ಬೆಂಗಳೂರು [ಜ.13]:  ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ನಗರದ ಮಾರುಕಟ್ಟೆಕಳೆಕಟ್ಟಿದ್ದು, ಹಬ್ಬಕ್ಕೆ ಅಗತ್ಯವಾದ ಪದಾರ್ಥಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.

ಸಂಕ್ರಾಂತಿ ಹಬ್ಬಕ್ಕೆ ಅಗತ್ಯವಾಗಿರುವ ಅವರೆಕಾಯಿ, ಗೆಣಸು, ಕಡಲೇಕಾಯಿ, ಕಬ್ಬು, ಎಳ್ಳು-ಬೆಲ್ಲಗಳ ಮಿಶ್ರಣ, ಸಕ್ಕರೆ ಅಚ್ಚು, ಸೇರಿದಂತೆ ನಾನಾ ವಸ್ತುಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಿದ್ದು, ಭಾನುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯಿತು. ಕಡಲೆಬೀಜ, ಕೊಬ್ಬರಿ, ಎಳ್ಳು ಇತ್ಯಾದಿಗಳ ದರದಲ್ಲಿ ಶೇ.10ರಿಂದ 15ರಷ್ಟುಇಳಿಕೆಯಾಗಿದೆ. ನಗರದ ವಿವಿಧ ಮಾರುಕಟ್ಟೆಗಳು, ಹಲವು ಪ್ರಮುಖ ರಸ್ತೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.

ಸುಗ್ಗಿ ಹಬ್ಬ ಸಂಕ್ರಾಂತಿಗಾಗಿ ಎಲ್ಲೆಡೆ ರಾಶಿ ರಾಶಿ ಕಪ್ಪು ಮತ್ತು ಬಿಳಿಯ ಕಬ್ಬು, ಮಾವಿನಸೊಪ್ಪಿನ ಮಾರಾಟ ಭರ್ಜರಿಯಾಗಿದೆ. ಎಳ್ಳು ಬೀರುವ ಮಣ್ಣಿನ ಕುಡಿಕೆಗಳು ಸೇರಿದಂತೆ ನಾನಾ ವಿನ್ಯಾಸದ ಬಾಕ್ಸ್‌ಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಸಿದ್ಧ ಎಳ್ಳು-ಬೆಲ್ಲ ಮಿಶ್ರಣ, ಬಣ್ಣ ಬಣ್ಣದ ಸಕ್ಕರೆ ಅಚ್ಚು ಭರ್ಜರಿ ಮಾರಾಟವಾಗುತ್ತಿವೆ. ತಾವರೆ ಒಂದಕ್ಕೆ .30, ಗರಿಕೆ, ಬಿಳಿ ಎಕ್ಕ 10 ರು., ಮರಗ ಹಾಗೂ ವನ 30 ರು., ತುಳಸಿ ಮಾಲೆ ನಾಟಿ 30 ರು. ರಿಂದ 60, ಮಾವಿನ ಸೊಪ್ಪು 20 ರು., ಬೇವು ಕಟ್ಟು 10-20 ರು. ಬೆಲೆ ಇದೆ.

ಕೆ.ಆರ್‌.ಮಾರುಕಟ್ಟೆ, ಜಯನಗರ, ಗಾಂ​ಧಿಬಜಾರ್‌, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಕೆಂಗೇರಿ ಉಪನಗರ, ಮಡಿವಾಳ ಹೀಗೆ ನಗರದ ಬಹುತೇಕ ಬಡಾವಣೆಗಳಲ್ಲಿ ಸಿದ್ಧ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಮಾರಾಟಕ್ಕೆಂದೇ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ಇದಲ್ಲದೆ ಪ್ರಾವಿಷನ್‌ ಸ್ಟೋರ್‌ ಮತ್ತಿತರ ಮಳಿಗೆಗಳಲ್ಲೂ ಮಾರಾಟವಾಗುತ್ತಿವೆ. ಆರೋಗ್ಯಕ್ಕೆ ಹಾನಿಕಾರವಾದ ಬಣ್ಣದ ಸಕ್ಕರೆ ಅಚ್ಚುಗಳ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಆದರೂ ಕೆ.ಆರ್‌.ಮಾರುಕಟ್ಟೆಸೇರಿದಂತೆ ವಿವಿಧೆಡೆ ಪ್ರತಿ ವರ್ಷದಂತೆ ಈ ವರ್ಷವೂ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.

ಕಬ್ಬು ಪ್ರತಿ ಜಲ್ಲೆಗೆ 50-60 ರು., ವೀಳ್ಯೆದೆಲೆ ಕಟ್ಟು 20-30 ರು., ಕೊಬ್ಬರಿ ಬೆಲೆ ಕೆ.ಜಿ.ಗೆ 400-450 ರು., ಆರು ಗೇಣು ಕಬ್ಬು 20 ರು., ಚಿಕ್ಕದು 20 ರು.ರಿಂದ 10 ರು., ಸಗಟು ಮಾರುಕಟ್ಟೆಯಲ್ಲಿ ಮಿಶ್ರಣ ಎಳ್ಳುಬೆಲ್ಲ ಪ್ಯಾಕ್‌ ಕೆ.ಜಿ. 250 ರು., ಎಳ್ಳು ಕೆ.ಜಿ. 170-260 ರು., 4 ಅಚ್ಚು ಬೆಲ್ಲ 20 ರು., ಜೀರಿಗೆ ಮಿಠಾಯಿ 100 ಗ್ರಾಂ 20 ರು., ಸಕ್ಕರೆ ಅಚ್ಚು ಕೆ.ಜಿ. 80-100 ರು., ಕಪ್ಪು ಎಳ್ಳು 200-250 ರು., ಬಣ್ಣದ ಕುಡಿಕೆ ಒಂದಕ್ಕೆ 20-50 ರು.ಕ್ಕೆ ಮಾರಾಟವಾಗುತ್ತಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಬೆಲೆ ಕಡಿಮೆಯೇ ಇದೆ ಎಂದು ಕೆ.ಆರ್‌.ಮಾರುಕಟ್ಟೆಯ ವ್ಯಾಪಾರಿ ಶಾರದಮ್ಮ ತಿಳಿಸಿದರು.

ತರಕಾರಿ ಬೆಲೆಯಲ್ಲಿ ಸ್ಥಿರತೆ!

ಕಳೆದ ಎರಡು ವಾರಗಳಿಂದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಈರುಳ್ಳಿ, ಟೊಮಟೋ, ಹಣ್ಣುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳು ಕೆ.ಜಿ.ಗೆ 20 ರಿಂದ 60 ರು. ಒಳಗೆ ಖರೀದಿಯಾಗುತ್ತಿವೆ. ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಕೆ.ಜಿ.ಗೆ 40-50 ರು. ನಿಗದಿಯಾಗಿದೆ. ಕೆಲ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೀಸ್ಸ್‌, ಹೀರೇಕಾಯಿ, ಹಾಗಲಕಾಯಿ ಬೆಲೆ ತುಸು ಹೆಚ್ಚಿದ್ದು, ಕೆ.ಜಿ. 60 ರು.ಗೆ ಮಾರಾಟ ಮಾಡಲಾಗುತ್ತಿದೆ. ರೈತರು, ವ್ಯಾಪಾರಿಗಳಿಗೆ ಹಬ್ಬದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಲಾಭ ದೊರೆಯುತ್ತದೆ. ಹಾಗಾಗಿ ಸ್ವಲ್ಪಮಟ್ಟಿಗೆ ದರ ಹೆಚ್ಚಿಸಿ ಮಾರಾಟ ಮಾಡಲಾಗುತ್ತದೆ ಎಂದು ಕೆ.ಆರ್‌.ಮಾರುಕಟ್ಟೆವ್ಯಾಪಾರಿಯೊಬ್ಬರು ತಿಳಿಸಿದರು.

 ಹೂವಿನ ಬೆಲೆ ಕುಸಿತ

ಹಬ್ಬಕ್ಕೆ ಮೂರು ದಿನ ಬಾಕಿ ಇದ್ದಂತೆಯೇ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿದಿದೆ. ಈ ಬಾರಿ ಹೂವಿನ ಇಳುವರಿ ಉತ್ತಮವಾಗಿದ್ದರೂ ಧಾರಣೆ ಇಳಿಕೆಯಾಗಿದೆ. ಇತರೆ ಹಬ್ಬಗಳಲ್ಲಿ ದರ ಏರಿಕೆ ಕಾಣುತ್ತಿದ್ದ ಸೇವಂತಿ, ಸುಗಂಧರಾಜ, ರೋಸ್‌, ಮಲ್ಲಿಗೆಗೆ ಬೇಡಿಕೆ ಇಲ್ಲವಾಗಿದೆ. ಸೇವಂತಿ ಕೆ.ಜಿ. 40-50 ರು., ರೋಸ್‌ ಕೆ.ಜಿ. 100 ರು., ಕನಕಾಂಬರ ಕೆ.ಜಿ. 400 ರು., ದುಂಡು ಮಲ್ಲಿಗೆ ಕೆ.ಜಿ. 1500-1400 ರು., ಕಾಕಡ ಕೆ.ಜಿ. 500 ರು., ಸುಗಂಧರಾಜ ಕೆ.ಜಿ. 60 ರು.ಕ್ಕೆ ಮಾರಾಟವಾಗುತ್ತಿವೆ. ದುಂಡು ಮಲ್ಲಿಗೆ ಸೀಸನ್‌ ಅಲ್ಲವಾದ್ದರಿಂದ ಬೆಲೆ ದುಬಾರಿಯಾಗಿದೆ.

ರೈತರಿಗೆ ಬಂಪರ್ : ಈರುಳ್ಳಿ ಆಯ್ತು ಈಗ ಮೆಣಸಿಗೆ ಭಾರಿ ಬೆಲೆ...

ಸೇವಂತಿ ಹೂವು ಬೆಂಗಳೂರು ಸುತ್ತಮುತ್ತ, ತಮಿಳುನಾಡು, ಆಂಧ್ರಪ್ರದೇಶದಿಂದ ಸರಬರಾಜಾಗುತ್ತದೆ. ತಮಿಳುನಾಡು, ಗೌರಿಬಿದನೂರಿನಿಂದ ಕನಕಾಂಬರ, ದುಂಡು ಮಲ್ಲಿಗೆ, ಸುಗಂಧರಾಜ ಬರುತ್ತದೆ. ಈ ಹಬ್ಬಕ್ಕೆ ಹೆಚ್ಚು ಹೂವಿನ ವ್ಯಾಪಾರ ಇರುವುದಿಲ್ಲ. ಹಬ್ಬದ ಹಿಂದಿನ ದಿನ ಸ್ವಲ್ಪಮಟ್ಟಿಗೆ ವ್ಯಾಪಾರವಾಗುತ್ತದೆ ಎಂದು ಕೆ.ಆರ್‌.ಮಾರುಕಟ್ಟೆಹೂವಿನ ವ್ಯಾಪಾರಿ ದಿವಾಕರ್‌ ತಿಳಿಸಿದರು.