ದಸರಾ ಜಂಬೂಸವಾರಿ ಆರಂಭಕ್ಕೂ ಮುನ್ನವೇ ಮೈಸೂಲು ಅರಮನೆ ಆನೆ ಬಿಡಾರದಲ್ಲಿ ಅಭಿಮನ್ಯು ಆನೆ ಮೈಮೇಲೆ ಗಾದಿ, ಚಾಪ್‌ ಹಾಕಿ ಹಗ್ಗದಿಂದ ಬೀಗಿಯಾಗಿ ಕಟ್ಟಲಾಯಿತು. 

ಬಿ. ಶೇಖರ್‌ ಗೋಪಿನಾಥಂ

 ಮೈಸೂರು (ಅ.06): ದಸರಾ ಜಂಬೂಸವಾರಿ ಆರಂಭಕ್ಕೂ ಮುನ್ನವೇ ಮೈಸೂಲು ಅರಮನೆ ಆನೆ ಬಿಡಾರದಲ್ಲಿ ಅಭಿಮನ್ಯು ಆನೆ ಮೈಮೇಲೆ ಗಾದಿ, ಚಾಪ್‌ ಹಾಕಿ ಹಗ್ಗದಿಂದ ಬೀಗಿಯಾಗಿ ಕಟ್ಟಲಾಯಿತು. ನಂತರ ರಂಗು ರಂಗಿನ ಜುಲಾ ಹೊದಿಸಲಾಯಿತು.

ಬಳಿಕ ಮೆರವಣಿಗೆ ಆರಂಭವಾದ ಮೇಲೆ ಕಾವೇರಿ ಮತ್ತು ಚೈತ್ರಾ ಆನೆಗಳೊಂದಿಗೆ ಅಭಿಮನ್ಯು ಆನೆಯು ಆನೆ ಬಿಡಾರದಿಂದ ಖಾಸ್‌ ಅರಮನೆ ಬಳಿಗೆ ಆಗಮಿಸಿತು.

ಒಂದೆಡೆ ದಸರಾ (Dasara) ಮೆರವಣಿಗೆಯು ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಸಾಗುತ್ತಿದ್ದರೇ, ಮತ್ತೊಂಡೆದೆ ಅಭಿಮನ್ಯು ಆನೆ ಮೇಲೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಯಿತು. ಚಿನ್ನದ ಅಂಬಾರಿಯನ್ನು ಅರಮನೆಯವರು ಅರಣ್ಯ ಇಲಾಖೆಯವರಿಗೆ (Forest Department ) ನೀಡಿದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯೊಳಗೆ ಇರಿಸ ಸಿದ್ಧಗೊಳಿಸಲಾಯಿತು. ಚಿನ್ನದ ಅಂಬಾರಿಯನ್ನು ಕ್ರೇನ್‌ ಸಹಾಯದಿಂದ ಅಭಿಮನ್ಯು ಆನೆಯ ಮೈಮೇಲೆ ಇರಿಸಿ ಬಿಗಿಯಾಗಿ ಕಟ್ಟಲಾಯಿತು.

ಅಲ್ಲದೆ, ಅಭಿಮನ್ಯು ಕೊಂಬಿಗೆ ಸಿಂಗೋಟಿ ಬಳೆ, ಹಣೆಪಟ್ಟಿ, ಕಾಲಿಗೆ ಡುಬ್ಬ, ಕಿವಿಗೆ ಚಾಮರ ತೊಡಿಸಿ ಅಲಂಕರಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ, ಮಾವುತರು, ಕಾವಾಡಿಗಳು ಅಂಬಾರಿಯನ್ನು ಕಟ್ಟುವ ಕೈಂಕರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

ಖಾಸ್‌ ಅರಮನೆ ಬಳಿ ಅಂಬಾರಿ ಹೊತ್ತ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರಾ ಬಂದು ನಿಂತವು. ಅಂಬಾರಿ ಆನೆಯನ್ನು ಕೆಎಸ್‌ಆರ್‌ಪಿ, ಸಿಎಆರ್‌, ಡಿಎಆರ್‌, ಆರ್‌ಪಿಎಫ್‌, ಅಶ್ವರೋಹಿ ದಳದ ಸಮ್ಮುಖದಲ್ಲಿ ಪೊಲೀಸ್‌ ಬ್ಯಾಂಡ್‌ ವಾದ್ಯ ಮೇಳದೊಂದಿಗೆ ಅರಮನೆ ಮುಂಭಾಗಕ್ಕೆ ಕರೆ ತರಲಾಯಿತು.

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಮನ್ಯು ಮೈಮೇಲಿದ್ದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಈ ವೇಳೆ ಆನೆಗಳು ಜಗ್ಗದೇ ನಿಲ್ಲುವ ಮೂಲಕ ಅತಿಥಿಗಳಿಗೆ ನಮಸ್ಕರಿಸಿ ಮೆರವಣಿಗೆಯಲ್ಲಿ ಸಾಗಿದವು.

ಆನೆಗಳಿಗೆ ಕಲಾವಿಂದರಿಂದ ಬಣ್ಣದ ಅಲಂಕಾರ

ದಸರಾ ಆನೆಗಳಿಗೆ ಅರಮನೆ ಆವರಣದ ಆನೆ ಬಿಡಾರದಲ್ಲಿ ಬುಧವಾರ ಮುಂಜಾನೆಯಿಂದಲೇ ಕಲಾವಿದರ ತಂಡವು ಅಲಂಕಾರ ಆರಂಭಿಸಿದರು.

9 ಆನೆಗಳಿಗೆ ವಿವಿಧ ಬಣ್ಣಗಳಿಂದ ಸೊಂಡಲು, ಕಿವಿ, ಕಣ್ಣು, ಕಾಲುಗಳ ಮೇಲೆ ಅಲಂಕಾರ ಮಾಡಿದರು. ಬಿಳಿ, ಹಳದಿ, ಹಸಿರು, ಕೆಂಪು, ಕೇಸರಿ ಸೇರಿದಂತೆ ವಿವಿಧ ಬಣ್ಣಗಳಿಂದ ಆನೆಗಳ ಸೊಂಡಲಿನ ಮೇಲೆ ಗಂಡುಭೇರುಂಡ, ಕಿವಿಯ ಮೇಲೆ ಶಂಖ, ಕಾಲುಗಳ ಮೇಲೆ ಹೂವಿನ ವಿನ್ಯಾಸವನ್ನು ಬಿಡಿಸಿದ್ದರು.

ಬಣ್ಣದ ಅಲಂಕಾರ ಮುಗಿದ ಮೇಲೆ ಆನೆಗಳ ಕಾಲಿಗೆ ಗೆಜ್ಜೆ, ಕತ್ತಿಗೆ ಗಂಟೆ ಸರ, ಮಾವಿನ ಸರ, ಅರಳಿ ಎಲೆಯ ಸರ, ಚಿನ್ನ ಲೇಪಿತ ಹಣೆ ಪಟ್ಟಿಧರಿಸಿ ಸಿಂಗಲಿಸಲಾಯಿತು. ಅಲ್ಲದೆ, ಪ್ರತಿ ಆನೆಗಳ ಮೇಲೆ ಗಾದಿ, ನಮ್ದಾ ಹಾಕಿ ಅವುಗಳ ಮೇಲೆ ವಿವಿಧ ವಿನ್ಯಾಸದ ಗಂಡುಭೇರುಂಡ ಚಿತ್ರಗಳಿರುವ ಜುಲಾ ಹೊದಿಸಲಾಯಿತು.

ಬಳಿಕ ಪ್ರತಿ ಆನೆಗಳ ಮೇಲೆ ಮಾವುತ, ವಿಶೇಷ ಮಾವುತ ಹಾಗೂ ಕಾವಾಡಿಗಳನ್ನು ನಿಯೋಜಿಸಲಾಗಿತ್ತು. ಸಮವಸ್ತ್ರ ತೊಟ್ಟಆನೆಗಳ ಮೇಲೆ ಕುಳಿತ ಮಾವುತರು ಆನೆಗಳನ್ನು ಮುನ್ನಡೆಸಿದರು. ವಿಶೇಷ ಮಾವುತರು ವಿವಿಧ ಬಣ್ಣದ ಛತ್ರಿಗಳನ್ನು ಹಿಡಿದು ಸಾಗಿದರು.

ಅರ್ಜುನ ಆನೆಗೆ ಗಂಡುಭೇರುಂಡ ನಿಶಾನೆ, ನೌಫತ್‌ ಆನೆ ಮಹೇಂದ್ರ, ಸಾಲಾನೆಯಾಗಿ ಧನಂಜಯ, ಗೋಪಾಲಸ್ವಾಮಿ, ಗೋಪಿ ಮತ್ತು ಭೀಮ ಆನೆಗಳು ಗುಲಾಬಿ ಬಣ್ಣದ ಛತ್ರಿಯೊಂದಿಗೆ ಸಾಗಿದವು.

 ಕಾಡಿನಿಂದ ಬಂದ 14 ಆನೆಗಳಲ್ಲಿ 9 ಆನೆಗಳು ಮಾತ್ರ ಭಾಗಿ

ಈ ಬಾರಿ ದಸರಾ ಮಹೋತ್ಸವಕ್ಕಾಗಿ 14 ಆನೆಗಳನ್ನು ಕಾಡಿನಿಂದ ನಾಡಿಗೆ ತರಲಾಗಿತ್ತು. ಈ ಪೈಕಿ 9 ಆನೆಗಳು ಮಾತ್ರ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಉಳಿದ 5 ಆನೆಗಳು ಗೈರಾಗಿದ್ದವು. ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಕಾವೇರಿ ಮತ್ತು ಚೈತ್ರಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಅರ್ಜುನ, ನೌಫತ್‌ ಆನೆಯಾಗಿ ಮಹೇಂದ್ರ, ಸಾಲಾನೆಯಾಗಿ ಗೋಪಾಲಸ್ವಾಮಿ, ಧನಂಜಯ, ಭೀಮ ಮತ್ತು ಗೋಪಿ ಆನೆಗಳು ಮೆರವಣಿಗೆಯಲ್ಲಿ ಸಾಗಿತು.

ಉಳಿದಂತೆ ಮರಿ ಆನೆಗೆ ಜನ್ಮ ನೀಡಿರುವ ಲಕ್ಷ್ಮಿ ಆನೆ ಸೇರಿದಂತೆ ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ ಮತ್ತು ವಿಜಯ ಆನೆಗಳು ದಸರಾ ಮೆರವಣಿಗೆಯಿಂದ ದೂರ ಉಳಿದಿದ್ದವು.