ಹುಬ್ಬಳ್ಳಿ: FMCG ಕಾರ್ಖಾನೆ ಪ್ರಾರಂಭಕ್ಕೆ ಸನ್ನಿಹಿತ, ನಿರುದ್ಯೋಗ ಸಮಸ್ಯೆ ನಿವಾರಣೆ
ಧಾರವಾಡದ ಮಮ್ಮಿಗಟ್ಟಿಯಲ್ಲಿ 500 ಎಕರೆ ಮೀಸಲು| ಎಫ್‌ಎಂಸಿಜಿ ಘಟಕ ಬಂದರೆ ಕನಿಷ್ಠವೆಂದರೂ 10 ಸಾವಿರ ಜನರಿಗೆ ಪ್ರಾರಂಭದಲ್ಲೇ ಉದ್ಯೋಗ| ವರ್ಷದಿಂದ ವರ್ಷಕ್ಕೆ ಉದ್ಯೋಗದ ಪ್ರಮಾಣ ಹೆಚ್ಚಾಗಯಾಗಲಿದೆ| ಎಫ್‌ಎಂಸಿಜಿ ಘಟಕ ಪ್ರಾರಂಭವಾಗುವ ಕಾಲ ಸನ್ನಿಹಿತವಾಗಿರುವುದಂತೂ ಸತ್ಯ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.29): ಬಹು ನಿರೀಕ್ಷಿತ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜುಮರ್ಸ್ ಗೂಡ್ಸ್) ತಯಾರಿಕಾ ಕ್ಲಸ್ಟರ್ ಪ್ರಾಾರಂಭಕ್ಕೆ ಕಾಲ ಸನ್ನಿಹಿತವಾಗಿದೆ. ಸರ್ಕಾರದ ಮಟ್ಟದಲ್ಲಿ ಈಗಾಗಲೇ ಒಂದು ಬಾರಿ ಮಾತುಕತೆಯೂ ಆಗಿದೆ. ಕೊರೋನಾ ಹಾವಳಿ ಕೊಂಚ ತಗ್ಗಿದ ಬಳಿಕ ಈ ನಿಟ್ಟಿನಲ್ಲಿ ಅಂತಿಮ ಹಂತಕ್ಕೆ ತಲುಪುವ ಸಾಧ್ಯತೆ ಇದೆ.
ಫಾಸ್ಟ್ ಮೂವಿಂಗ್ ಕಂಜುಮರ್ಸ್ ಗೂಡ್ಸ್ ಎಂದರೆ ಪೇಸ್ಟ್, ಉಜಾಲಾ, ಸೋಪು, ಸೇರಿದಂತೆ ದಿನನಿತ್ಯ ಗ್ರಾಹಕರಿಗೆ ಬೇಕಾಗುವ ಅಗತ್ಯ ವಸ್ತುಗಳು. ಇವುಗಳನ್ನು ಸದ್ಯ ಗುವಾಹಟಿಯಿಂದಲೇ ತರಿಸಲಾಗುತ್ತದೆ. 15-20 ತಯಾರಿಕಾ ಘಟಕಗಳು ಬರುತ್ತವೆ. ಎಲ್ಲವನ್ನು ಸೇರಿ ಕ್ಲಸ್ಟರ್ ಎಂದು ಕರೆಯಲಾಗುತ್ತದೆ. ಈ ರೀತಿ ಮಾಡುವುದರಿಂದ ಇಲ್ಲಿನ ಗ್ರಾಹಕರು ಬಳಸುವ ವಸ್ತುಗಳನ್ನು ಇಲ್ಲಿಂದಲೇ ಪೂರೈಸಬಹುದು. ಇದರಿಂದ ಅವುಗಳ ದರವೂ ಕಡಿಮೆಯಾಗುತ್ತದೆ. ಸ್ಥಳೀಯರಿಗೆ ನೌಕರಿ ಕೊಡುವುದರಿಂದ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗುತ್ತದೆ. ಈ ರೀತಿ ಕ್ಲಸ್ಟರ್ ಸ್ಥಾಪಿಸಬೇಕೆಂಬುದು ಇಲ್ಲಿನ ಉದ್ಯಮಿಗಳ ಹಾಗೂ ಯುವ ಸಮೂಹದ ಬೇಡಿಕೆಯಾಗಿತ್ತು.
ಲಾಕ್‌ಡೌನ್ ಎಫೆಕ್ಟ್: ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಸಂಕಷ್ಟದಲ್ಲಿ ಅಲೆಮಾರಿ ಕುಟುಂಬ
ಸಮಾವೇಶದಲ್ಲಿ ಪ್ರಸ್ತಾಪವಿಲ್ಲ:
ಹಾಗೆ ನೋಡಿದರೆ ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ ಸಮಾವೇಶದಲ್ಲೂ ಎಫ್‌ಎಂಸಿಜಿ ಬಗ್ಗೆ ಯಾವುದೇ ಒಪ್ಪಂದ ಆಗಿರಲಿಲ್ಲ. ಒಂದೇ ಸೂರಿನಡಿ ಬಹಳಷ್ಟು ಕೈಗಾರಿಕೆಗಳು ಬರುವ ಕಾರಣ ಎಲ್ಲ ಉದ್ಯಮಿಗಳೊಂದಿಗೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿತ್ತು. ಸಮಾವೇಶದ ಬಳಿಕ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಜ್ಯೋತಿ ಲ್ಯಾಬ್‌ನ ಉಲ್ಲಾಸ ಕಾಮತ್ ಸೇರಿದಂತೆ ಹಲವರು ಸಭೆಯನ್ನೂ ನಡೆಸಿದ್ದುಂಟು. ಆ ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕೂಡ ಪಾಲ್ಗೊಂಡಿದ್ದರು. ಅಲ್ಲಿ ಎಫ್‌ಎಂಸಿಜಿ ಘಟಕ ಪ್ರಾಾರಂಭಿಸಲು ಕೈಗಾರಿಕಾ ಕ್ಲಸ್ಟರ್ ಘಟಕವನ್ನು ಧಾರವಾಡ ಜಿಲ್ಲೆಯಲ್ಲಿ ಸ್ಥಾಾಪಿಸಲು ಉದ್ಯಮಿಗಳು ಆಸಕ್ತಿ ತೋರಿದ್ದಾಾರೆ. ಅಷ್ಟರೊಳಗೆ ಕೊರೋನಾ ಲಾಕ್‌ಡೌನ್ ಶುರುವಾಯಿತು. ಹೀಗಾಗಿ ಮುಂದಿನ ಕೆಲಸಗಳು ಅಷ್ಟಕ್ಕೆ ಸ್ಥಗಿತಗೊಂಡಿದ್ದವು. ಇದೀಗ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿರುವ ಕಾರಣ ಮತ್ತೆ ಘಟಕ ಸ್ಥಾಪನೆಯ ಕೆಲಸಗಳು ಸಣ್ಣದಾಗಿ ಇಲಾಖೆ ಮಟ್ಟದಲ್ಲಿ ಪ್ರಾರಂಭವಾಗಿವೆ.
500 ಎಕರೆ ಮೀಸಲು:
ಇದಕ್ಕಾಗಿ ಧಾರವಾಡದ ಮಮ್ಮಿಗಟ್ಟಿಯಲ್ಲಿ 500 ಎಕರೆ ಗುರುತಿಸಲಾಗಿದೆ. ಆ ಜಾಗವನ್ನು ಉದ್ಯಮಿಗಳು ನೋಡಿಕೊಂಡು ಹೋಗಿದ್ದುಂಟು. ಇದೀಗ ಜೂನ್- ಜುಲೈನಲ್ಲಿ ಕೊರೋನಾ ಹಾವಳಿ ಕೊಂಚ ಶಾಂತವಾಗುವ ಸಾಧ್ಯತೆ ಇದೆ. ಆಗ ಈ ಬಗ್ಗೆ ಇನ್ನೊಂದು ಸಲ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಎಫ್‌ಎಂಸಿಜಿ ಘಟಕ ಬಂದರೆ ಕನಿಷ್ಠವೆಂದರೂ 10 ಸಾವಿರ ಜನರಿಗೆ ಪ್ರಾರಂಭದಲ್ಲೇ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹಾಗೇ ವರ್ಷದಿಂದ ವರ್ಷಕ್ಕೆ ಉದ್ಯೋಗದ ಪ್ರಮಾಣ ಜಾಸ್ತಿಯಾಗಲಿದೆ ಎಂದು ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ ಎಫ್‌ಎಂಸಿಜಿ ಘಟಕ ಪ್ರಾಾರಂಭವಾಗುವ ಕಾಲ ಸನ್ನಿಹಿತವಾಗಿರುವುದಂತೂ ಸತ್ಯ.
ಎಫ್‌ಎಂಸಿಜಿ ಪ್ರಾಾರಂಭಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕೊರೋನಾದಿಂದ ಕೊಂಚ ಹಿನ್ನಡೆಯಾಗಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗುತ್ತಿದೆ. ಎಫ್‌ಎಂಸಿಜಿ ಪ್ರಾರಂಭಕ್ಕೆ ಬೇಕಾದ 500 ಎಕರೆ ಜಮೀನು ನೀಡಲು ಸರ್ಕಾರ ಸಿದ್ಧವಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಎಫ್‌ಎಂಸಿಜಿ ಘಟಕ ಸ್ಥಾಪನೆ ನೂರಕ್ಕೆ ನೂರರಷ್ಟು ಖಚಿತ. ಕೊರೋನಾದಿಂದ ಕೊಂಚ ತಡವಾಗಿದೆ ಅಷ್ಟೇ. ಜೂನ್ ಅಂತ್ಯಕ್ಕೆ ಈ ನಿಟ್ಟಿನಲ್ಲಿ ಅಂತಿಮ ರೂಪ ದೊರೆಯಲಿದೆ. ಇದು ಪ್ರಾರಂಭವಾದರೆ ನಿರುದ್ಯೋಗ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ನಿವಾರಣೆಯಾಗಲಿದೆ ಎಂದು ಜ್ಯೋತಿ ಲ್ಯಾಬ್‌ನ ಮುಖ್ಯಸ್ಥ ಉಲ್ಲಾಸ ಕಾಮತ್ ಅವರು ಹೇಳಿದ್ದಾರೆ.
ಎಫ್‌ಎಂಸಿಜಿ ಕೈಗಾರಿಕೆ ಕ್ಲಸ್ಟರ್ ತೆರೆಯಲು ಧಾರವಾಡದಲ್ಲಿ ಅತ್ಯುತ್ತಮ ವಾತಾವರಣವಿದೆ. ಇದಕ್ಕಾಗಿ ಮಮ್ಮಿಗಟ್ಟಿಯಲ್ಲಿ 500 ಎಕರೆ ಜಮೀನನ್ನು ಗುರುತಿಸಲಾಗಿದೆ. ಇದು ಬಂದರೆ ಸಾಕಷ್ಟು ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮ್ಮಕ್ಕನವರ ಅವರು ಹೇಳಿದ್ದಾರೆ.