ರಾಣಿಬೆನ್ನೂರು(ನ.23): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ. ಮೂಲ ಮತ್ತು ವಲಸಿಗರ ಮಧ್ಯೆ ಕಾಂಗ್ರೆಸ್‌ನವರ ಹೋರಾಟದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಆರೋಪಿಸಿದ್ದಾರೆ. 

ಬಿಜೆಪಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗ ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡಲಿಲ್ಲ. ಅಭಿವೃದ್ಧಿಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ 17 ಶಾಸಕರು ರಾಜೀನಾಮೆ ನೀಡಿದರು. ಇದಕ್ಕೆ ರಮೇಶಕುಮಾರ ಅವರನ್ನು ಬಳಸಿಕೊಂಡು ಅನರ್ಹರನ್ನಾಗಿ ಮಾಡಿಸಿದರು. ಮುಂಬರುವ ದಿನಮಾನಗಳಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಅನರ್ಹ ಶಾಸಕರು ಸ್ಪರ್ಧೆಗೆ ಇಳಿದಿರುವ ಕ್ಷೇತ್ರಗಳಲ್ಲಿ ಅವರನ್ನು ಸೋಲಿಸಲು ಎಚ್‌.ಡಿ. ಕುಮಾರಸ್ವಾಮಿ ಅವರು ಪಣತೊಟ್ಟವರಂತೆ ಆಡುತ್ತಾರೆ. ಇನ್ನೊಂದೆಡೆ ಸಾರ್ವತ್ರಿಕ ಚುನಾವಣೆ ಮಾಡಲು ಬಿಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರವನ್ನು ಬಿಳಿಸುವುದಿಲ್ಲ. ಬಾಹ್ಯ ಬೆಂಬಲದೊಂದಿಗೆ ಸರ್ಕಾರವನ್ನು ಮುಂದುವರಿಸುವುದಾಗಿ ಹೇಳುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲಪಡಿಸಲಾಗುವುದು. ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಕ್ಕೆ ಯಾವುದೇ ತೊಂದರೆಯಾಗದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ನ. 24ರಂದು ಮಧ್ಯಾಹ್ನ 3.30ಕ್ಕೆ ನಗರದ ನಗರಸಭಾ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರ ಪರವಾಗಿ ಬಹಿರಂಗ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಶ್ರೀರಾಮಲು, ಪ್ರಭು ಚವಾಣ್‌, ಬಸವರಾಜ ಬೊಮ್ಮಾಯಿ, ಸಂಸದರಾದ ಬಿ.ವೈ. ರಾಘವೇಂದ್ರ, ಸಿ.ಎಂ. ಉದಾಸಿ, ಸಿ.ಎಂ. ಸಿದ್ದೇಶ್ವರ ಸೇರಿದಂತೆ ಶಾಸಕರು, ಮಾಜಿ ಶಾಸಕರು ಆಗಮಿಸಲಿದ್ದಾರೆ. ನ. 27ರಂದು ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸಹ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಶಾಸಕ ಅರವಿಂದ ಬೆಲ್ಲದ, ಸಿದ್ದರಾಜ್‌ ಕಲಕೋಟಿ, ಭಾರತಿ ಜಂಬಗಿ, ಬಿ.ಪಿ. ಹರಿಶ್‌, ಚೋಳಪ್ಪ ಕಸವಾಳ ಸೇರಿದಂತೆ ಇತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.