Asianet Suvarna News Asianet Suvarna News

Bengaluru: ದಸರಾ ಹಬ್ಬಕ್ಕೆ ಹೂ ದರ ಏರಿಕೆ: ತರಕಾರಿ ದರ ಯಥಾಸ್ಥಿತಿ

ನಗರದ ಮಾರುಕಟ್ಟೆಗಳಲ್ಲಿ ದಸರಾ ಹಬ್ಬದ ಖರೀದಿ ಜೋರಾಗಿದ್ದು, ಶನಿವಾರ ಮಳೆಯ ನಡುವೆಯೂ ವ್ಯಾಪಾರ ಭರದಿಂದ ನಡೆಯಿತು. ಮಳೆಯಿಂದ ಗ್ರಾಹಕರಿಗೆ ಹೂವಿನ ಬೆಲೆ ಏರಿಕೆ ಬಿಸಿ ತಗುಲಿದ್ದು, ಹಣ್ಣು ತರಕಾರಿ ದರ ಯಥಾಸ್ಥಿತಿಯಲ್ಲಿರುವುದು ತುಸು ಸಮಾಧಾನ ನೀಡಿದೆ. 

Flowers Price Hike amid Dasara Festival in Bengaluru gvd
Author
First Published Oct 2, 2022, 7:45 AM IST

ಬೆಂಗಳೂರು (ಅ.02): ನಗರದ ಮಾರುಕಟ್ಟೆಗಳಲ್ಲಿ ದಸರಾ ಹಬ್ಬದ ಖರೀದಿ ಜೋರಾಗಿದ್ದು, ಶನಿವಾರ ಮಳೆಯ ನಡುವೆಯೂ ವ್ಯಾಪಾರ ಭರದಿಂದ ನಡೆಯಿತು. ಮಳೆಯಿಂದ ಗ್ರಾಹಕರಿಗೆ ಹೂವಿನ ಬೆಲೆ ಏರಿಕೆ ಬಿಸಿ ತಗುಲಿದ್ದು, ಹಣ್ಣು ತರಕಾರಿ ದರ ಯಥಾಸ್ಥಿತಿಯಲ್ಲಿರುವುದು ತುಸು ಸಮಾಧಾನ ನೀಡಿದೆ. ಮಂಗಳವಾರ (ಅ.4) ಆಯುಧ ಪೂಜೆ ಮತ್ತು ಬುಧವಾರ ವಿಜಯದಶಮಿ (ಅ.5) ಹಿನ್ನೆಲೆಯಲ್ಲಿ ಹಬ್ಬದ ದಿನ ದರ ಏರಿಕೆ ಬಿಸಿಯಿಂದ ಪಾರಾಗಲು ಶನಿವಾರದಿಂದಲೇ ಹೂ, ಹಣ್ಣು ಹಾಗೂ ತರಕಾರಿ ಖರೀದಿಗೆ ಜನ ಮುಂದಾಗಿದ್ದರು. 

ಸರ್ಕಾರಿ ರಜೆ ಇರುವುದರಿಂದ ಬಹುತೇಕ ಕಚೇರಿ, ಕಾಲೇಜುಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿಗಳಲ್ಲಿ ಸೋಮವಾರವೇ ಆಯುಧ ಪೂಜೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ನಗರದ ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿಬಜಾರ್‌, ಮಡಿವಾಳ, ಚಿಕ್ಕಪೇಟೆ, ಜಯನಗರ, ಶಿವಾಜಿ ನಗರ ಮಾರುಕಟ್ಟೆಯಲ್ಲಿ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಎತ್ತ ಕಣ್ಣಾಡಿಸಿದರೂ ಬೂದಕುಂಬಳ ಕಾಯಿ, ಬಾಳೆ ಕಂಬಗಳೇ ರಾರಾಜಿಸುತ್ತಿವೆ. ದಿನವಿಡೀ ಸುರಿಯುತ್ತಿರುವ ಸೋನೆ ಮಳೆಯ ನಡುವೆಯೂ ಮಾರುಕಟ್ಟೆಗಳಲ್ಲಿ ಛತ್ರಿ ಹಿಡಿದುಕೊಂಡು ಜನರು ಖರೀದಿಯಲ್ಲಿ ತೊಡಗಿದ್ದರು.

Bengaluru: ದಸರಾ ರಜೆಗಾಗಿ ಊರಿಗೆ ಹೊರಟ ಜನ: ಟ್ರಾಫಿಕ್‌ ಜಾಂ

ಕನಕಾಂಬರ ಮಾರು 500: ಗಣೇಶ ಹಬ್ಬ ಮತ್ತು ಕಳೆದ ವಾರಗಳಿಗೆ ಹೋಲಿಸಿದರೆ ಹೂವಿನ ದರ ಭಾರೀ ಹೆಚ್ಚಳವಾಗಿದೆ. ಕಳೆದ ವಾರ ಒಂದು ಮಾರು ಕನಕಾಂಬರಕ್ಕೆ .150ರಿಂದ .200 ಇದ್ದದ್ದು ಈಗ 500ರಿಂದ 550 ತಲುಪಿದೆ. ವಾಹನ ಪೂಜೆ ಹಿನ್ನೆಲೆಯಲ್ಲಿ ಸೇವಂತಿ ಮತ್ತು ಚಂಡು ಹೂವಿಗೆ ಸಾಕಷ್ಟುಬೇಡಿಕೆ ಇದ್ದು, ಇವುಗಳ ದರ ಕೂಡಾ ದುಪ್ಪಟ್ಟಾಗಿದೆ. ತಮಿಳುನಾಡಿನಿಂದ ಬರುವ ಮಲ್ಲಿಗೆ, ಮಾರಿಗೋಲ್ಡ್‌, ಸೇವಂತಿಗೆ, ಐಸ್‌ಬರ್ನ್‌ ಸೇವಂತಿಗೆ ದರ ಸ್ವಲ್ಪ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಮಳೆಯ ಹಿನ್ನೆಲೆಯಲ್ಲಿ ಹೂವಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ, ಹೂವಿನ ದರ ದುಪ್ಪಟ್ಟಾಗಿದೆ ಎನ್ನುತ್ತಾರೆ ಕೆ.ಆರ್‌.ಮಾರುಕಟ್ಟೆಹೂವಿನ ವ್ಯಾಪಾರಿ ವೇಣು.

ದಾಖಲೆ ದರಕ್ಕೆ ಬೂದುಗುಂಬಳ: ಆಯುಧ ಪೂಜೆ ದಿನ ಅಂಗಡಿ, ಮನೆ, ವಾಹನಗಳು, ಕಚೇರಿಗಳು, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳದ ದರ ಈ ಬಾರಿ ಗಗನಕ್ಕೇರಿದೆ. ಸಗಟು ದರದಲ್ಲಿ ಕೆ.ಜಿ.ಗೆ 25-30 ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆ.ಜಿ. 40 ಇದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. 32 ಇದೆ. ಇನ್ನು ಪ್ರತಿ ವರ್ಷ ದಸರಾ ಸಮಯದಲ್ಲಿ ಕೇಜಿಗೆ 18-20 ಇದ್ದದ್ದು, ಈ ಬಾರಿ ದುಪ್ಪಟ್ಟು ದರ ಏರಿಕೆಯಾಗಿ ದಾಖಲೆ ತಲುಪಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಇಡೀ ಕಾಯಿಯನ್ನು ಗಾತ್ರದ ಆಧಾರದಲ್ಲಿ 100-150, ದೊಡ್ಡ ಕಾಯಿ .200-250 ಮಾರಾಟ ಮಾಡಲಾಗುತ್ತಿದೆ. ನಿರಂತರ ಮಳೆಯಿಂದಾಗಿ ಬೆಳೆ ಹಾಳಾಗಿ ತಮಿಳುನಾಡು, ಆಂಧ್ರಪ್ರದೇಶದಿಂದ ಕಡಿಮೆ ಪ್ರಮಾಣದ ದಾಸ್ತಾನು ಬಂದಿದ್ದು, ಬೆಲೆ ಏರಿಕೆಯಾಗಿದೆ.

ಪ್ರಮುಖ ವೃತ್ತ ರಸ್ತೆಗಳಲ್ಲಿ ತಲೆ ಎತ್ತಿದ ಮಾರುಕಟ್ಟೆಗಳು: ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ನಗರದ ಬನಶಂಕರಿ, ಬಸವನಗುಡಿ, ಹೆಬ್ಬಾಳ, ಮಲ್ಲೇಶ್ವರ, ಕುಮಾರಸ್ವಾಮಿ ಲೇಔಟ್‌, ರಾಜಾಜಿ ನಗರ, ಮಹಾಲಕ್ಷ್ಮಿ ಲೇಔಟ್‌ ಗಾಯಿತ್ರಿ ನಗರ ಸೇರಿದಂತೆ ಪ್ರಮುಖ ಬಡಾವಣೆಗಳ ರಸ್ತೆಗಳು, ವೃತ್ತಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳ ತಲೆ ಎತ್ತಿವೆ. ಫ್ಲೈಓವರ್‌, ಮೆಟ್ರೋ ಸೇತುವೆ ಕೆಳಭಾಗ, ಪಾದಾಚಾರಿ ಮಾರ್ಗಗಳಲ್ಲಿ ಗ್ರಾಮಾಂತರ ಭಾಗಗಳಿಂದ ರೈತರು, ವ್ಯಾಪಾರಿಗಳ ಬಂದು ಬಾಳೆಕಂಬ, ಮಾವಿನಸೊಪ್ಪು, ಹೂವು, ಹಣ್ಣನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿತು.

ದಸರಾ ಬಳಿಕ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಗರ್ಜನೆ: ಬಿಬಿಎಂಪಿ ಸ್ಪಷ್ಟನೆ

ಹಣ್ಣುಗಳ ದರ (ಪ್ರತಿ ಒಂದು ಕೆ.​ಜಿ.​​)
ದಾಳಿಂಬೆ 150-200
ಸೇಬು 100-120
ಏಲಕ್ಕಿ ಬಾಳೆಹಣ್ಣು 80
ಪಚ್ಚಬಾಳೆ 40
ಅನಾನಸ್‌ 50
ಕಿತ್ತಲೆ 60
ಸೀಬೆ​ಹಣ್ಣು 50

ಹೂವು ದರ (ಪ್ರತಿ ಮಾರು)
ಮಲ್ಲಿಗೆ ಹೂವು 200
ಸೇವಂತಿಗೆ 200
ಚೆಂಡು ಹೂವು 100
ಕನಕಾಂಬರ 500
ಸುಗಂಧ ರಾಜ ಹೂವು 250 (ಕೆ.ಜಿ)
ಕಾಕಡ 800 (ಕೆ.ಜಿ)

Follow Us:
Download App:
  • android
  • ios