ಕೊಪ್ಪಳ(ಜ.13): ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಲ್ಲ ಕಡೆಗೂ ಕೂಗುತ್ತಿರುವುದು ಒಂದು ಫ್ಯಾಷನ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

"

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಪೂರ್ವದಲ್ಲಿ ಬಸಾಪುರ ಎಂಎಸ್‌ಪಿಎಲ್‌ ಹೆಲಿಪ್ಯಾಡ್‌ನಲ್ಲಿ ಮಾತನಾಡಿದರು. ಬದಾಮಿ ಜಾತ್ರೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮುಂದೆ ಮೋದಿ, ಮೋದಿ ಎಂಬ ಘೋಷಣೆ ಕೂಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಕೂಗು ಫ್ಯಾಷನ್‌ ಆಗಿದೆ ಎಂದರು. ಬಿಜೆಪಿಯವರಿಗೆ ಮೋದಿ ಹೆಸರು ಹೇಳಿ ಅಧಿಕಾರಕ್ಕೆ ಬರುತ್ತಾರೆ. ಈ ಪಕ್ಷದವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ, ಹೀಗಾಗಿ ಮೋದಿ ಹೆಸರು ಹೇಳುತ್ತಾ ಹೊರಟಿದ್ದಾರೆ. ಅದರಂತೆ ಎಲ್ಲರೂ ಮೋದಿ ಎಂದು ಘೋಷಮೆ ಕೂಗುತ್ತಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿ ಸರ್ಕಾರ ಸ್ತಬ್ಧವಾಗಿದೆ. ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಸರ್ಕಾರದ ತಪ್ಪು ಕಂಡು ಹಿಡಿಯುವುದು ವಿರೋಧ ಪಕ್ಷದವರ ಕೆಲಸವಾಗಿದೆ ಎಂದರು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಮಾತನಾಡಿದರೆ ಕೊಳಕು ಭಾಷೆ ಎನ್ನುತ್ತಾರೆ. ತಪ್ಪು ಮಾಡಿದರೆ ಹೊಗಳಬೇಕೆ ಎಂದು ಪ್ರಶ್ನಿಸಿದರು. ಮಂಗಳೂರು ಗೋಲಿಬಾರ್‌ ರಾಜಕೀಯಪ್ರೇರಿತವಾಗಿದೆ. ಪೊಲೀಸರಿಗೆ ಗಾಯವಾಗಿಲ್ಲ. ಇದು ಸರ್ಕಾರದ ಕುಮ್ಮುಕ್ಕು ಆಗಿದ್ದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.

ತಮ್ಮನ್ನು ದೆಹಲಿಗೆ ಕಾಂಗ್ರೆಸ್‌ ವರಿಷ್ಠರು ಕರೆದಿದ್ದಾರೆ. ಆದರೆ ಯಾವ ವಿಷಯಕ್ಕೆ ಕರೆದಿದ್ದಾರೆ ಎನ್ನುವ ಬಗ್ಗೆ ತಮಗೆ ಗೊತ್ತಿಲ್ಲ. ದೆಹಲಿಗೆ ಹೋದ ಆನಂತರ ವಿಷಯ ಗೊತ್ತಾಗುತ್ತದೆ ಎಂದರು. ಪೌರತ್ವ ಕಾಯ್ದೆ ಬಗ್ಗೆ ಲಕ್ಷ್ಮಣ ಸವದಿ ಕಾಂಗ್ರೆಸ್‌ನವರ ಮೇಲೆ ವಿನಾಕಾರಣ ಅರೋಪ ಮಾಡುತ್ತಿದ್ದಾರೆ. ಸವದಿ ಪರಾಭವಗೊಂಡ ವ್ಯಕ್ತಿಯಾಗಿದ್ದಾರೆ. ಸವದಿ ಗಂಧ-ಗಾಳಿ ಗೊತ್ತಿರದ ಮನುಷ್ಯ. ಆತನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ಸವದಿ ಒಂದು ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದರು. ನಾನು ಐದು ವರ್ಷ ಪೂರ್ಣ ಅಧಿಕಾರ ಅನುಭವಿಸಿದ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಎಲ್ಲ ಗೊತ್ತಿದೆ, ಬ್ಲೂಫಿಲಂ ನೋಡಿದವರಿಂದ (ಲಕ್ಷ್ಮಣ ಸವದಿ) ಅವರಿಂದ ಪಾಠ ಕಲಿಯುವ ಆವಶ್ಯಕತೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ರಾಜಶೇಖರ ಹಿಟ್ನಾಳ, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಇದ್ದರು.