Asianet Suvarna News Asianet Suvarna News

'ಪೌರತ್ವ ಕಾಯ್ದೆ ತಿದ್ದುಪಡಿಗೆ ದಲಿತರು-ಮುಸ್ಲಿಮರೇ ಟಾರ್ಗೆಟ್‌, ಕೇಂದ್ರಕ್ಕೆ ಬಿಸಿ ಮುಟ್ಟಿಸಲೇಬೇಕು'

ಹೋರಾಟದ ಮೂಲಕವೇ ಕೇಂದ್ರಕ್ಕೆ ಬಿಸಿ ಮುಟ್ಟಿಸಬೇಕು| ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ ಸೇಂಥಿಲ್‌ ಹೇಳಿಕೆ| ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಕೆಲಸಕ್ಕೆ ಮುಂದಾಗಿದೆ| ಇಲ್ಲೇ ಹುಟ್ಟಿ ಬೆಳೆದವರನ್ನು ನೀವು ಭಾರತೀಯರಾ ಎಂದು ಸಂಶಯದಿಂದ ನೋಡುವ ಸ್ಥಿತಿ ಬಂದಿದೆ: ಸೆಂಥಿಲ್|

Former IAS Officer Sasikanth Senthil Talks Over Citizenship  Act
Author
Bengaluru, First Published Jan 18, 2020, 8:06 AM IST

ಬಳ್ಳಾರಿ(ಜ.18): ಪೌರತ್ವ ಕಾಯ್ದೆ ತಿದ್ದುಪಡಿಗೆ ಹೊರಟಿರುವವರು ಸಂವಿಧಾನದ ಅಡಿಪಾಯಕ್ಕೆ ಕೈ ಹಾಕಿದ್ದಾರೆ. ಇವರ ಗುರಿ ಬರೀ ಮುಸ್ಲಿಂ ಸಮುದಾಯವಷ್ಟೇ ಅಲ್ಲ; ದಲಿತರನ್ನು ಸಹ ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಕೆಲಸಕ್ಕೆ ಮುಂದಾಗಿದ್ದಾರೆ. ಅವರಿಗೆ ಸರಿಯಾದ ಪಾಠ ಕಲಿಸದೇ ಹೋದರೆ ಉಳಿಗಾಲವಿಲ್ಲ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ ಸೇಂಥಿಲ್‌ ಎಚ್ಚರಿಸಿದ್ದಾರೆ.

ನಗರದ ಬಿಡಿಎಎ ಸಭಾಂಗಣದಲ್ಲಿ ಕನ್ಸರ್ನ್‌ ಸಿಟಿಜನ್ಸ್‌ ಆಫ್‌ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಸಾಧಕ-ಬಾಧಕಗಳ ಕುರಿತ ಜನತಾ ಸಮಾವೇಶದಲ್ಲಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾವು ಗಂಭೀರ ಸ್ಥಿತಿಗೆ ಬಂದು ನಿಂತಿದ್ದೇವೆ. ನಮ್ಮಗಳ ಬದುಕನ್ನೇ ಪೇಪರ್‌ ಆಗಿ ಬದಲಾಯಿಸಲು ಹೊರಟಿರುವ ಜನರ ನಡುವೆ ನಮ್ಮತನ ಉಳಿಸಿಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಇಲ್ಲೇ ಹುಟ್ಟಿ ಬೆಳೆದವರನ್ನು ನೀವು ಭಾರತೀಯರಾ ಎಂದು ಸಂಶದಿಂದ ನೋಡುವ ಸ್ಥಿತಿ ಬಂದಿದೆ. ಹೌದು, ನಾವು ಭಾರತೀಯರು ಎಂದಾದರೆ ಅವರು ಕೇಳುವ ದಾಖಲೆಗಳನ್ನು ನೀಡಿದರೆ ಮಾತ್ರ ನಾವು ಭಾರತೀಯರು. ಇಲ್ಲವಾದರೆ ಅವರು ಏನು ಹೇಳುತ್ತಾರೋ ಅದುವೇ ಫೈನಲ್‌ ಆಗಲಿದೆ. ಈ ಸ್ಥಿತಿಗೆ ಭಾರತವನ್ನು ಇವರು ತಂದಿಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಒಂದು ಧರ್ಮ ಬಿಟ್ಟಿದ್ದು ಏಕೆ?

ಪೌರತ್ವ ಕಾಯ್ದೆ ತಿದ್ದುಪಡಿ ತರಲು ಹೊರಟಿರುವ ಇವರು ನಿರ್ದಿಷ್ಟಧರ್ಮವನ್ನು ಕೈ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅಸಂವಿಧಾನಿಕ ನೀತಿಗಳನ್ನು ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ. ಇವರು ಹೇಳಿದಂತೆ ಭಾರತ ಎಂಬುದು ಬಹುತ್ವದ ದೇಶ. ಇಲ್ಲಿ ಎಲ್ಲ ಧರ್ಮಗಳು ಸಮಾನತೆಯಿಂದ ಬದುಕುತ್ತಿವೆ. ಸಂವಿಧಾನವೇ ನಮಗೆ ಆ ಶಕ್ತಿ ನೀಡಿದೆ. ಆದರೆ, ಇವರೀಗ ಹೊಸದೊಂದು ಹುಡುಕಾಟ ಶುರು ಮಾಡಿದ್ದಾರೆ. ಧರ್ಮದ ಮೇಲೆ ಶೋಷಣೆಯಾಗಿರುವವರು ಎಷ್ಟು ಮಂದಿ ಎಂದು ಕೇಳಿದರೆ ಇವರ ಬಳಿ ಯಾವ ಉತ್ತರವೂ ಇಲ್ಲ ಎಂದು ಟೀಕಿಸಿದರು.

ಭಾರತೀಯ ಹಿಂದುಗಳು ವಿಶ್ವದ ಎಲ್ಲ ದೇಶಗಳಲ್ಲಿದ್ದಾರೆ. ಕೆಲವು ದೇಶಗಳಲ್ಲಿ ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಅಲ್ಲಿನ ಸರ್ಕಾರಗಳು ನೀವೆಲ್ಲರೂ ಮರಳಿ ನಿಮ್ಮ ದೇಶಕ್ಕೆ ಹೋಗಿ ಎಂದರೆ ಅವರನ್ನು ಕರೆಸಿಕೊಳ್ಳುತ್ತೀರಾ? ಭಾರತೀಯರು ದಡ್ಡರಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು. ಧರ್ಮದ ಮೇಲೆ ದೇಶ ಕಟ್ಟಲು ನಿಮ್ಮಿಂದಾಗದು. ಇದು ದುಡಿವ ಜನರ ದೇಶ. ಶ್ರಮಿಕರ ದೇಶ. ಸಂವಿಧಾನದ ಆಶಯದ ಮೇಲೆಯೇ ನಾವೆಲ್ಲರೂ ಬದುಕುತ್ತಿದ್ದೇವೆ. ಹೀಗಿರುವಾಗ ಸಂವಿಧಾನವನ್ನೇ ಬುಡಮೇಲು ಮಾಡುತ್ತೇವೆ ಎಂದು ನೀವು ಹೊರಟರೆ ನಾವು ಸುಮ್ಮನಿರಬೇಕೇ ಎಂದು ಪ್ರಶ್ನಿಸಿದರು.

ಇನ್ನೂ ಬಿಸಿ ಮುಟ್ಟಬೇಕು

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ಚಳವಳಿ ನಡೆಯುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಂದು ಕೇಂದ್ರದ ನಿಲುವನ್ನು ವಿರೋಧಿಸುತ್ತಾರೆ, ಇದು ಸಾಲದು. ಇನ್ನೂ ಚಳವಳಿಗಳು ಬಲಗೊಳ್ಳಬೇಕು. ಆದರೆ, ನಮ್ಮ ಚಳವಳಿ ಅಹಿಂಸಾತ್ಮಕವಾಗಿರಬೇಕು. ಹಿಂಸೆಗೆ ನಮ್ಮಲ್ಲಿ ಜಾಗವಿಲ್ಲ. ನಮ್ಮ ಹೋರಾಟ ಎಂದೂ ದಾರಿ ತಪ್ಪಬಾರದು. ಅಹಿಂಸಾತ್ಮಕ ಹೋರಾಟಕ್ಕಿರುವ ಶಕ್ತಿಯೇ ಬೇರೆ. ಗಾಂಧೀಜಿ ಅವರು ನಮಗೆ ನೀಡಿದ ಹೋರಾಟದ ದಾರಿಯನ್ನು ಕಂಡುಕೊಳ್ಳಬೇಕು. ನಮ್ಮ ಧ್ವನಿ ಹೆಚ್ಚಾಗಬೇಕು. ಮುಂಗೋಪಿಗಳು, ಹಿಂಸೆ ಮೂಲಕ ಉತ್ತರ ನೀಡಬೇಕು ಎನ್ನುವವರು ನಮ್ಮ ಹೋರಾಟಕ್ಕೆ ಬರಬೇಡಿ ಎಂದು ತಿಳಿಸಿದರು.

ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಚಿಂತಕ ಚಂದ್ರಪೂಜಾರಿ ಮಾತನಾಡಿ, ಬಿಜೆಪಿಯ ಹಿಂದುತ್ವ, ಕಾಂಗ್ರೆಸ್‌ನ ಜಾತ್ಯತೀತತೆ ಎರಡೂ ಸುಳ್ಳು. ಈ ಎರಡು ಪಕ್ಷಗಳ ಬಡವರು ಹಾಗೂ ಮಧ್ಯಮ ವರ್ಗದವರನ್ನು ಹೀರುವ ಪಕ್ಷಗಳಾಗಿವೆ ಎಂದು ಹೇಳಿದರಲ್ಲದೆ, ಹೋರಾಟದ ಮೂಲಕ ಪೌರತ್ವ ಕಾಯ್ದೆ ತಿದ್ದುಪಡಿಯ ಅವೈಜ್ಞಾನಿಕ ನಿರ್ಧಾರವನ್ನು ಬಗ್ಗುಬಡಿಯಬೇಕು ಎಂದು ಹೇಳಿದರು. ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸೋಮಶೇಖರಗೌಡ, ಲೇಖಕ ಡಾ. ಅರವಿಂದ ಪಾಟೀಲ್‌ ಉಪಸ್ಥಿತರಿದ್ದರು.
 

Follow Us:
Download App:
  • android
  • ios