Asianet Suvarna News Asianet Suvarna News

ಮಹಿಳಾ ಮಸೂದೆ ಅಂಗೀಕಾರಕ್ಕೆ ಬಿಜೆಪಿಗೆ10 ವರ್ಷ ಬೇಕಾಯಿತೇ?, ಇದೆಲ್ಲ ಕಪಟ ನಾಟಕ: ವೀರಪ್ಪ ಮೊಯ್ಲಿ

ಬಿಜೆಪಿಗೆ ಮಸೂದೆ ಅಂಗೀಕಾರಕ್ಕೆ ಸ್ಪಷ್ಟ ಬಹುಮತ ಇದ್ದರೂ ಜಾರಿಗೊಳಿಸಲು 10 ವರ್ಷ ಬೇಕಾಯಿತೇ? ಪರಿಶಿಷ್ಟರು, ಮಹಿಳೆಯರಿಗೆ ಓಟಿನ ಹಕ್ಕು ನೀಡಬಾರದು ಎಂದು ಆರೆಸ್ಸೆಸ್‌ನ ಗೋಳ್ವಾಲ್ಕರ್ ಹೇಳಿದ ದಾಖಲೆಯಿದೆ. 10 ವರ್ಷ ಸುಮ್ಮನಿದ್ದು ಈಗ ಮಹಿಳಾ ಮಸೂದೆ ಅಂಗೀಕಾರ ಮಾಡಿರುವುದು ಮೊಸಳೆ ಕಣ್ಣೀರಷ್ಟೇ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

Former CM Veerappa Moily React to Women's Reservation Bill grg
Author
First Published Sep 24, 2023, 1:00 AM IST

ಮಂಗಳೂರು(ಸೆ.24):  ವಿಧಾನಸಭೆ, ಲೋಕಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಮಸೂದೆ ಅಂಗೀಕಾರ ಮಾಡಿರುವುದು ಕಪಟ ನಾಟಕ, ಮಹಿಳೆಯರ ಬಗೆಗಿನ ಮೊಸಳೆ ಕಣ್ಣೀರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮಸೂದೆ ಅಂಗೀಕಾರಕ್ಕೆ ಸ್ಪಷ್ಟ ಬಹುಮತ ಇದ್ದರೂ ಜಾರಿಗೊಳಿಸಲು 10 ವರ್ಷ ಬೇಕಾಯಿತೇ? ಪರಿಶಿಷ್ಟರು, ಮಹಿಳೆಯರಿಗೆ ಓಟಿನ ಹಕ್ಕು ನೀಡಬಾರದು ಎಂದು ಆರೆಸ್ಸೆಸ್‌ನ ಗೋಳ್ವಾಲ್ಕರ್ ಹೇಳಿದ ದಾಖಲೆಯಿದೆ. 10 ವರ್ಷ ಸುಮ್ಮನಿದ್ದು ಈಗ ಮಹಿಳಾ ಮಸೂದೆ ಅಂಗೀಕಾರ ಮಾಡಿರುವುದು ಮೊಸಳೆ ಕಣ್ಣೀರಷ್ಟೇ ಎಂದು ಹೇಳಿದರು.

ಚೈತ್ರಾ ಕುಂದಾಪುರ ಪ್ರಕರಣ: ಹಿಂದೂ ಸಂಘಟನೆಗಳಿಗೆ ಸಂಬಂಧ ಇಲ್ಲ, ಶರಣ್‌ ಪಂಪ್‌ವೆಲ್‌

ಈ ಮಹಿಳಾ ಬಿಲ್‌ನ್ನು ಚಾರಿತ್ರಿಕ ಬಿಲ್ ಅಂತ ಬಿಂಬಿಸಿದ್ದಾರೆ. ಆದರೆ 2011ರಲ್ಲಿ ನಾನು ಕೇಂದ್ರ ಕಾನೂನು ಮಂತ್ರಿಯಾಗಿದ್ದಾಗ ಮಹಿಳಾ ಮಸೂದೆಯಲ್ಲಿ ಒಬಿಸಿ ಮೀಸಲಾತಿ ತಂದು ರಾಜ್ಯಸಭೆಯಲ್ಲಿ ಪಾಸ್ ಮಾಡಿಸಿದ್ದೆ. ಆದರೆ ಪಕ್ಷಕ್ಕೆ ಸಾಕಷ್ಟು ಬೆಂಬಲ ಇಲ್ಲದೆ ಲೋಕಸಭೆಯಲ್ಲಿ ಒಮ್ಮತ ಸಿಕ್ಕಿರಲಿಲ್ಲ. ಈಗ ಬಿಜೆಪಿಗೆ ಸಂಪೂರ್ಣ ಬಹುಮತ ಇರುವಾಗ ಮಹಿಳಾ ಮಸೂದೆಯಲ್ಲಿ ಒಬಿಸಿ ಮೀಸಲಾತಿ ಜಾರಿಗೊಳಿಸಬಹುದಿತ್ತು. ಅದರೆ ಮಾಡಿಲ್ಲ ಎಂದು ಆಕ್ಷೇಪಿಸಿದರು.

ತುಳು ಮೂಲೆಗುಂಪು:

ದೇಶದಲ್ಲಿ 42 ಭಾಷೆಗಳು ನಶಿಸುವ ಹಂತದಲ್ಲಿವೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಯುಪಿಎ ಸರ್ಕಾರವಿದ್ದಾಗ ಮನಮೋಹನ್ ಸಿಂಗ್‌ ಅವರು ಸಮಿತಿ ರಚನೆ ಮಾಡಿ, ಆ ಸಮಿತಿಯು 8ನೇ ಪರಿಚ್ಛೇದಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಜಾರಿಗೊಳಿಸುವ ಹಂತದಲ್ಲಿ ಸರ್ಕಾರ ಬದಲಾಯಿತು. ನಂತರ ಬಂದ ಬಿಜೆಪಿ ಈ ಪ್ರಸ್ತಾಪವನ್ನೇ ಮೂಲೆಗುಂಪು ಮಾಡಿದ್ದಾರೆ ಎಂದು ವೀರಪ್ಪ ಮೊಯ್ಲಿ ಆರೋಪಿಸಿದರು.

ಕಾವೇರಿ- ರಾಜ್ಯಕ್ಕೆ ನಿಷ್ಠೆ:

ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡಿ ಜನರ ಜೀವನ್ಮರಣದ ಪ್ರಶ್ನೆ. ಆದರೆ ನಮ್ಮ ನಿಷ್ಠೆ ನಮ್ಮ ರಾಜ್ಯಕ್ಕೆ ಮಾತ್ರ ಎಂದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನ ಸಿಎಂ ಆಗಿದ್ದ ಜಯಲಲಿತಾ ಸತ್ಯಾಗ್ರಹ ಕೈಗೊಂಡಿದ್ದರು. ಆದರೂ ನಾನು ನೀರು ಬಿಟ್ಟಿರಲಿಲ್ಲ ಎಂದರು.

ತಾಕತ್ತಿದ್ದರೆ ತಿದ್ದುಪಡಿ ಮಾಡಲಿ:

ಪಾರ್ಲಿಮೆಂಟ್‌ನಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಯಲ್ಲಿ ‘ಜಾತ್ಯತೀತ’ ಶಬ್ದ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಧಮ್ಮು ತಾಕತ್ತು ಇದ್ದರೆ ವಿಶೇಷ ಅಧಿವೇಶನ ಕರೆದು ಸಂವಿಧಾನಕ್ಕೆ ತಿದ್ದುಪಡಿ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಗ್ಯಾರಂಟಿ ಮಾಡಿ ತೋರಿಸಿದ್ದೇವೆ:

ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಆಶ್ವಾಸನೆ ಪ್ರಕಾರ ಸರ್ಕಾರ ರಚನೆಯಾದ ನೂರೇ ದಿನಗಳಲ್ಲಿ ನಾಲ್ಕು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿರುವುದು ರಾಷ್ಟ್ರದ ಇತಿಹಾಸದಲ್ಲಿ ಇದೇ ಪ್ರಥಮ. ಇನ್ನೊಂದು ಗ್ಯಾರಂಟಿ ‘ಯುವನಿಧಿ’ ಜನವರಿಯೊಳಗೆ ಅನುಷ್ಠಾನ ಆಗಲಿದೆ. ವಿರೋಧ ಪಕ್ಷದವರು ಗ್ಯಾರಂಟಿ ಜಾರಿ ಆಗಲ್ಲ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರೂ ಮಾಡಿ ತೋರಿಸಿದ್ದೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಹರೀಶ್ ಕುಮಾರ್‌, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಐವನ್ ಡಿಸೋಜ, ಮುಖಂಡರಾದ ಶಶಿಧರ ಹೆಗ್ಡೆ, ಕೃಪಾ ಅಮರ್ ಆಳ್ವ, ಜೋಕಿಂ, ಶುಭೋದಯ ಆಳ್ವ, ಭಾಸ್ಕರ ಮೊಯ್ಲಿ, ಟಿಕೆ ಸುಧೀರ್ ಮತ್ತಿತರರಿದ್ದರು.

ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್‌: ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆಂದು 5 ಲಕ್ಷ ವಂಚನೆ

ಚಿಕ್ಕಬಳ್ಳಾಪುರದಿಂದ ಸ್ಪರ್ಧೆ: ಮೊಯ್ಲಿ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲಿದ್ದೇನೆ ಎಂದು ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದರು. ಆದರೆ ತನ್ನ ಪುತ್ರ ಹರ್ಷ ಮೊಯ್ಲಿ ಈ ಬಾರಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಮೂರು ಡಿಸಿಎಂ ವಿಚಾರ ಪಕ್ಷದ ಅಭಿಪ್ರಾಯ‌ ಅಲ್ಲ. ಮಂತ್ರಿಗಳು ಅಭಿಪ್ರಾಯ ಹೇಳಿದ್ದಾರಷ್ಟೆ. ಆ ವಿಚಾರದ ಚರ್ಚೆ ಹೈಕಮಾಂಡ್ ಮಟ್ಟದಲ್ಲೂ ಆಗಿತ್ತು. ಆದರೆ ಆ ಚರ್ಚೆ ಸದ್ಯಕ್ಕೆ ಇಲ್ಲ ಎಂದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗಲಿದೆ ಎಂದು ಹೇಳಿದರು.

ಜೆಡಿಎಸ್‌ ಜತೆ ಹೊಂದಾಣಿಕೆ ಮಾಡೋರು ಹೋದರೆಂದೇ ಲೆಕ್ಕ!

ಜೆಡಿಎಸ್ ಪಕ್ಷದ ಜತೆ ಯಾರ್ಯಾರು ಹೊಂದಾಣಿಕೆ ಮಾಡ್ತಾರೋ, ಅವರು ಹೋದರೆಂದೇ ಲೆಕ್ಕ. ನಮಗೆ ಅದರ ಅನುಭವ ಆಗಿದೆ. ಈಗ ಬಿಜೆಪಿ ಜತೆ ಮೈತ್ರಿ ಮಾಡಿದ್ದಾರೆ. ದಾರಿದ್ರ್ಯ ಒಳಗೆ ಪ್ರವೇಶ ಆಗಿದೆ ಎಂದು ಮೊಯ್ಲಿ ಮಾರ್ಮಿಕವಾಗಿ ನುಡಿದರು.

Follow Us:
Download App:
  • android
  • ios