ಸಿದ್ದು ಸರ್ಟಿಫಿಕೇಟ್‌ ಬೇಕಿಲ್ಲ| ಸಿದ್ದರಾಮಯ್ಯ ಸ್ವತಂತ್ರವಾಗಿ ಹೋರಾಟ ಮಾಡಿದವರಲ್ಲ| ಯಾರೋ ದುಡಿದು ಮಾಡಿರ್ತಾರೆ. ಆ ದುಡಿಮೆಯ ಫಲವನ್ನು ಇವರು ಅನುಭವಿಸಿ ರಾಜಕೀಯ ಮಾಡುತ್ತಿದ್ದಾರೆ|ಸ್ವಂತ ಶಕ್ತಿಯ ಮೇಲೆ ಸಿದ್ದರಾಮಯ್ಯ ರಾಜಕೀಯ ಮಾಡಿಲ್ಲ: ಕುಮಾರಸ್ವಾಮಿ| 

ವಿಜಯಪುರ(ಫೆ.01): ಜೆಡಿಎಸ್‌ ಒಂದು ರಾಜಕೀಯ ಪಕ್ಷವೇ ಅಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರಿಂದ ನಮಗೆ ಸರ್ಟಿಫಿಕೇಟ್‌ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಡಿವಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ‘ಸಿದ್ದರಾಮಯ್ಯ ಕಾಂಗ್ರೆಸ್‌ ನೆರಳಿನಲ್ಲಿ ಇದ್ದಾರೆ. ಸ್ವಂತ ಪಕ್ಷಕಟ್ಟಿ ಚುನಾವಣೆ ನಡೆಸಲಿ. ಆಗ ಅವರಿಗೆ ಉತ್ತರಿಸುತ್ತೇನೆ. ಅವರು ಸ್ವತಂತ್ರವಾಗಿ ಹೋರಾಟ ಮಾಡಿದವರಲ್ಲ. ಯಾರೋ ದುಡಿದು ಮಾಡಿರ್ತಾರೆ. ಆ ದುಡಿಮೆಯ ಫಲವನ್ನು ಇವರು ಅನುಭವಿಸಿ ರಾಜಕೀಯ ಮಾಡುತ್ತಿದ್ದಾರೆ. ಸ್ವಂತ ಶಕ್ತಿಯ ಮೇಲೆ ಸಿದ್ದರಾಮಯ್ಯ ರಾಜಕೀಯ ಮಾಡಿಲ್ಲ’ ಎಂದು ಹೇಳಿದರು.

ಕುಮಾರಸ್ವಾಮಿ ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ: ತಿರುಗೇಟು ಕೊಟ್ಟ MLC

ಇದೇ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜೆಡಿಎಸ್‌ ಪಕ್ಷದ ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರ ಮುಖಾಂತರ ಪದಾದಿಕಾರಿಗಳ ಬದಲಾವಣೆ ಸೇರಿದಂತೆ ಪಕ್ಷದಲ್ಲಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಪ್ರವಾಸ ಮಾಡಿ ಆ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.