Asianet Suvarna News Asianet Suvarna News

ಜನರ ಆಚಾರ- ವಿಚಾರ ಗೌರವಿಸಲು ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ

ಜನರ ಆಚಾರ ವಿಚಾರಗಳನ್ನ ಗೌರವಿಸಲಿಕ್ಕಾಗಿಯೇ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

Formation of Chamundibetta Authority to respect people's customs and ideas snr
Author
First Published Oct 16, 2023, 8:50 AM IST

  ಮೈಸೂರು : ಜನರ ಆಚಾರ ವಿಚಾರಗಳನ್ನ ಗೌರವಿಸಲಿಕ್ಕಾಗಿಯೇ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನ ಜನರು ಶಾಂತಿಪ್ರಿಯರು. ಕಾನೂನು ಸುವ್ಯವಸ್ಥೆಯನ್ನ ಗೌರವಿಸುವಂತಹ ಜನ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಆಚರಣೆ ಮಾಡಲಿಕ್ಕೆ ಅವಕಾಶವಿದೆ ಎಂದರು.

ಸರ್ಕಾರ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿತ್ತು. ಆದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದೇವೆ. ಕಲೆ ಸಾಹಿತ್ಯ ಎಲ್ಲದಕ್ಕೂ ಹೆಚ್ಚಿನ ಒತ್ತು ನೀಡಿದ್ದೇವೆ ಎಂದರು.

ನಾಡಿಗೆ ಉತ್ತಮ ಮಳೆ- ಬೆಳೆ ನೀಡುವಂತೆ ಪ್ರಾರ್ಥನೆ ಸಲ್ಲಿಕೆ- ಡಿಕೆಶಿ

ನಾಡಿಗೆ ಉತ್ತಮ ಮಳೆ- ಬೆಳೆ ನೀಡುವಂತೆ ತಾಯಿ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಸಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿ ತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ ಎಂದರು.

ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ಅವರು ತಿಳಿಸಿದರು.

ರಾಕ್ಷಸ ಗುಣಗಳನ್ನು ಬಿಟ್ಟು ದೈವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು- ಜಿಟಿಡಿ

ನಮ್ಮಲ್ಲಿರುವ ರಾಕ್ಷಸ ಗುಣಗಳನ್ನು ಬಿಟ್ಟು ದೈವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮಲ್ಲೂ ರಾಕ್ಷಸ ಗುಣಗಳಿವೆ, ಈ ರಾಕ್ಷಸ ಗುಣಗಳನ್ನ ಬಿಟ್ಟು ಎಲ್ಲರೂ ಮುಂದೆ ಸಾಗಬೇಕು. ಎಲ್ಲರೂ ದ್ವೇಷ, ಅಸೂಯೆ ಬಿಟ್ಟು ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ದುರ್ಗೆಯರ ಶಕ್ತಿಹೊಂದಿರುವ ನಾಡದೇವತೆ ಚಾಮುಂಡೇಶ್ವರಿ. ಇಂದು ಎಲ್ಲರೂ ಭಕ್ತಯಿಂದ ಪೂಜಾ ಕೆಲಸವನ್ನ ನೆರವೇರಿಸಿದ್ದೇವೆ. ಕನ್ನಡ ನಾಡಿಗೆ ಬೀಕರ ಬರಗಾಲ ಬಂದಿದೆ. ತಾಯಿ ಚಾಮುಂಡೇಶ್ವರಿ ಮಳೆಗೆ ಆಶೀರ್ವಾದ ಮಾಡಬೇಕು ಎಂದರು.

ದಸರಾ ವೀಕ್ಷಣೆಗೆ ಹಲವು ಕಡೆಯಿಂದ ಜನ ಬರುತ್ತಾರೆ. ಈ ಅದ್ದೂರಿ ವೈಭೋಗವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಇರೋದ್ರಿಂದ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆ ಇದೆ. ತಾಯಿ ಚಾಮುಂಡೇಶ್ವರಿ ಆಶಿರ್ವಾದದಿಂದ ರಾಜ್ಯದಲ್ಲಿ ಮಳೆ ಆಗಲಿ. ಎಲ್ಲರಿಗೂ ಚಾಮುಂಡೇಶ್ವರಿ ಒಳ್ಖೆಯದನ್ನ ಮಾಡಲಿ ಅವರು ಹೇಳಿದರು.

Follow Us:
Download App:
  • android
  • ios