ಬೆಂಗಳೂರು (ಅ.27):  ವಿಶ್ವದ ಮುಂದುವರಿದ ದೇಶಗಳಾದ ಅಮೆರಿಕ, ಜರ್ಮನಿ ಮಾದರಿಯಂತೆ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆ 2 ವರ್ಷಗಳ ಕಾಲ ದೇಶ ಸೇವೆಗೆ ತೊಡಗುವಂತಾಗಬೇಕು.ಈ ನಿಟ್ಟಿನಲ್ಲಿ ಬಾಲ್ಯದಲ್ಲಿ ‘ರಾಷ್ಟ್ರ ಪ್ರೇಮದ ಲಸಿಕೆ’ ಹಾಕಿಸಬೇಕಾಗದ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಮಲ್ಲೇಶ್ವರದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ರಾಜಧಾನಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರತಿಯೊಬ್ಬರಿಗೂ ತನ್ನನ್ನು ದೇಶಕ್ಕೆ ಅರ್ಪಿಸಿಕೊಳ್ಳುವಂತ ಮನೋಭಾವ ಬೆಳೆಸಿದ್ದಲ್ಲಿ ರಾಷ್ಟ್ರ ಅಭಿಮಾನ ಅಭಿವ್ಯಕ್ತಗೊಳಿಸಲು ಸಾಧ್ಯ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ಇಂತಹ ವ್ಯವಸ್ಥೆ ಜಾರಿ ಮಾಡಬೇಕಾಗಿತ್ತು. ಪ್ರಸ್ತುತ ನಮ್ಮ ದೇಶದಲ್ಲಿ ಇಂತಹ ಪರ್ವ ಸ್ಥಾಪನೆಯಾಗಬೇಕಾಗಿದೆ’ ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರ: ಯತ್ನಾಳ್ ಹೇಳಿಕೆ ಹಿಂದೆ RSS,ಸ್ಫೋಟಕ ಮಾಹತಿ ಬಿಚ್ಚಿಟ್ಟ ಮಾಜಿ ಸಚಿವ ...

‘ನಾವು ಯಾವುದಕ್ಕೂ ಅಂಟಿಕೊಂಡಿರಬಾರದು. ಅಧಿ​ಕಾರ ಬರುತ್ತದೆ. ಹೋಗುತ್ತದೆ, ನಮ್ಮ ಕುಟುಂಬಕ್ಕಾಗಿ ನಾವು ಎಷ್ಟುಸಮಯ ಮೀಸಲಿಡುತ್ತೇವೆ. ಸ್ವಂತ ಆರೋಗ್ಯಕ್ಕಾಗಿ ಎಷ್ಟುಸಮಯ ನೀಡುತ್ತಿದ್ದೇವೆ ಎನ್ನುವುದಕ್ಕೂ ಮುನ್ನ ದೇಶಕ್ಕಾಗಿ ಎಷ್ಟುಸಮಯ ಮೀಸಲಿಡುತ್ತಿದ್ದೇವೆ ಎಂದು ಭಾರತದಲ್ಲಿರುವ ಎಲ್ಲ ಧರ್ಮೀರು ಹಾಕಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಅಲ್ಲದೆ, ಈ ಮಣ್ಣಿನ ಮೇಲೆ ಬದುಕಿರುವವರೆಗೂ ದೇಶದ ಸಮಗ್ರತೆ ಕಾಪಾಡುವ ಷರತ್ತಿಗೆ ನಾವು ಒಳಪಟ್ಟಿರಬೇಕು’ ಎಂದರು.

‘ಸ್ವಾಮಿ ವಿವೇಕಾನಂದರ ಮಹತ್ತರ ಉಪದೇಶಗಳಂತೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು.ಆದರೆ, ಪ್ರಸ್ತುತ ನಮ್ಮಲ್ಲಿ ಬ್ರಿಟಿಷರು ಹಾಕಿಕೊಟ್ಟಿರುವ ಅಡಿಪಾಯದಲ್ಲಿ ಶಿಕ್ಷಣ ವ್ಯವಸ್ಥೆ ನಡೆಯುತ್ತಿದೆ. ಈವರೆಗೂ ಸಮಗ್ರ ಸುಧಾರಣೆ ಸಾಧ್ಯವಾಗಿಲ್ಲ. ದೇಶದ ದುರದೃಷ್ಟಕರ ವಿಚಾರ ಎಂದರೆ ಶಿಕ್ಷಣ ರಾಜ್ಯ ವಿಷಯವಾಗಿದ್ದು, ಕೇಂದ್ರ ಹಸ್ತಕ್ಷೇಪ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದ್ದು ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಮಹತ್ತರದ್ದಾಗಿದೆ’ ಎಂದರು.

ಸಂಘದ ಅಗತ್ಯ ಹೆಚ್ಚು:

‘ರಾಮಕೃಷ್ಣ ಆಶ್ರಮದ ನಾಲ್ಕು ಗೋಡೆಗಳ ಮಧ್ಯ ಬೆಳೆದಿದ್ದೇನೆ. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಸಂದೇಶÜಗಳಿಂದ ಉತ್ತೇಜಿತನಾಗಿದ್ದೇನೆ. ತಾವು ಬಹಳ ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದು, ರಾಜಕೀಯದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದೇನೆ. ಅಂತಹ ಹಿನ್ನೆಲೆಯಿಂದ ಬಂದವನಾದ ನಾನು ಇಂದು ಸಂಘಕ್ಕೆ ಗೌರವ ಅರ್ಪಣೆ ಮಾಡಲು ಬಂದಿದ್ದೇನೆ. ನನ್ನ ಈ ಅನುಭವದ ಪ್ರಕಾರ ಹಿಂದಿಗಿಂತ ಪ್ರಸಕ್ತ ದಿನಗಳಲ್ಲಿ ಸಂಘದ ಅಗತ್ಯತೆ ಹೆಚ್ಚಾಗಿದೆ’ ಎಂದು ನಂಬಿರುವುದಾಗಿ ತಿಳಿಸಿದರು.

‘ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ‘ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಮಾಡುತ್ತೀರಾ?’ ಎಂದು ಟ್ರಂಪ್‌ರನ್ನು ಪ್ರಶ್ನಿಸಿದರೆ, ‘ನೋಡೋಣ ಬಿಡಿ’ ಎನ್ನುತ್ತಾರೆ. ಆದರೆ, ಭಾರತದಲ್ಲಿ ಈ ರೀತಿ ಅನಿಶ್ಚಿತತೆ ಇಲ್ಲ. ಚುನಾವಣೆ ನಡೆಸಲು ಪ್ರತ್ಯೇಕ ಆಯೋಗ ಇದೆ. ಎಲ್ಲ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದೆ. ಜೊತೆಗೆ, 5 ವರ್ಷಗಳಿಗೊಮ್ಮೆ ಸರ್ಕಾರಗಳು ಬದಲಾಗುತ್ತವೆ’ ಎಂದರು.

‘ಬೆಂಬಲ ಸಿಗದ ಹಿನ್ನೆಲೆಯಲ್ಲಿ 13 ದಿನಗಳಲ್ಲಿ ಪ್ರಧಾನಿ ಹುದ್ದೆಯನ್ನು ಅಟಲ್‌ ಬಿಹಾರಿ ವಾಜಪೇಯಿ ತ್ಯಜಿಸಿ ವಿರೋಧ ಪಕ್ಷದಲ್ಲಿ ಕುಳಿತಿದ್ದರು. ಇದು ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿ ಬೆಳೆದಿರುವ ಪರಂಪರೆ’ ಎಂದರು.