ತೀರ್ಥಹಳ್ಳಿ(ಜ.14):  ಹಣದ ಪ್ರಭಾವ ಮತ್ತು ಜಾತಿ ಧರ್ಮದ ಆಧಾರದಲ್ಲಿ ಬಿಜೆಪಿ ಈ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನರನ್ನು ಹಾದಿ ತಪ್ಪಿಸಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯೇತರರಿಗೆ ಜಾತಿ ಸರ್ಟಿಫಿಕೇಟ್‌ ನೀಡದಂತೆಯೂ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಬಿಜೆಪಿ ಗೆಲುವಿಗೆ ಸಹಾಕಾರ ನೀಡಿದ ಕೆಲವು ಪಿಡಿಒ, ಆರ್‌ಎಫ್‌ಒ ಮತ್ತು ಪೊಲೀಸ್‌ ಅಧಿಕಾರಿಗಳಿಗೂ ಬಿಜೆಪಿ ಅಭಿನಂದನೆ ಸಲ್ಲಿಸಬೇಕಿದೆ ಎಂದು ಹೇಳಿದರು.

ಸರ್ಕಾರಕ್ಕೆ ಕಟ್ಟಬೇಕಾಗಿದ್ದ ಹಣವನ್ನು ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸದಂತೆಯೂ ಆರಗ ಜ್ಞಾನೇಂದ್ರ ಒತ್ತಡ ಹೇರುವ ಮುಲಕ ಕಾನೂನುಬಾಹಿರಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಚುನಾವಣೆಯಲ್ಲಿ ಸೋತವರು ಎದೆಗುಂದುವ ಅಗತ್ಯವಿಲ್ಲ. ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಿ, ಭವಿಷ್ಯದಲ್ಲಿ ಯಶಸ್ಸು ಕಾಣಬಹುದಾಗಿದೆ. ಗೆದ್ದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗ್ರಾಮ ಪಂಚಾಯ್ತಿಯನ್ನು ಮಾದರಿಯಾಗಿಸಬೇಕು ಎಂದು ಹೇಳಿದರು.

ಕುವೈತ್‌ನಲ್ಲಿ ಅನಿವಾಸಿ ಕನ್ನಡಿಗ ಸಂಶಯಾಸ್ಪದ ಸಾವು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಟ್ವಿಟರ್ ಅಭಿಯಾನ

ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌ ಮಾತನಾಡಿ, ಮೇ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆ, ಬಿಜೆಪಿಗೆ ವಾತಾವರಣ ಪೂರಕವಾಗಿಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತುರಾತುರಿಯಲ್ಲಿ ಚುನಾವಣೆ ನಡೆಯುವಂತಾಯಿತು ಎಂದ ಅವರು, ಕಾಂಗ್ರೆಸ್‌ ಪಕ್ಷದ ಹಿನ್ನೆಡೆಗೆ ಇದೂ ಒಂದು ಕಾರಣವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಸ್ತೂರು ಮಂಜುನಾಥ್‌, ಮುಡುಬಾ ರಾಘವೇಂದ್ರ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಭಾರತಿ ಪ್ರಭಾಕರ್‌, ಕಲ್ಪನಾ ಪದ್ಮನಾಭ್‌, ಕಲಗೋಡು ರತ್ನಾಕರ, ತಾಪಂ ಅಧ್ಯಕ್ಷೆ ನವಮಣಿ, ಕಡ್ತೂರು ದಿನೇಶ್‌, ಹಾರೊಗೊಳಿಗೆ ಪದ್ಮನಾಭ್‌ ಮತ್ತಿತರರಿದ್ದರು.