* ಬಿಜೆಪಿ ಸರ್ಕಾರದಿಂದ ಈಗೇನು ಸ್ವರ್ಗ ಬಂತಾ?*  ಪೆಟ್ರೋಲ್‌ನ ನೈಜ ಬೆಲೆ 37 ಇದೆ. ತೆರಿಗೆ ವಿಧಿಸಿ 100ಕ್ಕೆ ಏರಿಕೆ * ಕೋವಿಡ್‌ನಿಂದಾದ ಮರಣಗಳಿಗೆ ಪ್ರಧಾನಿ ಮೋದಿಯೇ ನೇರ ಹೊಣೆ

ಸಂಡೂರು(ಜೂ.23): ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಅಚ್ಚೇ ದಿನ್‌ ಆಯೇಗಾ ಎಂದು ಹೇಳಿ ದೇಶದ ಜನತೆಗೆ ನಾಜೂಕಾಗಿ ಟೋಪಿ ಹಾಕಿದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ಮಂಗಳವಾರ ಶಾಸಕ ಈ. ತುಕಾರಾಂ ಅವರು ಹಮ್ಮಿಕೊಂಡಿದ್ದ ಉಚಿತ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಿಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್‌ ಇಂಜಿನ್‌ ಸರ್ಕಾರ ಅಂದಿದ್ದರು. ಈಗೇನು ಸ್ವರ್ಗ ಬಂತಾ? ಪೆಟ್ರೋಲ್‌ನ ನೈಜ ಬೆಲೆ 37 ಇದೆ. ತೆರಿಗೆ ವಿಧಿಸಿ 100ಕ್ಕೆ ಏರಿಕೆ ಮಾಡಿದ್ದಾರೆ. ಈ ಮೂಲಕ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಪಕ್ಕದ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲೂ ತೈಲಬೆಲೆ ಇಷ್ಟಿಲ್ಲ. ಭಾರತದಲ್ಲಿ ಮಾತ್ರ ಬೆಲೆ ಏರಿಕೆ ಏಕೆ ಎಂದು ಪ್ರಶ್ನಿಸಿದರು.

ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾದವು. ಚಾಮರಾಜನಗರದಲ್ಲಿ ಆಕ್ಸಿಜನ್‌ ಇಲ್ಲದೆ 36 ಜನ ಸಾವಿಗೀಡಾದರು. ಆರೋಗ್ಯ ಸಚಿವ ಕೇವಲ 3 ಜನ ಮರಣ ಹೊಂದಿದ್ದು ಎಂದು ಸುಳ್ಳು ಹೇಳಿದರು. ಸುಳ್ಳು ಹೇಳಿದ ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಈವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಕಿಡಿಕಾರಿದರು.

ಬಳ್ಳಾರಿ: ಲಾಕ್‌ಡೌನ್‌ ಇದ್ರೂ ಸಚಿವ ಈಶ್ವರಪ್ಪ ದೇಗುಲ ಪೂಜೆ

ಲಾಕ್‌ಡೌನ್‌ ಮಾಡಲು ನಾನು ಕೂಡಾ ಸಹಮತ ಸೂಚಿಸಿದ್ದೆ. ಬಡವರ ಬ್ಯಾಂಕ್‌ ಖಾತೆಗೆ ಹತ್ತು ಸಾವಿರ ಹಣ ಹಾಗೂ ಹತ್ತು ಕೆಜಿ ಅಕ್ಕಿ ನೀಡಿ ಎಂದು ಸಲಹೆ ನೀಡಿದ್ದೆ. ಆದರೆ, ಅದನ್ನು ಪಾಲಿಸಲಿಲ್ಲ ಎಂದರಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೆ ಖಂಡಿತಾ ಆ ಕೆಲಸ ಮಾಡುತ್ತಿದ್ದೆವು ಎಂದರು.

ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿ, ಕೋವಿಡ್‌ನಿಂದಾದ ಮರಣಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ನೇರ ಹೊಣೆ. ಸೋಂಕು ನಿಯಂತ್ರಣದ ಕ್ರಮ ವಹಿಸಲಿಲ್ಲ. ಕೇಂದ್ರ ಸರ್ಕಾರ ಘೋಷಿಸಿರುವ .20 ಲಕ್ಷ ಕೋಟಿಯಲ್ಲಿ ಕರ್ನಾಟಕದ ಜನತೆಗೆ ಒಂದು ಪೈಸೆಯೂ ಸಿಕ್ಕಿಲ್ಲ ಎಂದು ದೂರಿದರು.

ಶಾಸಕ ಈ. ತುಕಾರಾಂ ಮಾತನಾಡಿ, ನನ್ನ ವೈಯಕ್ತಿಕ ಹಣದಲ್ಲಿ ಐದು ಕೆಜಿ ಅಕ್ಕಿಯ ಸುಮಾರು 40 ಸಾವಿರ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು.

ಮಾಜಿ ಸಚಿವ ಸಂತೋಷ್‌ ಲಾಡ್‌ ಮಾತನಾಡಿದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಹಗಲುವೇಷಗಾರರು, ತೃತೀಯ ಲಿಂಗಿಗಳು, ಸ್ಟಾಫ್‌ ನರ್ಸ್‌ಗಳು ಸೇರಿದಂತೆ ವಿವಿಧ ವಲಯದ ಕೋವಿಡ್‌ ವಾರಿಯರ್ಸ್‌ಗೆ ಸಾಂಕೇತಿಕವಾಗಿ ಕಿಟ್‌ಗಳನ್ನು ವಿತರಿಸಲಾಯಿತು.

ಶಾಸಕ ಭೈರತಿ ಸುರೇಶ್‌, ಶಾಸಕರಾದ ಬಿ. ನಾಗೇಂದ್ರ, ಜಿ.ಎನ್‌. ಗಣೇಶ್‌, ಎಲ್‌. ಭೀಮಾನಾಯ್ಕ, ಪ್ರಕಾಶ್‌ ರಾಥೋಡ್‌, ಮಾಜಿ ಶಾಸಕ ಅಶೋಕ್‌ ಪಟ್ಟಣಶೆಟ್ಟಿ, ಶ್ರೀನಿವಾಸ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಮಹ್ಮದ್‌ ರಫೀಕ್‌, ಶಿವಯೋಗಿ, ಗ್ರಾಮೀಣ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಮಾಜಿ ಎಂಎಲ್‌ಸಿ ಕೆ.ಎಸ್‌.ಎಲ್‌. ಸ್ವಾಮಿ, ಮುಖಂಡರಾದ ಮುಂಡ್ರಿಗಿ ನಾಗರಾಜ್‌, ಜಿಪಂ ಸದಸ್ಯ ಅಕ್ಷಯ್‌ ಲಾಡ್‌, ಜನಾರ್ದನ, ತಾಪಂ ಅಧ್ಯಕ್ಷೆ ಫರ್ಜಾನಾ ಗೌಸ್‌, ಪುರಸಭೆ ಅಧ್ಯಕ್ಷೆ ಅನಿತಾ ವಸಂತ್‌ ಕುಮಾರ್‌, ಉಪಾಧ್ಯಕ್ಷ ಈರೇಶ್‌ ಸಿಂಧೆ, ವಾಡಾ ಮಾಜಿ ಅಧ್ಯಕ್ಷ ರೋಷನ್‌, ಮಹಾಬಲಿ ಚಿತ್ರಿಕಿ ಹಾಗೂ ಪುರಸಭೆ ಸದಸ್ಯರಾದ ಕೆ.ವಿ. ಸುರೇಶ್‌, ಶಿವಕುಮಾರ್‌ ಇತರರಿದ್ದರು.