ಮಂಗಳೂರು(ಸೆ. 26): ಬೆಳ್ತಂಗಡಿ ತಾಲೂಕಿನಲ್ಲಿ ಬುಧವಾರ ಸಂಜೆಯ ವೇಳೆ ಸುರಿದ ಭಾರೀ ಮಳೆಗೆ ಹಲವೆಡೆ ಮತ್ತೊಮ್ಮೆ ಹಾನಿಯಾಗಿದ್ದು, ಜನರು ಸುರಕ್ಷಿತವಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಪ್ರವಾಹಕ್ಕೊಳಗಾಗಿದ್ದ ತಾಲೂಕಿನ ದಿಡುಪೆ ಹಾಗೂ ಚಾರ್ಮಾಡಿಯಲ್ಲಿ ಬುಧವಾರ ನದಿಗಳ ಮಟ್ಟಒಮ್ಮೇಲೆ ಏರಿಕೆಯಾಗಿದ್ದು ತೋಟಗಳಿಗೆ ಮತ್ತೆ ನೀರು ನುಗ್ಗಿದೆ.

ದಿಡುಪೆ ಪರಿಸರದಲ್ಲಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಆದರೆ ಎಲ್ಲಿಯೂ ಮನೆಗಳಿಗೆ ನೀರು ನುಗ್ಗಿಲ್ಲ, ಯಾವುದೇ ಅಪಾಯದ ಸ್ಥಿತಿಯಿಲ್ಲ. ಸಂಜೆ 4 ಗಂಟೆಯ ಸುಮಾರಿಗೆ ತಾಲೂಕಿನಲ್ಲಿ ಮಳೆ ಸಣ್ಣ ಮಟ್ಟದಲ್ಲಿ ಆರಂಭವಾಗಿತ್ತು. ಆದರೆ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ಏಕಾಏಕಿಯಾಗಿ ನದಿಗಳಲ್ಲಿ ನೀರಿನ ಮಟ್ಟಏರಿಕೆಯಾಗಿದೆ.

ದರಸಾ ಪ್ರಯುಕ್ತ ಬೆಂಗಳೂರು- ಮಂಗಳೂರು ವಿಶೇಷ ರೈಲು

ದಿಡುಪೆ ಸೇತುವೆಯ ಸಮೀಪ ಹಾಗೂ ಕುಕ್ಕಾವು ಸೇತುವೆಯ ಸಮೀಪ ನದಿ ನೀರು ಹಿಂದಿನ ಪ್ರವಾಹವನು ್ನನೆನಪಿಸುವ ರೀತಿಯಲ್ಲಿ ಉಕ್ಕಿ ಹರಿದಿದೆ. ಏಳುವರೆಹಳ್ಳ, ಕೂಡುಬೆಟ್ಟು ಹಳ್ಳಗಳು ತುಂಬಿ ಹರಿದಿದೆ. ಮತ್ತೊಂದೆಡೆ ದಿಡುಪೆಯಲ್ಲಿ ಆನಡ್ಕಹಳ್ಳ ಹಾಗೂ ಸಿಂಗನಾರು ಹಳ್ಳಗಳು ದಡ ಮೀರಿ ಹರಿದಿದೆ. ಬಾಳೆಹಿತ್ತಿಲು, ನೆಕ್ಕಿಲು, ಪುಣ್ಕೆದಡಿ,ದಡ್ಡುಗದ್ದೆ, ತೆಂಗೆತ್ತಮಾರು ಎಂಬಲ್ಲಿ ನದಿ ಬದಿಯ ತೋಟಗಳಿಗೆ ನೀರು ನುಗ್ಗಿದೆ.

ದುರಸ್ತಿ ಪಡಿಸಿದ್ದ ರಸ್ತೆಗಳು ಮತ್ತೆ ಹಾಳು:

ದಿಡುಪೆಯಲ್ಲಿ ಹಾಗೂ ಕುಕ್ಕಾವಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿ ಹಾನಿಗೀಡಾಗಿದ್ದ ರಸ್ತೆಗಳನ್ನು ಇದೀಗ ತಾನೆ ಮಣ್ಣು ಹಾಕಿ ಮರು ನಿರ್ಮಿಸಲಾಗಿತ್ತು. ಈ ರಸ್ತೆಗಳು ಇದೀಗ ಬಹುತೇಕ ನೀರಿನಲ್ಲಿ ಕೊಚ್ಚಿ ಹೋಗಿವೆ. ನದಿ ಕೊರತಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ನದಿ ಬದಿಯಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಮತ್ತೆ ಕೊಚ್ಚಿ ಹೋಗಿವೆ.

ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

ಚಾರ್ಮಾಡಿಯಲ್ಲಿ ಮೃತ್ಯುಂಜಯ ನದಿ ನೋಡ ನೋಡುತ್ತಿದ್ದಂತೆಯೇ ದಡಮೀರಿ ಹರಿದಿದ್ದು ನದಿ ದಡದಲ್ಲಿರುವ ಪರ್ಲಾನಿ, ಅಂತರ, ಕೊಳಂಬೆ ಪ್ರದೇಶಗಳಲ್ಲಿ ನದಿ ನೀರು ತೋಟಗಳಿಗೆ ನುಗ್ಗಿದೆ. ಆದರೆ ಮನೆಗಳಿಗೆ ಯಾವುದೇ ಹಾನಿಗಳಾಗಿಲ್ಲ. ನೀರು ಏರುತ್ತಿರುವುದನ್ನು ನೋಡಿ ಜನರು ಮತ್ತೆ ಪ್ರವಾಹದ ಭಯದಲ್ಲಿ ಮನೆಗಳಿಂದ ಹೊರಗೆ ಬಂದಿದ್ದರು. ಆದರೆ ನಿಧಾನವಾಗಿ ನದಿ ನೀರು ಇಳಿಯಲಾರಂಭಿಸಿದೆ. ರಾತ್ರಿಯ ವೇಳೆ ಈ ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿದ್ದು ಜನರಲ್ಲಿ ಭಯ ಮೂಡಲು ಕಾರಣವಾಗಿದೆ.

ಮರಳು ತುಂಬಿರುವುದೇ ಪ್ರವಾಹಕ್ಕೆ ಕಾರಣ:

ಇದೀಗ ಮಳೆ ಆರಂಭವಾದ ಕೂಡಲೇ ನದಿ ದಡದಲ್ಲಿ ವಾಸಿಸುತ್ತಿರುವ ಜನತೆ ಭಯದಿಂದಲೇ ಇರುವಂತಾಗಿದೆ. ಪ್ರವಾಹದಲ್ಲಿ ಕೊಚ್ಚಿ ಬಂದ ಮರಳು ಕಲ್ಲುಗಳು ಹಾಗೂ ಮರಗಳಿಂದಾಗಿ ಬಹುತೇಕ ನದಿಗಳು ಹೂಳಿನಿಂದ ತುಂಬಿವೆ. ಕಿಂಡಿ ಅಣೆಕಟ್ಟುಗಳು ಹಾಗೂ ಕಿರು ಸೇತುವೆಗಳ ಸಮೀಪವೂ ಹೂಳು ತುಂಬಿಕೊಂಡಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲವಾಗಿದೆ. ನದಿಗಳಲ್ಲಿನ ಬಹುತೇಕ ಹೊಂಡಗಳು ತುಂಬಿದೆ. ನೀರು ನೇರವಾಗಿ ದಡಮೀರಿ ಹರಿಯುತ್ತಿದೆ. ನದಿಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸದಿದ್ದರೆ ಪ್ರತಿ ಮಳೆಗೂ ಇದೇ ರೀತಿಯ ಪ್ರವಾಹದ ಭೀತಿಯನ್ನು ಎದುರಿಸಬೇಕಾಗುತ್ತದೆ. ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿನ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಗುಡ್ಡ ಕುಸಿತವಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ