ಆನೆ ಕಾರಿಡಾರ್ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನಕ್ಕೆ ಸಿದ್ಧತೆ
ನೂರಾರು ಎಕರೆ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರದ ಮುಮದೆ ಇಡಲಾಗಿದೆ.
ಬೆಂಗಳೂರು (ಆ.30): ಕಣಿಯನಪುರ ಆನೆ ಕಾರಿಡಾರ್ ನಿರ್ಮಾಣಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲ ಸುಮಾರು 106 ಎಕರೆ ಅರಣ್ಯ ಭೂಮಿಯನ್ನು ರೈತರಿಂದ ಸ್ವಾಧೀನ ಪಡೆಸಿಕೊಳ್ಳುವ ಸಂಬಂಧ ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಂಡೀಪುರ ಅಭಯಾರಣ್ಯ ಮತ್ತು ತಮಿಳುನಾಡಿನ ಮಧುಮಲೈ ಅರಣ್ಯಗಳ ನಡುವಿನ ಆನೆಗಳು ಸೇರಿದಂತೆ ವನ್ಯಜೀವಿಗಳು ಸುಗಮ ಸಂಚಾರಕ್ಕಾಗಿ ಈ ಭೂಮಿ ನೆರವಾಗಲಿದ್ದು, ಕಣಿಯನಪುರ ಆನೆ ಕಾರಿಡಾರ್ ಆಗಲಿದೆ. ಕಾರಿಡಾರ್ ನಿರ್ಮಾಣದಿಂದ ಈ ಭಾಗದಲ್ಲಿನ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳನ್ನು ತಡೆಯಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲೆಯ 72,684 ಕೊರೋನಾ ಟೆಸ್ಟ್ : ಸೋಂಕಿತರೆಷ್ಟು? ಗುಣಮುಖರೆಷ್ಟು?...
ಕಣಿಯನಪುರ ಆನೆ ಕಾರಿಡಾರ್‌ಗೆ ಸುಮಾರು 600 ಎಕರೆಗೂ ಹೆಚ್ಚು ಭೂಮಿ ಅಗತ್ಯವಿದೆ. ಪ್ರಸ್ತುತ 106 ಎಕರೆ ಭೂಮಿಯನ್ನು ನೀಡಲು ಸ್ಥಳೀಯ ರೈತರು ಮುಂದೆ ಬಂದಿದ್ದಾರೆ. ಇತರೆ ರೈತರು ಜಮೀನು ನೀಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ರೈತರು ಮುಂದೆ ಬಂದಲ್ಲಿ ಅವರಿಗೆ ಪರಿಹಾರ ಕಲ್ಪಿಸಿ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಆರ್. ಬಾಲಚಂದ್ರ ಮಾಹಿತಿ ನೀಡಿದರು.
ಅಲ್ಲದೆ, ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಂದ ರೈತರ ಬೆಳೆ ನಾಶಮಾಡುವ ಪ್ರಕರಣಗಳು ಸಾಕಷ್ಟುಬೆಳಕಿಗೆ ಬರುತ್ತಿವೆ. ಕಾರಿಡಾರ್ ನಿರ್ಮಾಣದ ಬಳಿಕ ಈ ರೀತಿಯ ಘಟನೆಗಳು ನಡೆಯುವುದಿಲ್ಲ. ರೈತರು ನೆಮ್ಮದಿ ಜೀವನ ನಡೆಸಬಹುದು. ಈ ಕಾರಿಡಾರ್ ನಿರ್ಮಾಣದಿಂದ ಸುಮಾರು 500 ಮೀಟರ್ ಪ್ರದೇಶ ವನ್ಯಜೀವಿಗಳಿಗೆ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.
ಪರಿಹಾರ ನಿಗದಿಗೆ ಚರ್ಚೆ: ಅರಣ್ಯ ಇಲಾಖೆಗೆ ಜಮೀನು ನೀಡುವವರಿಗೆ ಪರಿಹಾರ ನೀಡಬೇಕಾಗುತ್ತದೆ. ಇಲ್ಲವೇ, ಪರ್ಯಾಯವಾಗಿ ಭೂಮಿ ನೀಡುವ ಸಂಬಂಧ ಚರ್ಚೆ ನಡೆಯುತ್ತಿದೆ. ಈ ಎರಡರಲ್ಲಿ ಯಾವುದಾದರೂ ಒಂದನ್ನು ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಮನವಿ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಖಾಸಗಿ ಆಸ್ಪತ್ರೆಗಳಿಗೆ 22 ಕೋಟಿ ರು.ಕೋವಿಡ್ ಹಣ...
ಎಸ್‌ಸಿ-ಎಸ್‌ಟಿ ಜಮೀನು ಖರೀದಿಗೆ ಅಡ್ಡಿ: ಕಣಿಯನಪುರ ಆನೆ ಕಾರಿಡಾರ್‌ಗೆ ಸೇರಿರುವ ಖಾಸಗಿ ಜಮೀನುಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಜಮೀನುಗಳು ಇವೆ. ಈ ಜಮೀನುಗಳನ್ನು ಪರಿಶಿಷ್ಟಪಂಗಡ ಮತ್ತು ಜಾತಿಗಳ (ಕೆಲವು ಜಮೀನುಗಳ ವರ್ಗಾವಣೆ ಕಾಯಿದೆ) ಅಡಿ ಹಸ್ತಾಂತರಿಸಲು ಅವಕಾಶವಿಲ್ಲ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.