ಕೋಲಾರ, (ಫೆ.03): ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಿಎಂ ಎಸ್‌. ಎಂ. ಕೃಷ್ಣ ಅವರು ಇಂದು (ಭಾನುವಾರ) ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕೆಲಹೊತ್ತು ಎಲ್ಲರನ್ನು ಆಶ್ಚರ್ಯಗೊಳ್ಳುವಂತೆ ಮಾಡಿತು.

ಮಾಜಿ ಸಿಎಂ ಸಿದ್ದರಾಮಯ್ಯ ತಂಗಿದ್ದ ಕೋಲಾರ ಪ್ರವಾಸಿ ಮಂದಿರಕ್ಕೆ ಎಸ್.ಎಂ. ಕೃಷ್ಣ ಅವರು ಬಂದು ಭೇಟಿ ಮಾಡಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಸ್‌.ಎಂ.ಕೃಷ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜಕೀಯವಾಗಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಆದ್ರೆ ಕೃಷ್ಣ ಹಾಗೂ ಸಿದ್ದು ಭೇಟಿ ಅನಿರೀಕ್ಷಿತವಾಗಿದೆ.

ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪನವರ ಜನ್ಮ ಶತಮಾನೋತ್ಸದಲ್ಲಿ ಪಾಲ್ಗೊಳ್ಳಲು ಕೋಲಾರಕ್ಕೆ ಸಿದ್ದರಾಮಯ್ಯ ಅವರು ಹೋಗಿದ್ದರು.

ಇನ್ನು ಎಸ್‌.ಎಂ. ಕೃಷ್ಣ ಅವರು ಸಹ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ ಅಚಾನಕ್ ಆಗಿ ಕೋಲಾರ ಪ್ರವಾಸಿ ಮಂದಿರದಲ್ಲಿ ಇಬ್ಬರು ಮಾಜಿ ಸಿಎಂಗಳು ಭೇಟಿಯಾದರು.

ಈ ವೇಳೆ ಒಬ್ಬರಿಗೊಬ್ಬರು ಹಸ್ತಲಾಘವ ಮಾಡಿ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಕೃಷ್ಣ, 'ನನಗೆ ಕಮಲ ಮಾತ್ರ ಗೊತ್ತು ಆಪರೇಷನ್ ಗೊತ್ತಿಲ್ಲ. ಮಂಡ್ಯ ಚುನಾವಣೆಗೆ ಅಭ್ಯರ್ಥಿಯನ್ನ ಅಲ್ಲಿನ ಬಿಜೆಪಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಸುಮಲತಾ ಅಭ್ಯರ್ಥಿ ಎನ್ನುವ ಬಗ್ಗೆ ಮಾಹಿತಿ ಇಲ್ಲ' ಎಂದು ಹೇಳಿದರು.

ನನಗೆ ನನ್ನ ಕೈ ನೋಡುವುದಕ್ಕೆ ಬರುವುದಿಲ್ಲ. ಇನ್ನು ಸಮ್ಮಿಶ್ರ ಸರ್ಕಾರದ ಭವಿಷ್ಯ ನನಗೆ ಗೊತ್ತಿಲ್ಲ. ರಾಜಕಾರಣದಲ್ಲಿ ನಾನು ಅಷ್ಟು ಸಕ್ರಿಯವಾಗಿಲ್ಲ, ದೂರದಿಂದ ನೋಡುತ್ತಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಮೋದಿ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಸಮರ್ಪಕ ಬಜೆಟ್ ಕೊಟ್ಟಿದೆ. ಈ ಬಜೆಟ್ ಎಲ್ಲಾ ವರ್ಗಗಳ ಜನರ ಅನಿಸಿಕೆಗಳಿಗೆ ಸ್ಪಂದಿಸುವಂತದ್ದಾಗಿದೆ ಎಂದು ಕೊಂಡಾಡಿದರು..