Detention Center: ಬೆಂಗ್ಳೂರಿನ 4 ಕಡೆ ವಿದೇಶಿಗರ ಬಂಧನ: ಸಚಿವ ಜ್ಞಾನೇಂದ್ರ
* ಬೆಂಗಳೂರಿನ 4 ಕಡೆ ಡಿಟೆನ್ಷನ್ ಸೆಂಟರ್
* ವಿದೇಶಿಗರ ಪುಂಡಾಟಿಕೆಗೆ ಬ್ರೇಕ್ ಹಾಕಲು ಕ್ರಮ
* ತಿಂಗಳೊಳಗೆ ರಾಜಧಾನಿಯಲ್ಲಿರುವ ವಿದೇಶಿಗರ ಮಾಹಿತಿ ಸಂಗ್ರಹಿಸಲು ಕ್ರಮ
ಬೆಂಗಳೂರು(ಮಾ.08): ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕೆಲವು ವಿದೇಶಿಗರಿಂದ ನಡೆಯುತ್ತಿರುವ ವಿವಿಧ ಅಪರಾಧ ಕೃತ್ಯಗಳನ್ನು ತಡೆಯಲು, ನಗರದಲ್ಲಿ ಇರುವ ವಿದೇಶಿಯರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಕ್ರಮ ಎಸಗಿದವರನ್ನು ‘ಡಿಟೆನ್ಷನ್ ಸೆಂಟರ್’ನಲ್ಲಿ ಇಡಲು ನಗರದ ನಾಲ್ಕು ಕಡೆ ಕೇಂದ್ರ ಆರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ.
ಬಿಜೆಪಿಯ(BJP) ಡಾ. ವೈ.ಎ.ನಾರಾಯಣಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಿಂದ ವಿದೇಶಿ ಪ್ರಜೆಗಳು(Foreign Citizens) ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಂಬಂಧ 296 ಪ್ರಕರಣಗಳನ್ನು ದಾಖಲಿಸಿದ್ದು, 441 ವಿದೇಶಿಗರ ವಿರುದ್ಧ ಕ್ರಮ ಜರುಗಿಸಲಾಗಿದೆ. ಪ್ರಕರಣ ಇತ್ಯರ್ಥವಾಗುವ ತನಕ ಅವರು ಸಂಬಂಧ ಪಟ್ಟ ಇಲಾಖೆಯಿಂದ ನಿರ್ಗಮನ ಪರವಾನಗಿ ಪಡೆಯುವವರೆಗೆ ಅವರನ್ನು ‘ಡಿಟೆನ್ಷನ್ ಸೆಂಟರ್’ನಲ್ಲಿ(Detention Center) ಇಡಲಾಗುವುದು, ಪ್ರಕರಣ ಇತ್ಯರ್ಥದ ನಂತರ ವಿದೇಶಿ ಪ್ರಜೆಯನ್ನು ಗಡಿಪಾರು ಮಾಡಲಾಗುವುದು ಎಂದು ಹೇಳಿದರು.
Hindu Activist Murder: ಪೊಲೀಸರು ಎಸಗಿರುವ ಆರೋಪದ ಬಗ್ಗೆಯೂ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ!
ಪತ್ತೆಗೆ ಕ್ರಮ:
ಬೆಂಗಳೂರು ನಗರದಲ್ಲಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 672 ಜನ ಅಕ್ರಮ ವಿದೇಶಿ ಪ್ರಜೆಗಳು ವಾಸವಾಗಿರುವ ಬಗ್ಗೆ ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಜೊತೆಗೆ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ವಿಭಾಗೀಯ ಉಪ ಪೊಲೀಸ್ ಆಯುಕ್ತರಿಗೆ ಕಳುಹಿಸಿ, ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಮತ್ತು ಅವಧಿ ಮೀರಿ ವಾಸವಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಲು ಠಾಣೆಗಳಿಂದ ನುರಿತ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಧರ್ಮ ಛತ್ರ ಆಗಲು ಬಿಡಲ್ಲ:
ಶಿಕ್ಷಣ, ವ್ಯಾಪಾರದ ಹೆಸರಿನಲ್ಲಿ ಬರುವ ವಿದೇಶಿಗರಿಗೆ ರಾಜ್ಯವನ್ನು ಧರ್ಮಛತ್ರ ಮಾಡಲು ಬಿಡುವುದಿಲ್ಲ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಅವಧಿ ಮುಗಿದಿರುವ, ಕಾನೂನು ಬಾಹಿರವಾಗಿ ವಾಸ ಮಾಡುವವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲಾಗುವುದು. ವಿಶೇಷವಾಗಿ ಬಾಂಗ್ಲಾ(Bangaldesh) ದೇಶಿಗರು ನಕಲಿ ಮತದಾರರ ಚೀಟಿ ಇತ್ಯಾದಿ ಪಡೆದುಕೊಂಡು ಪಶ್ಚಿಮ ಬಂಗಾಲದ ಮೂಲಕ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಸಹಕರಿಸಬೇಕಾಗುತ್ತದೆ ಎಂದರು.
Hijab Row: ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು: ಸಚಿವ ಜ್ಞಾನೇಂದ್ರ
ಇದಕ್ಕೂ ಮುನ್ನ ಮಾತನಾಡಿದ ನಾರಾಯಣಸ್ವಾಮಿ, ಕಳೆದ 10 ವರ್ಷಗಳಿಂದ ಎಲ್ಲ ಸರ್ಕಾರಗಳು ಅಕ್ರಮವಾಸಿ ವಿದೇಶಿಗರನ್ನು ನಿಗ್ರಹಿಸಲು ವಿಫಲವಾಗಿದೆ. ಡ್ರಗ್ಸ್ ಮಾರಾಟ, ವೇಶ್ಯಾವಾಟಿಕೆ, ಸ್ಥಳೀಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇವರನ್ನು ನಿಯಂತ್ರಣ ಮಾಡದಿದ್ದರೆ ಬೆಂಗಳೂರು ಡ್ರಗ್ಸ್ ಸಿಟಿ ಆಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿಯ ಭಾರತಿ ಶೆಟ್ಟಿ, ಕಾಂಗ್ರೆಸ್ ಸದಸ್ಯ ಗೋವಿಂದರಾಜ ಅವರು ಬೆಂಗಳೂರು ಸೇರಿದಂತೆ ಹುಬ್ಬಳ್ಳಿ, ಮಂಗಳೂರು ಮುಂತಾದ ನಗರಗಳಲ್ಲಿ ವಿದೇಶಿಯರ ಹಾವಳಿ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
SDPI, PFI ನಿಷೇಧ ಪ್ರಸ್ತಾಪ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಶಿರಸಿ: ಎಸ್‌ಡಿಪಿಐ (SDPI), ಪಿಎಫ್‌ಐ (PFU) ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹಿಂದೂಪರ ಸಂಘಟನೆಗಳ ಒತ್ತಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ನಿಷೇಧಿಸಿದರೆ ಅವರು ಬೇರೆ ಹೆಸರಿನ ಸಂಘಟನೆ ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಅವರ ಕಾರ್ಯ ಚಟುವಟಿಕೆ ಬಗ್ಗೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ ನಿಷೇಧಿಸುವುದಾದರೆ ಆ ಕೆಲಸವನ್ನು ಕೇಂದ್ರ ಮಾಡಬೇಕು. ಕೆಲವು ರಾಜ್ಯಗಳು ತಾವೇ ಮುಂದಾಗಿ ನಿಷೇಧಿಸಿವೆಯಾದರೂ ಕರ್ನಾಟಕದಲ್ಲಿ ನಿಷೇಧಿಸುವ ಪ್ರಸ್ತಾಪ ಇಲ್ಲ. ಅವರ ಕಾರ್ಯ ಚಟುವಟಿಕೆಯ ವರದಿಯನ್ನು ನಿರಂತರವಾಗಿ ಕೇಂದ್ರಕ್ಕೆ ಸಲ್ಲಿಸುತ್ತಿದ್ದೇವೆ ಎಂದರು.