ಬೆಂಗಳೂರು(ನ.15): ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಹೀಗಾಗಿಯೇ ಭಗತ್‌ಸಿಂಗ್‌, ವಿವೇಕಾನಂದ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮೊದಲಾದ ಸ್ವಾತಂತ್ರ್ಯ ಸೇನಾನಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳಲು ಹೆಣಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಜವಾಹರ್‌ಲಾಲ್‌ ನೆಹರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಹಿಂದೂ ಸಂಘಟನೆಯಲ್ಲ ಅದೊಂದು ಜಾತಿ ಸಂಘಟನೆ. ಗಾಂಧಿ, ನೆಹರು, ನಾವೆಲ್ಲರೂ ಹಿಂದುಗಳಲ್ವಾ? ಸ್ವಾತಂತ್ರ್ಯಕ್ಕೂ ಮೊದಲು ಬಿಜೆಪಿ, ಆರ್‌ಎಸ್‌ಎಸ್‌ನವರು ಎಲ್ಲಿದ್ರು? ಬಿಜೆಪಿ ಅವರ ಕೈಯಲ್ಲಿ ಅಧಿಕಾರ ಇದ್ದರೆ ನಿರಂತರ ರಕ್ತಪಾತವಾಗುವಂತೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಎಂದರೆ ಬರೀ ಸುಳ್ಳು ಹೇಳಿಕೊಂಡು ಓಡಾಡುವ ಭೂಪ ಎಂದು ವ್ಯಂಗ್ಯ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್‌ನ ವೀರ ಸಾವರ್ಕರ್‌, ಗೋಲ್ವಾಲ್ಕರ್‌, ಆ ವೋಳ್ಕರ್‌, ಈ ವೋಳ್ಕರ್‌ ಎಲ್ಲಾ ಸೇರಿ ಬ್ರಿಟಿಷರ ಪರ ಕೆಲಸ ಮಾಡಿದ್ರು. ಸ್ವಾತಂತ್ರ್ಯ ಹೋರಾಟ ಬಿಟ್ಟು ಸರ್ಕಾರಿ ಉದ್ಯೋಗ ತೆಗೆದುಕೊಳ್ಳಿ ಎಂದು ನಾಗಪುರ ಸೇರಿದಂತೆ ಹಲವೆಡೆ ಸಾರ್ವಜನಿಕ ಸಭೆ ನಡೆಸಿದರು. ಇಂತಹ ಹಿನ್ನೆಲೆಯವರು ಇಂದು ದೇಶ ಭಕ್ತಿ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

RSS ಕಾರ್ಯಕ್ರಮದಲ್ಲಿ ಎಸ್‌ಎಂ ಕೃಷ್ಣ : ಸಂಘದ ಅಗತ್ಯತೆ ಬಗ್ಗೆ ಪ್ರಸ್ತಾಪ

ನೆಹರೂ ದೂರದೃಷ್ಟಿಯೇ ದೇಶಕ್ಕೆ ಭದ್ರ ಬುನಾದಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರ ತತ್ವ ಸಿದ್ಧಾಂತಗಳು ಹಾಗೂ ದೂರದೃಷ್ಟಿಯ ಯೋಜನೆಗಳೇ ಸ್ವತಂತ್ರ ಭಾರತದ ಪ್ರಗತಿಗೆ ಭದ್ರ ಬುನಾದಿ. ಕಾಂಗ್ರೆಸ್‌ ನಾಯಕರ ತ್ಯಾಗ ಬಲಿದಾನವೇ ಸ್ವಾತಂತ್ರ್ಯ ಸ್ವಾತಂತ್ರ್ಯದ ಇತಿಹಾಸ. ಬಿಜೆಪಿ ನಾಯಕರು ದೇಶದ ಇತಿಹಾಸ ಬದಲಿಸುತ್ತೇನೆ ಎಂದರೆ ಅದು ದೇಶಕ್ಕೆ ಆಗುವ ನಷ್ಟ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ರಾಜ್ಯಸಭಾ ಸದಸ್ಯ ಎ. ಹನುಮಂತಯ್ಯ, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌.ಆಂಜನೇಯ, ಪ್ರಿಯಾಂಕ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ಖರ್ಗೆ ಒಗ್ಗಟ್ಟಿನ ಪಾಠ

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ನಾಯಕರಿಗೆ ಒಗ್ಗಟ್ಟಿನ ಪಾಠ ಹೇಳಿದ ಘಟನೆ ನಡೆಯಿತು. ಕಾಂಗ್ರೆಸ್‌ ನಾಯಕರ ನಡುವೆ ಒಗ್ಗಟ್ಟಿಲ್ಲ. ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವಾಗುತ್ತದೆ. ನಾವೆಲ್ಲಾ ಎಚ್ಚೆತ್ತುಕೊಂಡು ಕೆಲಸ ಮಾಡುವವರೆಗೂ ಕಾಂಗ್ರೆಸ್‌ಗೆ ಭವಿಷ್ಯ ಕಷ್ಟ. ನಮ್ಮಲ್ಲಿನ ಒಡಕೇ ಬಿಜೆಪಿಯವರಿಗೆ ಅಸ್ತ್ರ. ಹೀಗಾಗಿ ಬಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷದ ತತ್ವ ಸಿದ್ಧಾಂತದ ಮೇಲೆ ಕೆಲಸ ಮಾಡಬೇಕು. ಆಗ ಮಾತ್ರ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯ ಎಂದು ಕಿವಿಮಾತು ಹೇಳಿದರು. ನೆಹರು ಭಾವಚಿತ್ರಕ್ಕೆ ಕಾಂಗ್ರೆಸ್‌ ಮುಖಂಡರು ಪುಷ್ಪನಮನ ಸಲ್ಲಿಸಿದರು.

ದೇಶಕ್ಕೆ ನೆಹರು ಕೊಡುಗೆ ಬಹಳ ದೊಡ್ಡದು. ಆಗರ್ಭ ಶ್ರೀಮಂತರಾದರೂ ಗಾಂಧಿ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಸಾಕಷ್ಟುಬಾರಿ ಜೈಲು ವಾಸ ಅನುಭವಿಸಿದರು. ನೆಹರು ನಿಧನದ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾಕ್‌ ಟೈಮ್ಸ್‌ ಪತ್ರಿಕೆಯು ನೆಹರು ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಬಣ್ಣಿಸಿತ್ತು. ಇದನ್ನು ನೆಹರು ಹೇಳಿ ಬರೆಸಿದ್ರಾ? ಆದರೆ, ಬಿಜೆಪಿಯವರು ಮಾತ್ರ ನೆಹರೂ ಕುಟುಂಬ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರಾಣತ್ಯಾಗವನ್ನು ಅವರು ಎಲ್ಲೂ ಹೇಳುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಆರೆಸ್ಸೆಸ್‌ ಬಿಜೆಪಿಗರ ಕೊಡುಗೆ ಏನೂ ಇಲ್ಲ. ಹೀಗಾಗಿಯೇ ಕ್ಕೆ ಸ್ವಾತಂತ್ರ್ಯ ಸೇನಾನಿಗಳಾದ ಭಗತ್‌ಸಿಂಗ್‌, ವಿವೇಕಾನಂದರು, ಸರ್ದಾರ್‌ ವಲ್ಲಭಭಾಯಿ ಪಟೇಲರನ್ನು ತಮ್ಮವರೆಂದು ಬಿಂಬಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ನೆಹರು ಮೂಢನಂಬಿಕೆ ಒಪ್ಪುತ್ತಿರಲಿಲ್ಲ. ವೈಜ್ಞಾನಿಕವಾಗಿ ಚಿಂತನೆ ಮಾಡಿದವರು. ಭಾರತದ ಇಂದಿನ ಅಭಿವೃದ್ದಿಗೆ ನೆಹರೂ ಅವರು ಹಾಕಿದ ಭದ್ರ ಬುನಾದಿಯೇ ಕಾರಣ. ಆರೆಸ್ಸೆಸ್‌ ಐಡಿಯಾಲಜಿ ಮೇಲೆ ಬಿಜೆಪಿಯವರು ದೇಶ ನಡೆಸುತ್ತಿದ್ದಾರೆ. ಹಿಂದೂ ಮುಸ್ಲಿಮರ ನಡುವೆ ಜಗಳ ತಂದಿಟ್ಟಿದ್ದಾರೆ. ನೆಹರೂ ಐಡಿಯಾಲಜಿ ನಾಶ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದರು.