Asianet Suvarna News Asianet Suvarna News

Bengaluru: ದಸರಾ ರಜೆಗಾಗಿ ಊರಿಗೆ ಹೊರಟ ಜನ: ಟ್ರಾಫಿಕ್‌ ಜಾಂ

ದಸರಾ ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಶನಿವಾರ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯದ ಇತರೆ ನಗರಗಳು ಹಾಗೂ ಹೊರ ರಾಜ್ಯಕ್ಕೆ ತೆರಳಲು ಬಂದ ಪರಿಣಾಮ ನಗರದ ಬಸ್‌, ರೈಲು ನಿಲ್ದಾಣವಿರುವ ಮೆಜೆಸ್ಟಿಕ್‌ ಪ್ರದೇಶ ಹಾಗೂ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

Dasara Festival Effect Traffic Jam In Bengaluru gvd
Author
First Published Oct 2, 2022, 6:20 AM IST

ಬೆಂಗಳೂರು (ಅ.02): ದಸರಾ ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಶನಿವಾರ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯದ ಇತರೆ ನಗರಗಳು ಹಾಗೂ ಹೊರ ರಾಜ್ಯಕ್ಕೆ ತೆರಳಲು ಬಂದ ಪರಿಣಾಮ ನಗರದ ಬಸ್‌, ರೈಲು ನಿಲ್ದಾಣವಿರುವ ಮೆಜೆಸ್ಟಿಕ್‌ ಪ್ರದೇಶ ಹಾಗೂ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ಜನಸಂದಣಿಯ ವೇಳೆಯೇ ಮಳೆಯೂ ಆಗಿದ್ದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹದಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕೊಂಚವೇ ಏರಿಕೆಯಾಯಿತು. ರಾತ್ರಿ 10ರ ವೇಳೆಗೆ ಮೈಸೂರು, ತುಮಕೂರು ಹಾಗೂ ಬಳ್ಳಾರಿ, ಹೊಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಮಂದಗತಿಯಲ್ಲಿ ಸಾಗಿದವು. ಇದೇ ವೇಳೆ ನಗರದ ಹಲವೆಡೆ ಮಳೆಯೂ ಸುರಿದ ಪರಿಣಾಮ ವಾಹನ ಸವಾರು ಹೈರಾಣಾದರು.

Mysuru Dasara: ಟಾಂಗಾ ಸವಾರಿಯಲ್ಲಿ ಮಿಂಚಿದ 42 ಜೋಡಿಗಳು..!

ಮಧ್ಯಾಹ್ನದಿಂದಲೇ ನಗರದ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ, ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ನೆರೆದಿದ್ದರು. ಸಂಜೆ ವೇಳೆಗೆ ತಂಡೋಪತಂಡವಾಗಿ ಬಸ್‌ ಹಾಗೂ ರೈಲು ನಿಲ್ದಾಣದತ್ತ ಧಾವಿಸಿದ್ದ ಸಾರ್ವಜನಿಕರು, ತಮ್ಮ ಬಸ್‌, ರೈಲು ಹೊರಡುವುದನ್ನೇ ಕಾಯುತ್ತಿದ್ದರು. ಒಂದೆಡೆ ಮಳೆ ಹಾಗೂ ಮತ್ತೊಂದೆಡೆ ವಾಹನ ಸಂಚಾರ ದಟ್ಟಣೆಯಿಂದ ಮೆಜೆಸ್ಟಿಕ್‌ ಸುತ್ತಮುತ್ತಲ ರಸ್ತೆಗಳಲ್ಲಿ ಸವಾರರು ಕೆಲ ಕಾಲ ಪಡಿಪಾಟಲುಪಟ್ಟರು.

ಏಕಕಾಲಕ್ಕೆ ನಗರದ ಹಲವೆಡೆ ಮಳೆ ಸುರಿದಿದ್ದರಿಂದ ವಿವಿಧ ಸ್ಥಳಗಳಿಂದ ಮೆಜೆಸ್ಟಿಕ್‌ ಪ್ರದೇಶಕ್ಕೆ ಬರುವವರು ತೊಂದರೆ ಅನುಭವಿಸಿದರು. ಬಿಎಂಟಿಸಿ ಬಸ್‌ಗಳು, ಮೆಟ್ರೊ ರೈಲು, ಆಟೋ, ಓಲಾ-ಉಬರ್‌ ಟ್ಯಾಕ್ಸಿಗಳು, ಬಾಡಿಗೆ ಬೈಕ್‌ಗಳಲ್ಲಿ ಬಸ್‌ ನಿಲ್ದಾಣ ತಲುಪಿದರು. ಒಂದೆಡೆ ಪ್ರಯಾಣಿಕರ ದಟ್ಟಣೆ ಮತ್ತೊಂದೆಡೆ ವಾಹನಗಳ ದಟ್ಟಣೆ ನಿಯಂತ್ರಿಸುವಲ್ಲಿ ಸಂಚಾರ ಪೊಲೀಸರು ಹರಸಾಹಸಪಟ್ಟರು.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ದೂರದ ಜಿಲ್ಲೆಗಳ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇನ್ನು ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತೆಲಂಗಾಣದ ವಿವಿಧ ನಗರಗಳಿಗೆ ಹೆಚ್ಚಿನ ಮಂದಿ ಪ್ರಯಾಣಿಸಿದರು. ಕೆಎಸ್‌ಆರ್‌ಟಿಸಿಯ ನಾಲ್ಕು ಟರ್ಮಿನಲ್‌ಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು.

ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..!

ಪ್ರಯಾಣಿಕರಿಂದ ತುಂಬಿ ತುಳುಕಿದ ಮೆಜೆಸ್ಟಿಕ್‌: ಬಿಎಂಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೆಟ್ರೊ ರೈಲು ನಿಲ್ದಾಣಗಳಲ್ಲೂ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು. ಹಬ್ಬದ ರಜೆಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಬಸ್‌ಗಳು ಭರ್ತಿಯಾಗಿದ್ದವು. ನಗರದ ಮೌರ್ಯ ವೃತ್ತ, ಆನಂದ ರಾವ್‌ ವೃತ್ತ, ರೇಸ್‌ಕೋರ್ಸ್‌ ರಸ್ತೆಗಳಿಂದ ಹೊರಡುವ ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರು ತಮ್ಮ ಊರುಗಳತ್ತ ಪ್ರಯಾಣಿಸಿದರು. ನಗರದ ಹೊರವಲಯದ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಸಂಚಾರ ನಿರ್ವಹಿಸಲು ಸುಸ್ತಾದರು.

Follow Us:
Download App:
  • android
  • ios