ಮಂಡ್ಯ(ಆ.04): ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ಕೆ.ಆರ್‌ .ಪೇಟೆಯ ಯಶಸ್ವಿನಿ ಸಮೂದಾಯ ಭವನದಲ್ಲಿ ನಡೆದ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಕೋಮುವಾದಿ ಬಿಜೆಪಿ ಪಕ್ಷವನ್ನು ಅದಿಕಾರದಿಂದ ದೂರವಿಡಲು ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದ್ದೆವು. ಬಿಜೆಪಿ ಪಕ್ಷ ಶಾಸಕರ ರಾಜಿನಾಮೆ ಕೊಡಿಸಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರ ಎಷ್ಟುದಿನ ನಡೆಯುತ್ತದೆಯೋ ನಾನು ನೋಡುತ್ತೇನೆ ಎಂದರು.

ಅನರ್ಹ ಶಾಸಕರು ಬಿಎಸ್‌ವೈ ಅವ್ರನ್ನು ಕಿತ್ತು ತಿಂತಾರೆ:

17 ಜನ ಅನರ್ಹ ಶಾಸಕರು ಬಿಜೆಪಿ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ. ಯಡಿಯೂರಪ್ಪ ಅವರನ್ನು ಕಿತ್ತುಕೊಂಡು ತಿಂತಾರೆ. ಮಂತ್ರಿಮಂಡಲ ಮಾಡುವುದರಲ್ಲೇ ಅಸಮಾಧಾನ ಸ್ಪೋಟವಾಗುತ್ತದೆ. ಆರು ತಿಂಗಳಲ್ಲಿ ಯಡಿಯೂರಪ್ಪ ಬಿಜೆಪಿ ಸರ್ಕಾರದ ಕಥೆ ಮುಗಿಯುತ್ತದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ನಡೆಯಲಿರುವ ಎಲ್ಲಾ 17 ಕ್ಷೇತ್ರಗಳ ಉಪ ಚುನಾವಣೆ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ - ಜೆಡಿಎಸ್‌ ಚುನಾವಣಾ ಮೈತ್ರಿಯು ಮುಗಿದ ಅಧ್ಯಾಯವಾಗಿದೆ ಎಂದು ತಿಳಿಸಿದರು.

ಕಣ್ಣೀರು ಹಾಕಿದ್ದೇಕೆ?

ಶಾಸಕ ನಾರಾಯಣಗೌಡ ಒಬ್ಬ ನಯವಂಚಕ, ಹಲಾಲ… ಟೋಪಿ, ವಿಶ್ವಾಸಘಾತುಕ ಇಡೀ ಕುಟುಂಬವನ್ನು ಎದುರು ಹಾಕಿಕೊಂಡು ಅವನಿಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದೆ. ಇಂತಹ ವಿಶ್ವಾಸಘಾತುಕತನಿಂದ ನನಗೆ ಮೋಸ ಆಗಬೇಕಾಗಿದ್ದೆ. ನಾನು ಮುಖ್ಯಮಂತ್ರಿ ಹುದ್ದೆಯಿಂದ ಇಳಿದು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗಲೂ ಕಣ್ಣೀರು ಹಾಕಿರಲಿಲ್ಲ. ತಮ್ಮ ಸಹೋದರಿ ಅನಸೂಯ ಮಂಜುನಾಥ್‌ ಬಗ್ಗೆ ಮಾಡಿರುವ ಸುಳ್ಳು ಆರೋಪಗಳಿಂದ ನೊಂದು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದರು.

ಮಾಧ್ಯಮಗಳ ವಿರುದ್ಧ ತರಾಟೆ

ನನ್ನ ವಿರುದ್ಧ ಮಾಧ್ಯಮಗಳು ನಿರಂತರವಾಗಿ ಸಮರ ಸಾರುತ್ತಿವೆ. ಇದರಿಂದ ಮಾಧ್ಯಮಗಳ ಮುಂದೆ ನಾನು ಮಾತನಾಡುವುದನ್ನೇ ನಿಲ್ಲಿಸಿದ್ದೇನೆ. ಈಗಾಗಲೇ ನನ್ನ ಕುಟುಂಬವನ್ನು ನಿರಂತರವಾಗಿ ಹರಾಜು ಹಾಕುತ್ತಿವೆ. ದಯಮಾಡಿ ನನ್ನ ಮಗ ಸೇರಿದಂತೆ ನನ್ನ ಕುಟುಂಬದವರ ವಿರುದ್ಧ ಇಲ್ಲಸಲ್ಲದ ಸುಳ್ಳು ಸುದ್ಧಿಗಳನ್ನು ಬಿತ್ತರಿಸಬೇಡಿ. ಕೆ.ಆರ್‌ .ಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಯಾವುದೇ ಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಮಗನಾಗಲೀ ಕುಟುಂಬದ ಸದಸ್ಯರಾಗಲೀ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಮೈತ್ರಿ ಸರ್ಕಾರ ಪತನ; ರಾಜಕೀಯ ನಿವೃತ್ತಿ ಪಡೆಯಲು ಎಚ್‌ಡಿಕೆ ನಿರ್ಧಾರ?

ಸಭೆಯಲ್ಲಿ ಶಾಸಕರಾದ ಸಿ.ಎಸ್‌.ಪುಟ್ಟರಾಜು, ಸಾ.ರಾ.ಮಹೇಶ್‌, ಕೆ.ಸುರೇಶ್‌ ಗೌಡ, ಸಿ.ಎನ್‌.ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌, ಜಿಪಂ ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಮಾಜಿ ಉಪಾಧ್ಯಕ್ಷ ಕೆ.ಎಸ್‌.ಪ್ರಭಾಕರ್‌ , ಜಿಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್‌.ಟಿ.ಮಂಜು, ಜಿಪಂ ಸದಸ್ಯ ದೇವರಾಜು, ಮುಖಂಡ ಬಸ್‌ ಕೃಷ್ಣೇಗೌಡ, ಪುರಸಭೆ ಸದಸ್ಯ ಕೆ.ಎಸ್‌.ಸಂತೋಷ್‌ ಸೇರಿದಂತೆ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ