* ಯೋಜನೆಯಿಂದ ನಗರದ ಬೃಹತ್ ಅರಣ್ಯ ಸಂಪೂರ್ಣ ನಾಶ * ಸರ್ಕಾರದ ನಿರ್ಧಾರಕ್ಕೆ ಪರಿಸರವಾದಿಗಳಿಂದ ಮಾತ್ರವಲ್ಲ ಅರಣ್ಯ ಸಿಬ್ಬಂದಿಯಿಂದಲೂ ಟೀಕೆ* ನಮಗೆ ಲಾಲ್‌ಬಾಗ್/ಕಬ್ಬನ್ ಪಾರ್ಕ್ ಬೇಡ ಎಂದ ಸ್ಥಳೀಯರು
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಮಾ.16): ಅರಣ್ಯದೊಳಗೊಂದು ಕೃತಕ ಉದ್ಯಾನ(Artificial Garden) ನಿರ್ಮಿಸಿ ಸಿಲಿಕಾನ್ ಸಿಟಿಯ ಹಸಿರು ಹೊದಿಕೆ(Green Space) ಹೆಚ್ಚಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು, ಪರಿಸರವಾದಿಗಳು, ನಗರಾಭಿವೃದ್ಧಿ ತಜ್ಞರು ಮಾತ್ರವಲ್ಲ ಸ್ವತಃ ಅರಣ್ಯ ಇಲಾಖೆ(Forest Department) ಸಿಬ್ಬಂದಿಯಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬೆಂಗಳೂರು ಮಹಾನಗರ(BBMP) ವ್ಯಾಪ್ತಿ ಅಳೆದುಳಿದಿರುವ ಅರಣ್ಯ ಪ್ರದೇಶದಲ್ಲಿ ಜಾರಕಬಂಡೆ ಕಾವಲ್(Jarakbande Kaval Forest) ಪ್ರಮುಖ ಮತ್ತು 632 ಎಕರೆ ಬೃಹದಾಕಾರವಾಗಿದೆ. ಇಂತಹ ನೈಸರ್ಗಿಕ ಮೀಸಲು ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವಿಸ್ತರಣೆ, ವಾಣಿಜ್ಯ ಚಟುವಟಿಕೆ ಆರಂಭ ಹಾಗೂ ಸಿವಿಲ್ ಗುತ್ತಿಗೆದಾರರ ಅನುಕೂಲಕ್ಕಾಗಿ ಸರ್ಕಾರ ಮುಂದಾಗಿದ್ದು, ತೋಟಗಾರಿಕೆ ಇಲಾಖೆಯಿಂದ(Department of Horticulture) ಉದ್ಯಾನ ನಿರ್ಮಿಸಲಾಗುತ್ತದೆ ಎಂಬ ಚರ್ಚೆ ಕೆಲ ವರ್ಷಗಳಿಂದ ಮುಂಚೂಣಿಗೆ ಬಂದಿತ್ತು. ಈ ಬಾರಿಯ ಬಜೆಟ್‌ನಲ್ಲಿ ನಗರದ ಗ್ರೀನ್ ಸ್ಪೇಸ್ ಹೆಚ್ಚಿಸಲು ಜಾರಕಬಂಡೆ 350 ಎಕರೆ ಪ್ರದೇಶದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನ ನಿರ್ಮಿಸಲುವುದಾಗಿ ರಾಜ್ಯ ಸರ್ಕಾರ(Government of Karnataka) ಘೋಷಿಸಿದೆ. ನಗರದಲ್ಲಿ 900ಕ್ಕೂ ಹೆಚ್ಚು ಉದ್ಯಾನವಿರುವಾಗ ಅರಣ್ಯ ಹಾಳು ಮಾಡಿ ಅಲ್ಲೊಂದು ಉದ್ಯಾನ ನಿರ್ಮಿಸುವ ಸರ್ಕಾರದ ಈ ಯೋಜನೆ ವಿರೋಧ ವ್ಯಕ್ತವಾಗಿದೆ.
ಪಾರ್ಕ್‌ಗಾಗಿ ಜಾರಕಬಂಡೆ ಮೀಸಲು ಅರಣ್ಯ ಬಲಿ? : ಪರಿಸರ ಪ್ರೇಮಿಗಳ ವಿರೋಧ!
ಅರಣ್ಯದ ಕಾಲು ಭಾಗವೂ ಉಳಿಯಲ್ಲ!:
‘ಬೆಂಗಳೂರು(Bengaluru) ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಉಳಿದಿರುವ ಅರಣ್ಯ ಪ್ರದೇಶ ಶೇ.2.28ರಷ್ಟು ಮಾತ್ರ. ಅಳಿದುಳಿದ ಕಾಡುಗಳಲ್ಲಿ ಹೆಚ್ಚು ವಿಶಾಲವಾಗಿರುವುದು ಜಾರಕ ಬಂಡೆ ಕಾವಲ್ ಮೀಸಲು ಅರಣ್ಯ. 632 ಎಕರೆಯಲ್ಲಿ ಈಗಾಗಲೇ 70 ಎಕರೆ ಟ್ರೀ ಪಾರ್ಕ್ ನಿರ್ಮಿಸಿದ್ದಾರೆ. ಒಂದಿಷ್ಟು ಅರಣ್ಯ ಒತ್ತುವರಿಯಾಗಿದೆ. ಇನ್ನು ಸರ್ಕಾರದ ಉದ್ಯಾನ ನಿರ್ಮಾಣ ನಿರ್ಧಾರದಿಂದ ಶೇ.25ರಷ್ಟು ಅರಣ್ಯವು ಉಳಿಯುವುದಿಲ್ಲ. ಮಹಾನಗರದ ಜನರಿಗೆ ಶ್ವಾಸಕೋಶವಾಗಿದ್ದ ಪ್ರಮುಖ ಅರಣ್ಯವೊಂದು ಸರ್ಕಾರದ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಬಲಿಯಾಗಲಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬೆಂಗಳೂರಿನ ಯುವಜನರು ಪ್ರಶ್ನಿಸಬೇಕು. ಯೋಜನೆ ಜಾರಿಗೆ ಅವಕಾಶ ನೀಡಬಾರದು’ ಎಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಪ್ ಹೂವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಡು ಪ್ರಾಣಿಗಳ ಕತೆ ಏನು?:
‘ಈ ಅರಣ್ಯದಲ್ಲಿ(Forest) ಕಾಡು ಹಂದಿಗಳು, ನರಿಗಳು, ಮೊಲಗಳು, ಪ್ಯಾಂಗೋಲಿನ್ ಹಾಗೂ ಜಿಂಕೆಗಳಿವೆ. ಸುಮಾರು 120ಕ್ಕೂ ಹೆಚ್ಚು ಜಾತಿಯ ಪಕ್ಷಿ ಸಂಕುಲವಿದೆ. ಬೆಂಗಳೂರಿನ ಕೆರೆಗಳಿಗೆ ಹೊರರಾಜ್ಯ, ದೇಶಗಳಿಂದ ಆಗಮಿಸುವ ವಿಶಿಷ್ಟಪಕ್ಷಿಗಳು ಸಂತಾನೋತ್ಪತ್ತಿಗೆ ಈ ಅರಣ್ಯವನ್ನೇ ಅವಲಂಬಿಸಿವೆ. ಹಾವುಗಳು, ಕೀಟಗಳು, ಚಿಟ್ಟೆಗಳು, ಜೇನುನೊಣಗಳಿಂದ ಕೂಡಿರುವ ಜೀವ ವೈವಿದ್ಯತೆ ಇಲ್ಲಿದೆ ಇಲ್ಲಿವೆ. ಅವುಗಳು ಕೃತಕ ಅರಣ್ಯದಲ್ಲಿ ವಾಸಿಸಲಾರವು. ಮುಂದೆ ಅವುಗಳ ಕತೆ ಏನು?’ ಎಂದು ಪ್ರಶ್ನಿಸಿದ್ದಾರೆ ಪರಿಸರತಜ್ಞ ಯಲ್ಲಪ್ಪ.
ಗೋಮಾಳಗಳಲ್ಲಿ ಪಾರ್ಕ್ ನಿರ್ಮಿಸಲಿ:
ಒಂದೇ ಕಡೆ 350 ಎಕರೆ ಉದ್ಯಾನ ನಿರ್ಮಿಸುವ ಬದಲು ನಗರದಲ್ಲಿಯೇ ಸಾವಿರಾರು ಎಕರೆ ಗೋಮಾಳ ಜಮೀನು ಅಥವಾ ಸರ್ಕಾರಿ ಇತರೆ ಜಮೀನುಗಳಿದ್ದು ಅಲ್ಲಿ ಉದ್ಯಾನ ನಿರ್ಮಿಸಲಿ. ನೈಸರ್ಗಿಕವಾಗಿ ಬೆಳೆದಿರುವ ವನ್ಯಸಂಪತ್ತು ಹಾಳು ಮಾಡಲು ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯ ದುಂದು ವೆಚ್ಚ ಮಾಡುತ್ತಿದೆ ಎಂದು ಪರಿಸರವಾದಿಗಳು(Environmentalists) ಸರ್ಕಾರ ನಡೆಯನ್ನು ಖಂಡಿಸಿದ್ದಾರೆ.
ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್ ಎಸ್ಟೇಟ್ ಲಾಬಿ..!
ನಮಗೆ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಬೇಡ!
ಸರ್ಕಾರದ ಕ್ರಮಕ್ಕೆ ಜಾರಕಬಂಡೆ ಕಾವಲ್‌ನ ಸುತ್ತಮುತ್ತಲ ಗ್ರಾಮಗಳ ಜನರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ವನ್ಯಸಂಪತ್ತು ಇರಲಿ. ನಮಗೆ ಲಾಲ್‌ಬಾಗ್, ಕಬ್ಬನ ಪಾಕ್ ತರದ ಪಾರ್ಕ್ ಬೇಡ. ಬೃಹದಾಕಾರವಾಗಿ ಬೆಳೆದು ನಿಂತಿರುವ ಕಾಡು ಕಾಂಕ್ರೇಟಿಕರಣವಾಗುತ್ತದೆ. ಪ್ರಾಣಿಪಕ್ಷಿಗಳು ಊರಿನೊಳಗೆ ನುಗ್ಗಿ ದಾಳಿ ನಡೆಸಬಹುದು. ಹೀಗಾಗಿ, ಸರ್ಕಾರದ ಈ ನಿರ್ಧಾರದಿಂದ ದೂರ ಉಳಿಯುವುದು ಒಳಿತು. ಇಲ್ಲವಾದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಪಕ್ಷಿ ನವಿಲು ರಕ್ಷಣೆಯನ್ನೇ ಮರತಿದೆ
ಸದ್ಯ ಬೆಂಗಳೂರಿನ ಸುತ್ತಮುತ್ತ ಗೋವಿಂದಪುರ, ಕಾಡುಗೋಡಿ, ಮಂಡೂರು, ಬಿ.ಎಂ.ಕಾವಲ್, ತುರಹಳ್ಳಿ, ಮಾರಸಂದ್ರ, ಕುಂಬಾರನಹಳ್ಳಿ, ಮಾದಪ್ಪನಹಳ್ಳಿ, ದೊರೆಸಾನಿ ಪಾಳ್ಯಹಾಗೂ ಜಾರಕಬಂಡೆ ಕಾವಲ್ ಸೇರಿ 10 ಅರಣ್ಯ ಪ್ರದೇಶಗಳು ಉಳಿದುಕೊಂಡಿವೆ. ಇದರಲ್ಲಿ ಜಾರಕಬಂಡೆ ಬೃಹದಾಕಾರವಾಗಿದೆ. ಇಲ್ಲಿಯೇ ಉದ್ಯಾನ ನಿರ್ಮಿಸಿದರೆ ನಗರ ಪ್ರಮುಖ ಅರಣ್ಯವೊಂದನ್ನು ನಾಶವಾದಂತಾಗಲಿದೆ. ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ರಾಷ್ಟ್ರಪಕ್ಷಿ ನವಿಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಾರಕಬಂಡೆಯಲ್ಲಿದ್ದು, ಅವುಗಳ ರಕ್ಷಣೆಯನ್ನು ಸರ್ಕಾರ ಮರೆತಂತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅರಣ್ಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
