೆ. ಶಾಸಕಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಬಗ್ಗೆ ಇನ್ನೂ ನನಗೆ ತನಿಖೆಗೆ ಕರೆದಿಲ್ಲ. ಒಂದೊಮ್ಮೆ ಕರೆದರೆ ಅದಕ್ಕೆ ಸ್ಪಂದಿಸುತ್ತೇನೆ ಎಂದು ಹೇಳಿದರು.
ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ
ತಮ್ಮ ತಾಯಿ ಶುಭಲತಾ ಅಸ್ನೋಟಿಕರ್ ಅವರಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು. ಇದೇ ವೇಳೆ ಹೃದಯಾಘಾತವಾಗಿ ಐದು ಕಡೆ ಸ್ಟೆಂಟ್ ಹಾಕಿದ್ದು ಸದ್ಯ ಪರಿಸ್ಥಿತಿ ಕಠಿಣವಾಗಿದೆ ಎಂದರು.
ತಾಯಿಯ ಅನಾರೋಗ್ಯದಿಂದ ಸಾರ್ವಜನಿಕವಾಗಿ ದೂರ ಉಳಿದಿದ್ದೇನೆ. ಇನ್ನು ಮೂರು ತಿಂಗಳು ಟ್ರೀಟ್‌ಮೆಂಟ್ ಕೊಡಬೇಕು. ಪ್ರತಿನಿತ್ಯ ಡಯಾಲಿಸೀಸ್ ಕಾರವಾರದಲ್ಲಿಯೇ ಮಾಡಿಸುತ್ತಿದ್ದು ಅವರು ಚೇತರಿಕೆ ಕಂಡ ನಂತರ ಸಕ್ರಿಯ ರಾಜಕಾರಣಕ್ಕೆ ಬರಲು ಚಿಂತನೆ ನಡೆಸಿದ್ದೇನೆ ಎಂದರು.
ಕಾರವಾರದಲ್ಲಿ(Karwar) ಕೆಲ ಬೇಡಿಕೆಗಳನ್ನ ಇಟ್ಟು ನಗರಸಭೆ ಅಧ್ಯಕ್ಷರಾಗಲು ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದು, ನಮ್ಮ ಬೇಡಿಕೆ ಈಡೇರಿಸಲು ಇನ್ನು ಮೂರ್ನಾಲ್ಕು ತಿಂಗಳ ಗಡುವನ್ನು ನೀಡಲಿದ್ದೇವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಕೊಡುವ, ಕೋಣೆ ನಾಲ ಸ್ವಚ್ಛ, ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬೆಂಬಲ ಕೊಡುವಂತೆ ಸಹಕರಿಸುವಂತೆ ಬೇಡಿಕೆ ಇಟ್ಟು ಬಿಜೆಪಿಗೆ ಬೆಂಬಲ ನೀಡಿದ್ದು ಸದ್ಯ ಡಾ. ನಿತೀನ್ ಪಿಕಳೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇನ್ನು 3-4 ತಿಂಗಳಲ್ಲಿ ನಮ್ಮ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಮುಂದಿನ ಕ್ರಮ ನಿರ್ಧರಿಸಲಿದ್ದೇವೆ ಎಂದರು.