Kodagu: ಹೂವಿನಲ್ಲಿ ಅರಳಿದ ದೇವಾಲಯ, ರಾಷ್ಟ್ರಧ್ವಜ: ಹಣ್ಣು ತರಕಾರಿಗಳಲ್ಲಿ ಮೂಡಿದ ಅಪ್ಪು, ಅಂಬೇಡ್ಕರ್!
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ರಾಜಾಸೀಟು ಅಂದರೆ ಪ್ರವಾಸಿಗರ ಅಚ್ಚುಮೆಚ್ಚು. ಈ ಪ್ರವಾಸಿ ತಾಣದಲ್ಲಿ ನಿಂತು ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳುವುದೆಂದರೆ ಅಂದೆತಹ ಆನಂದ ಗೊತ್ತಾ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.26): ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ರಾಜಾಸೀಟು ಅಂದರೆ ಪ್ರವಾಸಿಗರ ಅಚ್ಚುಮೆಚ್ಚು. ಈ ಪ್ರವಾಸಿ ತಾಣದಲ್ಲಿ ನಿಂತು ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳುವುದೆಂದರೆ ಅಂದೆತಹ ಆನಂದ ಗೊತ್ತಾ. ಆದರೆ ಆ ಪ್ರಾಕೃತಿಕ ಸೌಂದರ್ಯದ ತಾಣದಲ್ಲಿ ಈಗ ಹೂವಿನ ಲೋಕವೇ ಸೃಷ್ಟಿಯಾಗಿದೆ. ಹೌದು ಗಣರಾಜ್ಯೋತ್ಸವದ ಅಂಗವಾಗಿ ಮಡಿಕೇರಿಯ ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಕಣ್ಮನ ಸೆಳೆಯುತ್ತಿದೆ. 8 ಲಕ್ಷಕ್ಕೂ ಹೆಚ್ಚು ಹೂಗಳನ್ನು ಬಳಸಿ ಅಂದರೆ ಬರೋಬ್ಬರಿ 4 ಟನ್ ಹೂವುಗಳನ್ನು ಬಳಸಿ ವಿವಿಧ ಮಾದರಿಗಳನ್ನು ಮಾಡಲಾಗಿದೆ.
ಕೊಡಗಿನ ಕುಲದೇವರಾದ ಪಾಡಿ ಇಗ್ಗುತ್ತಪ್ಪ ದೇವಾಲಯದ ಪ್ರತಿಕೃತಿಯನ್ನು ಹೂವಿನಿಂದಲೇ ಮಾಡಿದ್ದು ಎಲ್ಲರ ಕಣ್ಮನಗಳನ್ನು ಕೋರೈಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಇರುವ ಈ ದೇವಾಲಯದ ಯತಾವತ್ ತದ್ರೂಪ ಇದಾಗಿದ್ದು ದೇವಾಲಯದ ಒಳಗೆ ಶಿವಲಿಂಗವನ್ನೂ ಇರಿಸಲಾಗಿದೆ. ದೇವಾಲಯದ ಎದುರಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುಷ್ಪಗಳಿಂದಲೇ ರಾಷ್ಟ್ರದ ತ್ರಿವರ್ಣ ಧ್ವಜ, ಹಾಗೆಯೇ ಫಿರಂಗಿ, ಬಿಂದಿಗೆಯಲ್ಲಿ ತುಂಬಿ ಹರಿಯುವ ಕಾವೇರಿ ಎಲ್ಲವೂ ನೋಡುಗರನ್ನು ಚಿತ್ತಾಕರ್ಷಗೊಳಿಸುತ್ತಿವೆ. ಹಾಗೆಯೇ ಮಕ್ಕಳಿಗಾಗಿ ಛೋಟಾ ಭೀಮ್ ಸೆಲ್ಫಿ ಸ್ಪಾಟ್ಗಳಿದ್ದು, ಪುಟ್ಟ ಮಕ್ಕಳಷ್ಟೇ ಅಲ್ಲ ದೊಡ್ಡವರೂ ಅವುಗಳಲ್ಲಿ ನಿಂತು ಫೋಸುಕೊಟ್ಟು ಫೋಟೋ ತೆಗಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಕೆಡಿಪಿ ಸಭೆ: ಸಚಿವ ಜಮೀರ್ ಅಹ್ಮದ್
ಜೊತೆಗೆ ಬಾರ್ಬಿಗೆ ಹೂಗಳ ಡ್ರೆಸ್ ತೊಡಿಸಲಾಗಿದೆ. ಇವೆಲ್ಲವುಗಳಿಗಿಂತ ತ್ರಿವರ್ಣ ಧ್ವಜದ ಸೆಲ್ಫಿಸ್ಪಾಟ್ಗಳು ಎಲ್ಲರನ್ನು ಕೈಬೀಸಿ ಕರೆಯುತ್ತಿವೆ. ಮೂರು ಬಣ್ಣಗಳಿಂದ ಕಂಗೊಳಿಸುತ್ತಿರುವ ಇವುಗಳ ಬಳಿ ನಿಂತು ರಾಜಾಸೀಟಿಗೆ ಹೋಗುವ ಪ್ರತಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ಮುಂದೆ ಹೋಗುತ್ತಿಲ್ಲ. ಅಷ್ಟರ ಮಟ್ಟಿಗೆ ಇವು ಎಲ್ಲರನ್ನು ಆಕರ್ಷಿಸುತ್ತಿವೆ. ಇದರ ಜೊತೆಗೆ ಐ ಲವ್ ರಾಜಾಸೀಟ್ ಸೆಲ್ಫಿಸ್ಪಾಟ್ ಕೂಡ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಇನ್ನು ಹಣ್ಣು, ತರಕಾರಿಗಳನ್ನು ಬಳಸಿ ಹಲವಾರು ಪ್ರತಿಕೃತಿ ಹಾಗೂ ಕೆತ್ತನೆಗಳನ್ನು ಮಾಡಲಾಗಿದ್ದು ಎಲ್ಲರೂ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಲ್ಲಂಗಡಿಯಲ್ಲಿ ಮೂಡಿರುವ ಅಪ್ಪು, ಗಾನಗಂಧರ್ವ ಡಾ. ರಾಜಕುಮಾರ್, ರೆಬೆಲ್ ಸ್ಟಾರ್ ಅಂಬರೀಷ್, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್, ಸೇನೆಯ ಮೊದಲ ಮಹಾದಂಡ ನಾಯಕ ಜನರಲ್ ತಿಮ್ಮಯ್ಯ ಗೀಗೆ ಒಂದೊಂದು ಆಕೃತಿಗಳು ಎಲ್ಲರ ಕಣ್ಣು ಕೋರೈಸುತ್ತಿವೆ. ಬದನೆ ಕಾಯಿಯನ್ನು ಬಳಸಿ ನವಿಲು, ಕುಂಬಳಕಾಯಿ ಬಳಸಿ ಶಿವಲಿಂಗ, ಮನಮೋಹಕ ಮೀನು ಹೀಗೆ ಒಂದೊಂದು ಕೆತ್ತನೆಗಳು ನೋಡುಗರ ಕಣ್ಮನಗಳನ್ನು ಕೋರೈಸುತ್ತಿವೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಕೊಡಗು ಉಸ್ತುವಾರಿ ಸಚಿವ ಭೋಸರಾಜ್, ಮಡಿಕೇರಿ ಶಾಸಕ ಮಂತರ್ ಗೌಡ ಉದ್ಘಾಟಿಸಿದರು. ಪಾಡಿ ಇಗ್ಗುತ್ತಪ್ಪ ಮಾದರಿಯ ಪುಷ್ಟದ ದೇವಾಲಯದ ಒಳಗೆ ಇರಿಸಿರುವ ಶಿವನ ಲಿಂಗಕ್ಕೆ ಪುಷ್ಪಾರ್ಚನೆ ಮಾಡಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಲೋಕಸಭೆ ಸಂದರ್ಭದಲ್ಲಿ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ ಬೆಳವಣಿಗೆ ಸರಿಯಲ್ಲ: ಜನಾರ್ದನ ಪೂಜಾರಿ
ಬಳಿಕ ರಾಷ್ಟ್ರದ ತ್ರಿವರ್ಣ ಧ್ವಜದ ಬಳಿ ನಿಂತು ಸಚಿವರು, ಶಾಸಕರು, ಜಿಲ್ಲಾಧಿಕಾರಿ ವೆಂಕಟರಾಜಾ, ಎಸ್ಪಿ ಕೆ.ರಾಮರಾಜನ್ ಸೇರಿದಂತೆ ಅಧಿಕಾರಿಗಳು ಫೋಟೋ ತೆಗೆಸಿಕೊಂಡರು. ನಂತರ ಮಾತನಾಡಿದ ಸಚಿವ ಭೋಸರಾಜ್ ಇಂತಹ ಫಲಪುಷ್ಪ ಪ್ರದರ್ಶನಗಳು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲ ಅನುಕೂಲವಾಗಿದೆ. ಇದನ್ನು ಇನ್ನಷ್ಟು ಆಕರ್ಷಕವಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಶಿಕ್ಷಕಿಯೊಬ್ಬರು ಕೊಡಗಿನ ಕುಲದೇವರು ಇಗ್ಗುತ್ತಪ್ಪ ದೇವಾಲಯವನ್ನು ಮಾಡಿರುವುದು ಸಂತಸ ತಂದಿದೆ. ಎಲ್ಲವೂ ಸಾಕಷ್ಟು ಆಕರ್ಷಕವಾಗಿದ್ದು ನೋಡಿ ಖುಷಿಯಾಗಿದೆ ಎಂದಿದ್ದಾರೆ.